ADVERTISEMENT

ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 7:25 IST
Last Updated 18 ಜೂನ್ 2017, 7:25 IST
ತೋಗುಣಶಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಭೇಟಿ ನೀಡಿ ಔಷಧಿಗಳನ್ನು ಪರಿಶೀಲಿಸಿದರು
ತೋಗುಣಶಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಭೇಟಿ ನೀಡಿ ಔಷಧಿಗಳನ್ನು ಪರಿಶೀಲಿಸಿದರು   

ಗುಳೇದಗುಡ್ಡ: ತೋಗುಣಸಿ ಸರ್ಕಾರಿ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವ್ಯವಸ್ಥೆ ಸರಿಪಡಿಸಲು ಸೂಚನೆ ನೀಡಿದರು. ರೋಗಿಗಳ ಕೊಠಡಿ, ಶೌಚಾಲಯ, ಔಷಧ ಕೊಠಡಿ ಅವ್ಯವಸ್ಥೆ ಮತ್ತು ಅವಧಿ ಮೀರಿದ ಔಷಧಿ ಇರುವುದು ಕಂಡು ಬಂತು.  ಡ್ರೆಸ್ಸಿಂಗ್ ರೂಮ್, ರೋಗಿ ಕೊಠಡಿಗಳಲ್ಲಿ ಮಂಚ, ಹಾಸಿಗೆ ಮೇಲೆ ಧೂಳು, ಹಿಕ್ಕಿ, ಗಲೀಜು ಇರುವುದನ್ನು ನೋಡಿ ಕೆಂಡಾಮಂಡಲವಾದರು.

‘ವೈದ್ಯರು ತಿಳಿದಾಗ ಬರುತ್ತಾರೆ. ಔಷಧಿ ಸಹ ಸರಿಯಾಗಿ ವಿತರಣೆ ಮಾಡುವುದಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಪರದಾಡುವಂತಾಗಿದೆ’ ಎಂದು ರೋಗಿಗಳು ಅಲವತ್ತು ಕೊಂಡರು. ಆಗ  ವೀಣಾ ಕಾಶಪ್ಪನವರ ಸಿಬ್ಬಂದಿ ಹಾಜರಾತಿ ಪುಸ್ತಕ ಪರಿಶೀಲಿಸಿದರು. ಅದರಲ್ಲಿ ಸಿಬ್ಬಂದಿ ಸಹಿ ಮಾಡಿರಲಿಲ್ಲ. ಹಾಜರಾತಿ ಪುಸ್ತಕವನ್ನು ಮೇಲಧಿಕಾರಿಗಳಿಗೆ ನೀಡಿ ಅವರ ವೇತನ ತಡೆಹಿಡಿಯಲಾಗುವುದು ಎಂದರು.

ಆಸ್ಪತ್ರೆಗೆ ಬಂದ ವೈದ್ಯಾಧಿಕಾರಿ ಡಾ.ಕವಿತಾ ಶಿವುನಾಯ್ಕರ್, ಡಾ.ಬಸವರಾಜ ಹೆಬ್ಬಾಳ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಗ್ರಾಮಸ್ಥರು ‘ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸಿಬೇಕು’ ಎಂದು ಪಟ್ಟು ಹಿಡಿದರು.  ಆಗ ವೀಣಾ ‘ ಗುಳೇದಗುಡ್ಡದ ಡಾ.ಬಸವರಾಜ ಹೆಬ್ಬಾಳ ಅವರರಿಗೆ ಪದೋನ್ನತಿ, ಬಾದಾಮಿಯಿಂದ ಒಬ್ಬ ವೈದ್ಯರನ್ನು ಕೊಡುವುದಾಗಿ’ ಹೇಳಿದರು.  

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯೆ ಸರಸ್ವತಿ ಪ್ರಕಾಶ ಮೇಟಿ, ಕೋಟೆಕಲ್ಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಬ್ದುಲ್ ರಹಿಮಾನ ಯಳ್ಳಿಗುತ್ತಿ, ತಹಶೀಲ್ದಾರ ಎಸ್.ರವೀಚಂದ್ರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಿ.ಬಿ.ಮ್ಯಾಗೇರಿ, ಪ್ರಕಾಶ ಮೇಟಿ, ಯಲ್ಲಪ್ಪ ಬಸರಕೋಡ, ರಂಗಪ್ಪ ಜಾನಮಟ್ಟಿ, ಸಂಗಪ್ಪ ಮಾದರ, ಶಿವಾನಂದ ವಾಲೀಕಾರ, ಎಸ್.ಎಂ.ಪಾಟೀಲ, ಮಹಾಂತೇಶ ನಾಡಗೌಡರ, ಪರಶುರಾಮ ಮಾದರ, ಭೀಮಪ್ಪ ಡಂಗಿ, ಹನಮಂತ ಚವಾಣ, ಮೇಘರಾಜ ಚವಾಣ, ಹಿರಿಯ ಮಲ್ಲಪ್ಪ ಗಾಣಿಗೇರ, ಭೀಮಸಿ ಚವಾಣ, ಮಾಗುಂಡಪ್ಪ ಗೌಡರ, ಮುದಕಪ್ಪ ಸಂಗಳದ, ಯಲ್ಲಪ್ಪ ಗಾಣಿಗೇರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.