ADVERTISEMENT

ಶಾಶ್ವತ ಯೋಜನೆ; ಇನ್ನೂ ಕನಸು!

ಬಾದಾಮಿ ವಾರಕ್ಕೆ ಎರಡು ಬಾರಿ ಮಾತ್ರ ಕುಡಿಯುವ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 11:54 IST
Last Updated 1 ಜೂನ್ 2018, 11:54 IST
ಬಾದಾಮಿ ಹೊರವಲಯದ ರಂಗನಾಥ ದೇವಾಲಯದ ಬೆಟ್ಟದಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆಯಲ್ಲಿ ನಿರ್ಮಿಸಿದ ನೀರು ಶುದ್ಧೀಕರಣ ಘಟಕದ ಕಟ್ಟಡ
ಬಾದಾಮಿ ಹೊರವಲಯದ ರಂಗನಾಥ ದೇವಾಲಯದ ಬೆಟ್ಟದಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆಯಲ್ಲಿ ನಿರ್ಮಿಸಿದ ನೀರು ಶುದ್ಧೀಕರಣ ಘಟಕದ ಕಟ್ಟಡ   

ಬಾದಾಮಿ: ಮಳೆಯ ಕೊರತೆಯಿಂದ ಅಂತರ್ಜಲಮಟ್ಟ ಕಡಿಮೆಯಾಗಿ ಕೊಳವೆ ಬಾವಿಗಳು ಬತ್ತಿದ್ದು, ಪಟ್ಟಣದ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಹಾಗಾಗಿ ವಾರಕ್ಕೆ ಎರಡು ಸಲ ಮಾತ್ರ ನೀರು ಪೂರೈಕೆ ಮಾಡುವುದಾಗಿ ಧ್ವನಿವರ್ಧಕದ ಮೂಲಕ ಪುರಸಭೆ ಆಡಳಿತ ಜನರಿಗೆ ಮಾಹಿತಿ ನೀಡಿದೆ.

‘ಪಟ್ಟಣದ ನಿವಾಸಿಗಳಿಗೆ ಇಲ್ಲಿನ 77 ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಅದ
ರಲ್ಲಿ ಈಗ 12 ಸಂಪೂರ್ಣ ಬತ್ತಿವೆ. ಇನ್ನುಳಿದ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ಸಾರ್ವಜನಿಕರ ಬೇಡಿಕೆಯಷ್ಟು ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ’ ಎಂದು ಪುರಸಭೆ ಮಖ್ಯಾಧಿಕಾರಿ ಎಫ್‌.ಬಿ. ಗಿಡ್ಡಿ ಹೇಳುತ್ತಾರೆ.

ನೀರು ಪೋಲು: ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಕುಡಿಯುವ ನೀರು ವ್ಯರ್ಥವಾಗಿ ಹರಿದು ಚರಂಡಿ ಪಾಲಾಗುತ್ತಿದೆ. ಆದರೆ ಕೆಲವು ಕಡೆ ನೀರೇ ಬರುತ್ತಿಲ್ಲ. ಹೊರಪೇಟೆ ಹಾಗೂ ಕಲಾಲರ ಓಣಿಯ ಜನರು ಬೇರೆ ವಾರ್ಡಿಗೆ ಬಂದು ನೀರು ಒಯ್ಯುತ್ತಿದ್ದಾರೆ.

ADVERTISEMENT

ನೀರು ಉಳಿಸಿ ಅಭಿಯಾನ: ನೀರು ಪೂರೈಕೆ ನಿರ್ವಹಣೆ ಪುರಸಭೆ ಸಿಬ್ಬಂದಿ ಸರಿಯಾಗಿ ಮಾಡುತ್ತಿಲ್ಲ. ಕೆಲ ಬಾರಿ ನೀರು ಚಾಲೂ ಮಾಡಿದರೂ ಬಂದ್‌ ಮಾಡುತ್ತಿಲ್ಲ. ನಳಕ್ಕೆ ಕ್ಯಾಪ್ ಹಾಕದ ಕಾರಣ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇದನ್ನು ತಪ್ಪಿಸಲು ಸ್ಥಳೀಯ ನಿಸರ್ಗ ಬಳಗ 23 ವಾರ್ಡುಗಳಲ್ಲಿ ‘ನೀರು ಉಳಿಸಿ’ ಅಭಿಯಾನ ಕೈಗೊಂಡಿದೆ. ಆದರೆ ಪುರಸಭೆ ಸಿಬ್ಬಂದಿ ಇಲ್ಲವೇ ಸದಸ್ಯರು ಮಾತ್ರ ಅದರ ಗೊಡವೆಗೆ ಹೋಗಿಲ್ಲ. ಹಾಗಾಗಿ ಬೇಕಾ ಬಿಟ್ಟಿಯಾಗಿ ನೀರು ಹರಿದು ಹೋಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಪಟ್ಟಣದಲ್ಲಿ 2020 ರವರೆಗೆ ನೀರಿನ ಬೇಡಿಕೆ ಗಮನದಲ್ಲಿಟ್ಟುಕೊಂಡು ಮಲಪ್ರಭಾ ನದಿಯಿಂದ ನೀರು ತರಲು ಈ ಹಿಂದೆ ಶಾಸಕ ಬಿ.ಬಿ. ಚಿಮ್ಮನಕಟ್ಟಿ ₹ 3.40 ಕೋಟಿ ಅನುದಾನ ಮಂಜೂರು ಮಾಡಿಸಿದ್ದರು. 2003 ರಲ್ಲಿ ಕಾಮಗಾರಿ ಮುಗಿದಿದೆ. ಆದರೆ ಬಾದಾಮಿ ಜನರಿಗೆ ಹನಿ ನೀರು ಸಿಗಲಿಲ್ಲ.

ಬನಶಂಕರಿ ಸಮೀಪದ ನಾಗರಾಳ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ಬ್ಯಾರೇಜ್‌ ನಿರ್ಮಿಸಿದ್ದು, ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಅಲ್ಲಿ ಜಾಕ್‌ವೆಲ್‌ ನಿರ್ಮಿಸಲಾಗಿದೆ. ಅಲ್ಲಿಂದ ಅಳವಡಿಸಿರುವ ಪೈಪ್‌ಲೈನ್‌ ಏಳು ಕಿ.ಮೀ ದೂರದ ರಂಗನಾಥ ದೇವಾಲಯದವರೆಗೆ ಬಂದಿದೆ. ಅಲ್ಲಿ ನೀರು ಶುದ್ಧೀಕರಣಕ್ಕೆ ಘಟಕ ಕೂಡ ನಿರ್ಮಿಸಲಾಗಿದೆ. ಆದರೆ ಅದು 15 ವರ್ಷಗಳಿಂದ ಬಳಕೆಯೇ ಆಗಿಲ್ಲ. ಹಾಗಾಗಿ ಅಲ್ಲಿನ ಯಂತ್ರೋಪಕರಣ ತುಕ್ಕು ಹಿಡಿದಿದೆ. ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ.

‘ಸ್ಥಳೀಯ ಜನಪ್ರತಿನಿಧಿಗಳು ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಯೋಜನೆ ರೂಪಿಸ
ಬೇಕು. ಜೊತೆಗೆ ನೀರು ವ್ಯರ್ಥವಾಗಿ ಚರಂಡಿಗೆ ಹರಿದು ಹೋಗದಂತೆ ಪುರಸಭೆ ಸಿಬ್ಬಂದಿ ಹಾಗೂ ಪಟ್ಟಣದ ನಿವಾಸಿಗಳು ಕಾಳಜಿ ವಹಿಸಬೇಕು ಎಂದು ಸ್ಥಳೀಯ ನಿಸರ್ಗ ಬಳಗದ ಅಧ್ಯಕ್ಷ ಎಸ್‌.ಎಚ್‌. ವಾಸನ ಒತ್ತಾಯಿಸುತ್ತಾರೆ.

**
ಬಾದಾಮಿಗೆ ಶಾಶ್ವತ ನೀರಿನ ಯೋಜನೆಗೆ ಆಲಮಟ್ಟಿಯಿಂದ ₹ 135 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಸಂಬಂಧಿಸಿದ ಇಲಾಖೆಗೆ ಪ್ರಸ್ತಾವ ಕಳಿಸಲಾಗಿದೆ
- ಫಾರೂಕ್‌ಅಹ್ಮದ್‌ ದೊಡಮನಿ ಅಧ್ಯಕ್ಷರು ಪುರಸಭೆ
**
ಮಲಪ್ರಭಾ ನದಿ ಮೂಲಕ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಕೈಬಿಡಲಾಗಿದೆ
- ಎಫ್‌.ಬಿ. ಗಿಡ್ಡಿ, ಮುಖ್ಯಾಧಿಕಾರಿ ಪುರಸಭೆ ಬಾದಾಮಿ 

ಎಸ್‌.ಎಂ. ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.