ADVERTISEMENT

`ಸಿಇಟಿ: ಶಾಶ್ವತ ಪರಿಹಾರಕ್ಕೆ ನೀಡಿ'

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 7:12 IST
Last Updated 1 ಆಗಸ್ಟ್ 2013, 7:12 IST

ಬಾಗಲಕೋಟೆ: ಸಿಇಟಿ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ನಗರದ ವಿದ್ಯಾಗಿರಿ ಕಾಲೇಜು ವೃತ್ತದಲ್ಲಿ ಬುಧವಾರ ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಇನ್ನೂ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಈಗಾಗಲೇ 2ನೇ ಸುತ್ತಿನಲ್ಲಿ ಸೀಟು ಪಡೆದಿರುವ ನೂರಾರು ವಿದ್ಯಾರ್ಥಿಗಳು ಬೇರೆ ಬೇರೆ ಕಾಲೇಜುಗಳಿಗೆ ಪ್ರವೇಶ ಪಡೆಯುವುದು ಬಾಕಿ ಇದೆ.

ಹೀಗಿರುವಾಗ ಸುಪ್ರೀಂಕೋರ್ಟ್ ಜುಲೈ 30 ರೊಳಗೆ ಪ್ರವೇಶ ಪ್ರಕ್ರಿಯೆಯನ್ನು ಅಂತಿಮಗೊಳಿಸುವಂತೆ ನಿರ್ದೇಶನ ನೀಡಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಗೊಂದಲಲ್ಲಿದ್ದಾರೆ. ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು 8,772 ಸೀಟುಗಳು ಬಾಕಿ ಉಳಿದಿವೆ. ಒಂದು ವೇಳೆ ಸುಪ್ರೀಂ ಕೋರ್ಟ್ ಸಮಯಾವಕಾಶ ನೀಡದಿದ್ದರೆ ಸೀಟುಗಳು ಹಾಗೆಯೇ ಉಳಿಯುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಸಿಇಟಿ ಘಟಕ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದ ಸಾವಿರಾರು ವಿದ್ಯಾರ್ಥಿಗಳು ಎಂಜಿನಿಯರಿಂಗ್ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ದೂರಿದರು.

ಮೂರನೇ ಸುತ್ತಿನ ಕೌನ್ಸೆಲಿಂಗ್ ನಡೆಸುವ ಮೂಲಕ ಪೂರ್ಣ ಪ್ರಕ್ರಿಯೆ ಮಾಡಬೇಕು, ವಿದ್ಯಾರ್ಥಿಗಳಿಂದ ಹಲವಾರು ಕಾಲೇಜುಗಳು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ದಾಖಲಿಸಲು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ತುರ್ತಾಗಿ ದೂರು ಕೇಂದ್ರವನ್ನು ತೆರೆಯಬೇಕು.

ಈಗಾಗಲೇ ವಿದ್ಯಾರ್ಥಿಗಳಿಂದ ಸುಲಿಗೆ ಮಾಡಿರುವ ಹೆಚ್ಚುವರಿ ಹಣವನ್ನು ಕೂಡಲೇ ಹಿಂತಿರುಗಿಸಬೇಕು, ನೀಡದೇ ಇರುವ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಡಿಪ್ಲೊಮಾ ಲ್ಯಾಟರಲ್ ಪ್ರವೇಶಕ್ಕೆ ಎಲ್ಲ ಸುತ್ತಿನ ಕೌನ್ಸೆಲಿಂಗ್ ನಡೆಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು, ಆನ್‌ಲೈನ್ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಬ್ಯಾಚಲರ್ ಆಫ್ ಫಾರ್ಮಸಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನೂ ಸಿಇಟಿ ಘಟಕದ ಮೂಲಕ ನಡೆಸಬೇಕೆಂದು ನಿರ್ಧರಿಸಲಾಗಿದ್ದರೂ, ಅವರ ಪ್ರವೇಶಕ್ಕೆ ಸರಿಯಾದ ತಯಾರಿಯನ್ನು ಇನ್ನುವರೆಗೆ ಮಾಡಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.