ADVERTISEMENT

ಶಿಕ್ಷಣ ಪ್ರತಿಯೊಬ್ಬರ ಹಕ್ಕು: ಚರಂತಿಮಠ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 4:30 IST
Last Updated 24 ಸೆಪ್ಟೆಂಬರ್ 2011, 4:30 IST

ಬಾಗಲಕೋಟೆ: ಶಿಕ್ಷಣವೂ ಪ್ರತಿಯೊಬ್ಬರ ಹಕ್ಕಾಗಿದೆ, ಎಲ್ಲ ವರ್ಗದ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಸಲಹೆ ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಅಮರ್ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ನಗರದಲ್ಲಿ ಇತ್ತೀಚೆಗೆ ನಡೆದ ತಾಲ್ಲೂಕು ಮಟ್ಟದ ಉರ್ದು ಸಾಂಸ್ಕೃತಿಕ ಶೈಕ್ಷಣಿಕ ಸ್ಪರ್ಧೆಯನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ಸರ್ಕಾರ ಮಕ್ಕಳನ್ನು ಶಿಕ್ಷಣದತ್ತ ಆಕರ್ಷಿಸಲು ಬಿಸಿಯೂಟ, ಸಮವಸ್ತ್ರ ವಿತರಣೆ, ಪಠ್ಯಪುಸ್ತಕ ವಿತರಣೆ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ಪ್ರಸ್ತುತ ರಾಜ್ಯ ಸರ್ಕಾರ ರೂ. 12 ಸಾವಿರ ಕೋಟಿ ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿರಿಸಿದೆ ಎಂದು ಅವರು ತಿಳಿಸಿದರು.

ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ವರ್ಗದವರು ಶಿಕ್ಷಣವಂತರಾಗಿ ತಮ್ಮ ಮಕ್ಕಳ ಹಾಗೂ ದೇಶದ ಪ್ರಗತಿಗೆ ಶ್ರಮಿಸಬೇಕು ಎಂದ ಅವರು, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ಹಾಕುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.

ಉರ್ದು ಎಲ್ಲ ಭಾಷೆಗಳಿಗಿಂತಲೂ ಸುಂದರ ಭಾಷೆಯಾಗಿದೆ, ಇದು ಕೇವಲ ಅಲ್ಪಸಂಖ್ಯಾತರ ಭಾಷೆಯಾಗದೇ ಉಳಿದ ಸಮುದಾಯದವರು ಸಹ ಇದನ್ನು ಕಲಿಯಬೇಕೆಂದ ಅವರು ಕಲಿಕೆಯಿಂದ ಮಾತ್ರ ಸಾಧನೆ ಸಾಧ್ಯ  ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ ಮಾನಾಡಿ, ಭಾಷೆ, ಸಂಸ್ಕೃತಿ, ದೇಶದ ಮೇಲೆ ವಿಶ್ವಾಸವಿಟ್ಟು ಶ್ರಮಿಸಿದರೆ  ಪ್ರಗತಿದಾಯಕ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದ ಹಾಗೂ ದೇಶದ ಪ್ರಗತಿಗೆ ಶ್ರಮಿಸಬೇಕೆಂದರು.

ಇಂದು ಶೈಕ್ಷಣಿಕವಾಗಿ ಮುಂದೆ ಬಂದರೆ ಮಾತ್ರ ಪ್ರಗತಿ ಕಾಣಲು ಸಾಧ್ಯ ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿ ಅವರ ಭವಿಷ್ಯವನ್ನು ತಿದ್ದಬೇಕಾದ ಹೊಣೆಗಾರಿಕೆ ಶಿಕ್ಷಕ ಸಮುದಾಯದ ಮೇಲಿದೆ ಎಂದರು.

ರಾಜ್ಯ ಮಟ್ಟದ ಉತ್ತಮ ಉಪನಿರ್ದೇಶಕ ಪ್ರಶಸ್ತಿ ಪುರಸ್ಕೃತ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿದ್ದರಾಮ ಮನಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು,  ಶಿಕ್ಷಕರು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಅಮರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಲ್‌ಹಾಜ್ ಎಚ್. ಎಚ್.ಕಲಾದಗಿ ಮಾತನಾಡಿ ಸಂಸ್ಥೆಯು ಉತ್ತಮ ಶಿಕ್ಷಣ ನೀಡುವತ್ತ ಕೇಂದ್ರಿಕೃತವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ವೈ.ಕುಂದರಗಿ, ಕ್ಷೇತ್ರ ಸಮನ್ವಯಾಧಿಕಾರಿ ಆರ್. ಎಂ.ಮಕಾನದಾರ, ಅಲ್ಪಸಂಖ್ಯಾತರ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಅರ್.ಡಿ.ಅಂಗಡಿ, ಉರ್ದು ಶಿಕ್ಷಣ ಸಂಯೋಜಕ ಎಂ.ಎಲ್.ಬಾಗೇವಾಡಿ, ಎಂ.ಎಂ.ಹೊನವಾಡ, ಶಿಕ್ಷಕ ಎಸ್. ಬಿ.ತುಳಸಿಗೇರಿ, ಸಿಆರ್‌ಪಿ ಮಾಶ್ಯಾಳಕರ, ಜಮಖಾನೆ, ಅಮರ್ ಉರ್ದು ಶಾಲೆಯ ಮುಖ್ಯಾಧ್ಯಾಪಕಿ ಎ.ಯು.ಸಾರವಾಡ ಸೇರಿದಂತೆ ತಾಲ್ಲೂಕಿನ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.