ಮುಚಖಂಡಿ(ಬಾಗಲಕೋಟೆ): ಶ್ರಾವಣ ಮಾಸದ ಕೊನೆಯ ಮಂಗಳವಾರ ನಡೆಯಲಿರುವ ಸುಕ್ಷೇತ್ರ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ಅಗ್ಗಿ ಉತ್ಸವದ ಸಿದ್ಧತೆ ಪೂರ್ಣಗೊಂಡಿದೆ.
ಮುಚಖಂಡಿ ವೀರಭದ್ರೇಶ್ವರ ಅಗ್ಗಿ ಉತ್ಸವ ಎಂದರೆ ಸುತ್ತಮುತ್ತಲಿನ ಊರುಗಳಲ್ಲಿನ ಭಕ್ತರಿಗೆ ದೊಡ್ಡ ಹಬ್ಬವಾಗಿ ಪರಿಣಮಿಸಿದೆ. ಈಗಾಗಲೇ ದೇಗುಲದಲ್ಲಿ ದೀಪಗಳ ಅಲಂಕಾರ, ಬಣ್ಣ ಹಚ್ಚುವ ಕೆಲಸ, ದೇವಸ್ಥಾನದ ಸುತ್ತ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ.
ಎರಡು ಗುಡ್ಡಗಳ ನಡುವಿನ ಹಚ್ಚಹಸಿರಿನ ಸ್ವಚ್ಚ-ಸುಂದರ ಪ್ರಕೃತಿ ತಾಣದಲ್ಲಿ ನೆಲೆನಿಂತಿರುವ ವೀರಭದ್ರೇಶ್ವರ ದೇವಸ್ಥಾನವೂ ಕರ್ನಾಟಕವಲ್ಲದೇ ಬೇರೆ-ಬೇರೆ ರಾಜ್ಯಗಳಲ್ಲಿ ತನ್ನ ಭಕ್ತ ಸಮೂಹವನ್ನು ಹೊಂದಿದೆ.
ಪಲ್ಲಕ್ಕಿ ಉತ್ಸವ: ಅಗ್ಗಿ ಉತ್ಸವಕ್ಕೂ ಮುನ್ನ ಚಿಕ್ಕರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ದೇವಸ್ಥಾನದ ಆವರಣದಿಂದ ಆರಂಭಗೊಂಡು ನಂತರ ಗ್ರಾಮದ ಅಗಸಿ ಬಾಗಿಲವರೆಗೆ ಜರುಗಲಿದೆ. ಗ್ರಾಮದ ಪ್ರತಿಯೊಬ್ಬರು ರಥೋತ್ಸವ ಮತ್ತು ಅಗ್ಗಿ ಉತ್ಸವದ ಸಂದರ್ಭದಲ್ಲಿ ಪಾಲ್ಗೊಂಡು ಜಾತ್ರೆ ಆಚರಿಸುತ್ತಾರೆ. ಮುಂದೆ ರಥ ಹೊರಡುತ್ತಿದ್ದಾರೆ.ಹಿಂದೆ ಮುತ್ತೈದೆಯರು ಆರತಿಯೊಂದಿಗೆ ಶಿಸ್ತು ಬದ್ಧವಾಗಿ ಬರುತ್ತಾರೆ.
ಭಕ್ತರ ಸಾಗರ: ಶ್ರಾವಣ ಮಾಸದ ಪ್ರತಿ ಮಂಗಳವಾರ ಬಾಗಲಕೋಟೆ, ವೀರಾಪುರ, ಮುರನಾಳ, ಕದಾಂಪುರ, ನವನಗರ, ಸೂಳಿಕೇರಿ, ಮುಚಖಂಡಿ ಎಲ್.ಟಿ, ಗದ್ದನಕೇರಿ ಮತ್ತಿತರ ಗ್ರಾಮಗಳಿಂದ ಬೆಳಗಿನ ಜಾವವೇ ಭಕ್ತರು ಕಾಲ್ನಡಿಗೆಯಲ್ಲಿ ಬಂದು ವೀರಭದ್ರೇಶ್ವರ ದರ್ಶನ ಪಡೆಯುತ್ತಿದ್ದಾರೆ.
ಭಕ್ತರು ಜಾತ್ರೆಯ ವೇಳೆ ಪುರವಂತರೊಂದಿಗೆ ಶಸ್ತ್ರಗಳನ್ನು ತಮ್ಮ ದೇಹದಲ್ಲಿಹಾಕಿಸಿಕೊಳ್ಳುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವುದು ರೂಢಿಯಲ್ಲಿದೆ.ನಂತರ ಸಂಜೆ 5 ಘಂಟೆಗೆ ದೇವಸ್ಥಾನದ ಆವರಣದಲ್ಲಿ ಅಗ್ಗಿ ಉತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಚಿಕ್ಕವರನ್ನು ಹಿಡಿದುಕೊಂಡು ದೊಡ್ಡವರಾದಿಯಾಗಿ ಮಹಿಳೆಯರೂ ಸಹ ಅಗ್ಗಿ ಕುಂಡದಲ್ಲಿ ಹಾಯುವ ಮೂಲಕ ಭಕ್ತಿಯನ್ನು ಅರ್ಪಿಸುತ್ತಾರೆ ಎಂದು ದೇವಸ್ಥಾನದ ಅರ್ಚಕ ಪ್ರಭುಸ್ವಾಮಿ ಸರಗಣಾಚಾರಿ ತಿಳಿಸುತ್ತಾರೆ.
ಮುಚಖಂಡಿ ವೀರಭದ್ರೇಶ್ವರ ಅಗ್ಗಿ ಉತ್ಸವವನ್ನು ಗ್ರಾಮದಲ್ಲಿ ಹಬ್ಬದಂತೆ ಆಚರಿಸಲಾಗುತ್ತದೆ.ಲಕ್ಷಾಂತರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.ಜಾತ್ರೆಯಲ್ಲಿ ಮನರಂಜನೆಗಾಗಿ ಚಿಕ್ಕಮಕ್ಕಳಿಗೆ, ದೊಡ್ಡವರಿಗೆ ಆಟವಾಡಲು ವಿವಿಧ ನಮೂನೆಯ ಪ್ರದರ್ಶನಗಳು , ತೊಟ್ಟಿಲು ಇರುತ್ತವೆ ಎಂದರು.
ಉತ್ಸವದಲ್ಲಿ ಯಾವುದೇ ತೊಡಕಾಗದಂತೆ ಅಚ್ಚುಕಟ್ಟಾಗಿ ಮುಚಖಂಡಿಯ ವೀರಭದ್ರೇಶ್ವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು,ಸರ್ವಸದಸ್ಯರು ಗ್ರಾಮಸ್ಥರು ಆಚರಿಸಿಕೊಂಡು ಬರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.