ADVERTISEMENT

ವಸತಿ ಯೋಜನೆ ಕುಂಠಿತ: ಸಚಿವ ಕಾರಜೋಳ ತರಾಟೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 10:35 IST
Last Updated 10 ಜನವರಿ 2012, 10:35 IST

ಬಾಗಲಕೋಟೆ: ಜಿಲ್ಲೆಯಲ್ಲಿ ವಸತಿ, ಕುಡಿಯುವ ನೀರು ಸರಬರಾಜು ಮತ್ತು ಸರ್ವಶಿಕ್ಷಣ ಅಭಿಯಾನ ಯೋಜನೆ ಪ್ರಗತಿ ಕುಂಠಿತ ವಾಗಿರುವುದಕ್ಕೆ ಅಸಮಾದಾನಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ತಿಂಗಳೊಳಗೆ ನಿಗದಿತ ಗುರಿ ಸಾಧಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದರು.

ನವನಗರದ ಜಿಲ್ಲಾ ಪಂಚಾಯಿತಿ ಸಭಾಂಗಣ ದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಸತಿ ಯೋಜನೆಯಡಿ ಜಿಲ್ಲೆಗೆ ಪ್ರಸಕ್ತ ವರ್ಷ 32,192 ಮನೆಗಳು ಮಂಜೂರಾಗಿದ್ದು, ಅದರಲ್ಲಿ 12,498 ಮನೆಗಳು ಮಾತ್ರ ನಿರ್ಮಾಣವಾಗಿದೆ, ಯೋಜನೆಗೆ ಒಟ್ಟು ರೂ. 87 ಕೊಟಿ ಬಿಡುಗಡೆಯಾಗಿದ್ದು, ಅದರಲ್ಲಿ ಕೇವಲ ರೂ.24 ಕೋಟಿ ಮಾತ್ರ ಬಳಕೆ ಮಾಡಲಾಗಿದೆ, ಪ್ರಗತಿ ತೃಪ್ತಿದಾಯಕವಾಗಿಲ್ಲದ ಕಾರಣ ಮುಂದಿನ ತಿಂಗಳ ಅಂತ್ಯದೊಳಗೆ ನಿಗದಿತ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ವಸತಿ ಯೋಜನೆಯಡಿ 11,342 ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿ ನಡೆಯುತ್ತಿದೆ. ನಿವೇಶನ ಸಮಸ್ಯೆ ಮತ್ತು ಫಲಾನುಭವಿಗಳ ನೋಂದಣಿ ಆಗದ ಹಿನ್ನೆಲೆಯಲ್ಲಿ 8352 ಮನೆಗಳ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭವೇ ಆಗಿಲ್ಲ ಎಂದ ಅವರು, ತಕ್ಷಣ ವಸತಿ ಯೋಜನೆಯನ್ನು ಪ್ರಾರಂಭಿಸಲು ಸೂಚನೆ ನೀಡಿದರು.

ಕುಡಿಯುವ ನೀರು ಯೋಜನೆ: ಕಡಿಯುವ ನೀರು ಯೋಜನೆಯ ಪ್ರಗತಿಯೂ ಆಶಾದಾಯಕವಾಗಿಲ್ಲ ಎಂದ ಸಚಿವರು, ಕೇವಲ ಶೇ. 45 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ, ಮಾರ್ಚ್ ಒಳಗೆ ನಿಗದಿತ ಗುರಿ ತಲುಪುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಆಸರೆ ಯೋಜನೆ:
ನೆರೆ ಸಂತ್ರಸ್ತ 16 ಗ್ರಾಮಗಳಲ್ಲಿ 4634 ಮನೆಗಳ ನಿರ್ಮಾಣವಾಗಿದ್ದು, ಹಸ್ತಾಂತರಕ್ಕೆ ಸಿದ್ಧವಾಗಿದೆ. ಶೀಘ್ರದಲ್ಲೇ ಮನೆಗಳನ್ನು ಸಂತ್ರಸ್ತರಿಗೆ ಹಂಚಿಕೆ ಮಾಡಲಾಗುತ್ತದೆ ಎಂದರು.

ಬರಗಾಲ: ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಜಿಲ್ಲೆಯ 93 ಗ್ರಾಮ ಪಂಚಾಯಿತಿಯಲ್ಲಿ ರೂ. 13 ಕೋಟಿ ವೆಚ್ಚದಲ್ಲಿ 5735 ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಲಾಗಿದೆ. ಅದರಲ್ಲಿ ಈಗಾಗಲೇ ರೂ. 3.24 ಕೋಟಿ ಮಾತ್ರ ಖರ್ಚು ಮಾಡಲಾಗಿದೆ, ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗಾಗಿ ರೂ. 2.10ಕೋಟಿ ಬಿಡುಗಡೆಯಾಗಿದೆ, ಜಿಲ್ಲೆಯ 276 ಕೊಳವೆ ಬಾವಿಗಳನ್ನು (ಬಾದಾಮಿ-30, ಹುನಗುಂದ-57, ಮುಧೋಳ-52, ಜಮಖಂಡಿ-100, ಬೀಳಗಿ-40 ಮತ್ತು ಬಾಗಲಕೋಟೆ-36) ಪುನಶ್ಚೇತನಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಅಲ್ಲದೇ ಅಗತ್ಯವಿರುವಲ್ಲಿ ಹೊಸ ಕೊಳವೆ ಬಾವಿ ನಿರ್ಮಿಸಲು ಪ್ರತೀ ತಾಲ್ಲೂಕಿಗೆ ರೂ. 25 ಲಕ್ಷ ನೀಡಲು ಗ್ರಾಮೀಣಾಭಿವೃದ್ಧಿ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.

ಸರ್ವ ಶಿಕ್ಷಣ ಅಭಿಯಾನ: ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ 2010-11ನೇ ಸಾಲಿನಲ್ಲಿ 240 ಶಾಲಾ ಕೊಠಡಿ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗಿದೆ, ಆದರೆ ನಿರೀಕ್ಷಿತ ಪ್ರಗತಿಯಾಗಿಲ್ಲದ ಕಾರಣ ಒಂದು ತಿಂಗಳ ಕಾಲಾವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಯಿತು.

ಜಿಲ್ಲೆಯಲ್ಲಿ ಅನರ್ಹರು ಮತ್ತು ಎರಡೆರಡು ಪಡಿತರ ಚೀಟಿ ಹೊಂದಿರುವವರನ್ನು ಗುರುತಿಸಿ 6 ಸಾವಿರ ಪಡಿತರ ಚೀಟಿಯನ್ನು ರದ್ದುಪಡಿಸಲಾಗಿದೆ. ಅಲ್ಲದೇ 22,565 ಹೊಸ ಅರ್ಜಿಗಳು ಬಂದಿದ್ದು, ಅರ್ಹರಿಗೆ ನೀಡಲು ಸೂಚನೆ ನೀಡಲಾಗಿದೆ ಎಂದರು.

ಕೆರೆ ಹೂಳೆತ್ತಲು ಪ್ರತಿ ಮತಕ್ಷೇತ್ರ ವ್ಯಾಪ್ತಿಗೆ ರೂ. 5 ಲಕ್ಷ ನೀಡಲಾಗಿದೆ. ಜಿಲ್ಲೆಯಲ್ಲಿ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ, ಉಳಿದ ಹಣದಲ್ಲಿ ಹೊಸ ಕಾಮಗಾರಿ ಕೈಗೊಳ್ಳಲು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಿಇಒ ಎಸ್.ಜಿ.ಪಾಟೀಲ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಸಂಸದ ಪಿ.ಸಿ.ಗದ್ದಿಗೌಡರ, ಜಿ.ಪಂ.ಅಧ್ಯಕ್ಷೆ ಕವಿತಾ ದಡ್ಡೇನವರ, ಉಪಾಧ್ಯಕ್ಷ ಹೂವಪ್ಪ ರಾಠೋಡ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.