ADVERTISEMENT

‘ಸರ್ಕಾರದ ಸಾಧನೆ ಮನೆ,ಮನೆಗೆ ತಿಳಿಸಿ’

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 5:12 IST
Last Updated 6 ಅಕ್ಟೋಬರ್ 2017, 5:12 IST
ಜಮಖಂಡಿಯಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಬೂತ್‌ ಮಟ್ಟದ ಸಭೆಯಲ್ಲಿ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಕಾರ್ಯಕರ್ತರನ್ನು ಶಾಸಕ ಸಿದ್ದು ನ್ಯಾಮಗೌಡ ಕೊರಳವಸ್ತ್ರ ನೀಡಿ ಬರಮಾಡಿಕೊಂಡರು.
ಜಮಖಂಡಿಯಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಬೂತ್‌ ಮಟ್ಟದ ಸಭೆಯಲ್ಲಿ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಕಾರ್ಯಕರ್ತರನ್ನು ಶಾಸಕ ಸಿದ್ದು ನ್ಯಾಮಗೌಡ ಕೊರಳವಸ್ತ್ರ ನೀಡಿ ಬರಮಾಡಿಕೊಂಡರು.   

ಜಮಖಂಡಿ: ‘ಕಾಂಗ್ರೆಸ್‌ ಪಕ್ಷದಲ್ಲಿ ಈ ಹಿಂದೆ ಇದ್ದ ಶಿಸ್ತನ್ನು ಪುನರ್‌ ಸ್ಥಾಪಿಸಲು ಸಂಘಟನೆಯ ಅವಶ್ಯಕತೆ ಇದೆ. ಮುಂದಿನ ಆರು ತಿಂಗಳ ಅವಧಿಯಲ್ಲಿ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ’ ಎಂದು ಶಾಸಕ ಸಿದ್ದು ನ್ಯಾಮಗೌಡ ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಜಮಖಂಡಿ ಹಾಗೂ ಸಾವಳಗಿ ಘಟಕಗಳ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಬೂತ್‌ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.
‘ಬೂತ್‌ ಮಟ್ಟದಲ್ಲಿ ಪ್ರತಿ ಮನೆಗೆ ತೆರಳಿ ರಾಜ್ಯ ಸರ್ಕಾರದ ಸಾಧನೆ ಮನವರಿಕೆ ಮಾಡಿಕೊಡಬೇಕು. ಹೊಸದಾಗಿ ಸೇರ್ಪಡೆಗೊಂಡ ಕಾರ್ಯಕರ್ತರು ಪಕ್ಷಕ್ಕೆ ಹೊಸ ಚೈತನ್ಯ ತುಂಬಬೇಕು’ ಎಂದು ಮನವಿ ಮಾಡಿದರು.

ಸಭೆಯಲ್ಲಿ ವೀಕ್ಷಕರಾಗಿ ಪಾಲ್ಗೊಂಡಿದ್ದ ಚಿಕ್ಕೋಡಿಯ ಮಾಜಿ ಶಾಸಕ ಬಾಳಾಸಾಹೇಬ ವಡ್ಡರ ಮಾತನಾಡಿ, ‘ಸರ್ಕಾರದ ಸಾಧನೆ ಪಟ್ಟಿ ಹಿಡಿದುಕೊಂಡು ಒಂದು ವಾರ ಕಾಲ ನಿತ್ಯ ಐದು ಗಂಟೆಗಳ ಕಾಲ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡರೆ ಕಾಂಗ್ರೆಸ್‌ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದರು.

ADVERTISEMENT

‘ರಾಜ್ಯ ಸರ್ಕಾರದ ಯೋಜನೆಗಳ ಲಾಭ ತಲುಪಿಲ್ಲ ಎಂದು ಹೇಳುವವರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು. ಮತದಾರರ ಒಲವು ಯಾರ ಕಡೆಗೆ ಇದೆ ಎಂದು ಗ್ರಹಿಸಬೇಕು. ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರ ಮನೆಗಳಿಗೂ ತೆರಳಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವೊಲಿಸಬೇಕು ಎಂದರು.

ಜವಳಿ ನಿಗಮದ ಉಪಾಧ್ಯಕ್ಷ ನಜೀರ್‌ ಕಂಗನೊಳ್ಳಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಂ.ಬಿ. ಸೌದಾಗರ ಅಧ್ಯಕ್ಷತೆ ವಹಿಸಿದ್ದರು. ಬೂತ್‌ ಮಟ್ಟದ ಅಧ್ಯಕ್ಷರಾದ ರಾಮು ಮಾಂಗ (ಆಲಗೂರ), ಪ್ರಕಾಶ ಹಂಗರಗಿ (ಜಮಖಂಡಿ), ಸುರೇಶ ನಾಗರಡ್ಡಿ (ಲಿಂಗನೂರ), ಕಲ್ಮೇಶ್ವರ ಹಟ್ಟಿ (ಕುಂಬಾರಹಳ್ಳ) ಮಾತನಾಡಿದರು.

ಜಮಖಂಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಸಾವಳಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ, ನಗರಸಭೆ ಅಧ್ಯಕ್ಷ ರಾಜು ಪಿಸಾಳ, ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಮಂತ ಚೌರಿ, ಸುಭಾಸ ಸಾವಕಾರ, ಈಶ್ವರ ವಾಳೆನ್ನವರ, ಸಿದ್ದು ಮೀಸಿ, ಪ್ರಕಾಶ ಕಣಬೂರ, ಈಶ್ವರ ಕರಬಸನವರ, ಅರ್ಜುನ ದಳವಾಯಿ, ಬಿ.ಎನ್‌. ಗಸ್ತಿ, ಮಹೇಶ ಕೋಳಿ ಮತ್ತಿತರು ವೇದಿಕೆಯಲ್ಲಿದ್ದರು. ಜಮಖಂಡಿ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರವಿ ಯಡಹಳ್ಳಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.