ADVERTISEMENT

ಸಂತ್ರಸ್ತರಿಗೆ ನಿವೇಶನ ಹಂಚಿಕೆ ತಾರತಮ್ಯ ಖಂಡನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 9:04 IST
Last Updated 2 ಡಿಸೆಂಬರ್ 2013, 9:04 IST

ಬಾಗಲಕೋಟೆ: ಮುಳುಗಡೆ ಸಂತ್ರಸ್ತರಿಗೆ ನವನಗರ ಯೂನಿಟ್‌ 1ರಲ್ಲಿ ನಿವೇಶನ ಹಂಚಿಕೆ ಮಾಡಿದ ಮಾದರಿಯಲ್ಲೇ ಯುನಿಟ್‌ 2ರಲ್ಲೂ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಆಗ್ರಹಿಸಿದೆ.

ಯೂನಿಟ್‌ 2ರಲ್ಲಿ ನಿವೇಶನ ಹಂಚಿಕೆ ಸಂಬಂಧ ಬಿಟಿಡಿಎ ಸಂತ್ರಸ್ತರಿಗೆ ನೀಡಿರುವ ತಿಳಿವಳಿಕೆ ಪತ್ರದಲ್ಲಿ ಸಂತ್ರಸ್ತರು ಕೇಳಿದ ನಿವೇಶನಗಳನ್ನು ಮಂಜೂರು ಮಾಡಿಲ್ಲದಿರುವುದರಿಂದ ಆ ನಿವೇಶನ ಒಪ್ಪಿಗೆಯಿಲ್ಲ. ಕಾರಣ ಇದೇ 3ರಂದು ತಿಳಿವಳಿಕೆ ಪತ್ರವನ್ನು ಬಿಟಿಡಿಎಗೆ ಸಾಮೂಹಿಕವಾಗಿ ಹಿಂತಿರು­ಗಿಸು­ವುದಾಗಿ ಸಮಿತಿ ಅಧ್ಯಕ್ಷ ಸಂಗಯ್ಯ ಸರಗಣಾಚಾರಿ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯೂನಿಟ್‌ 2ರ ವ್ಯಾಪ್ತಿಯಲ್ಲಿ ಬರುವ 3,170 ಸಂತ್ರಸ್ತರು ಅಂದು ಬೆಳಗ್ಗೆ 10ಕ್ಕೆ ಹಳೆನಗರದ ವಲ್ಲಭ­ಬಾಯಿ ಚೌಕದಿಂದ ಉಪ­ವಿಭಾಗಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ಬಳಿಕ ವಾಹನಗಳ ಮೂಲಕ ಬಿಟಿಡಿಎ ಕಚೇರಿಗೆ ತೆರಳಿ ತಿಳಿವಳಿಕೆ ಪತ್ರವನ್ನು ಮರಳಿಸುವುದಾಗಿ ಹೇಳಿದರು.

ಯೂನಿಟ್‌ 1ರಲ್ಲಿ ಸಂತ್ರಸ್ತರಿಗೆ ಮತ್ತು ಬಾಡಿಗೆ­ದಾರರಿಗೆ ಕೇಳಿದ ನಿವೇಶನಗಳನ್ನು ಕೊಡ­ಲಾಗಿದೆ. ಅವರಂತೆಯೇ ನಾವೂ ಸಂತ್ರಸ್ತರಾಗಿರು­ವುದರಿಂದ ಸಂತ್ರಸ್ತರಲ್ಲಿ ತಾರತಮ್ಯ ಮಾಡದೇ ಕೇಳಿದ ನಿವೇಶನಗಳನ್ನು ಮಂಜೂರು ಮಾಡಬೇಕು ಇಲ್ಲವಾದರೆ ಹೋರಾಟದ ಹಾದಿ ಹಿಡಿಯುವುದಾಗಿ ಅವರು ಎಚ್ಚರಿಕೆ ನೀಡಿದರು.

ಯೂನಿಟ್‌ 1ರಲ್ಲಿ ಸಂತ್ರಸ್ತರಿಗೆ ನೀಡಿದ ಮಾದರಿ­ಯಲ್ಲೇ ಯೂನಿಟ್‌ 2ರಲ್ಲಿ ಸಂತ್ರಸ್ತರಿಗೆ ನಿವೇಶನ ನೀಡುವಂತೆ ಪುನರ್ವಸತಿ ಆಯುಕ್ತ, ಉಪ­ವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಮಾನವ­ಹಕ್ಕು ಆಯೋಗ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಶಾಸಕರಿಗೆ ಮನವಿ ಮಾಡಲಾಗಿದೆ. ಇದು­ವರೆಗೆ ಯಾವುದೇ ಭರವಸೆ ಸಿಕ್ಕಿಲ್ಲ ಎಂದರು.

521ರಿಂದ 523 ಮತ್ತು 100 ಮೀಟರ್‌ ವ್ಯಾಪ್ತಿಯಲ್ಲಿ ಬರುವ ಕೆಲವು ದೇವಸ್ಥಾನಗಳನ್ನು ಸ್ವಾಧೀನ­ಪಡಿಸಿ­ಕೊಂಡಿ­ರು­ವುದಿಲ್ಲ, ಅವುಗಳನ್ನು ಸ್ವಾಧೀನ­­ಪಡಿಸಿಕೊಂಡು ಪರಿಹಾರ ಹಣ ಮತ್ತು ನಿವೇಶನವನ್ನು ಆ ವಾರ್ಡಿನ ಜನ ಇರುವ ಸೆಕ್ಟರ್‌ನಲ್ಲಿ ಹಂಚಿಕೆ ಮಾಡಬೇಕು ಎಂದರು.
ಯೂನಿಟ್‌ 2ರಲ್ಲಿ ಪ್ರಮುಖ ಯೋಜನೆ­ಗಳನ್ನು ಕೈಗೊಳ್ಳುವ ಮುನ್ನ ಇದರಲ್ಲಿ ಬರುವ ಸಂತ್ರಸ್ತರು ಮತ್ತು ಹೋರಾಟ ಸಮಿತಿಯೊಂದಿಗೆ ಚರ್ಚಿಸಬೇಕು ಎಂದು ಹೇಳಿದರು.

ಆಲಮಟ್ಟಿ ಅಣೆಕಟ್ಟೆಯನ್ನು 524 ಮೀಟರ್‌ ವರೆಗೆ ಎತ್ತರಿಸಲು ಕೃಷ್ಣಾ ನ್ಯಾಯಾಧಿಕರಣ ತೀರ್ಪು ನೀಡಿರುವ ಕಾರಣ ಬಾಗಲಕೋಟೆ ಪಟ್ಟಣದ ಸಂಪೂರ್ಣ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಬೇಕು ಎಂದರು.

521ರಿಂದ 523 ಮತ್ತು 100 ಮೀಟರ್‌ ವ್ಯಾಪ್ತಿಯಲ್ಲಿ ಬರುವ ಖಾಲಿ ನಿವೇಶನ­ದಾರ­ರಿಗೂ ನವನಗರದಲ್ಲಿ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ಹೊಸ ಭೂಸ್ವಾಧೀನ ಕಾಯ್ದೆಯನ್ನು 521ರಿಂದ 523 ಮತ್ತು 100 ಮೀಟರ್‌ ವ್ಯಾಪ್ತಿಯಲ್ಲಿ ಬರುವ ಸಂತ್ರಸ್ತರಿಗೆ ಅನ್ವಯಿಸಬೇಕು ಎಂದು ಒತ್ತಾಯಿಸಿದರು.

ಸಮಿತಿ ಕಾರ್ಯಾಧ್ಯಕ್ಷ ಸದಾನಂದ ನಾರಾ, ಪ್ರಧಾನ ಕಾರ್ಯದರ್ಶಿ ಸಂಗಮೇಶ ಹೊಸಮನಿ, ಉಪಾಧ್ಯಕ್ಷ­ರಾದ ಸುರೇಶ ಕುದರಿಕಾರ, ಗುಂಡೂ­ರಾವ್‌ ಸಿಂಧೆ, ಕಾರ್ಯದರ್ಶಿ ಬಾಷಾಸಾಬ ಹೊನ್ಯಾಳ, ಶರಣಪ್ಪ ಕೆರೂರ, ಸಂಘಟನಾ ಕಾರ್ಯದರ್ಶಿ ಬಸವರಾಜ ಕಟಗೇರಿ, ಮಂಜುನಾಥ ಏಳೆಮ್ಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.