ADVERTISEMENT

ಸಿಗದ ಮಾಸಾಶನ: ಸಂಕಷ್ಟದಲ್ಲಿ ಕಲಾವಿದರು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 4:25 IST
Last Updated 23 ಸೆಪ್ಟೆಂಬರ್ 2011, 4:25 IST

ಬಾಗಲಕೋಟೆ: ಸಂಕಷ್ಟದಲ್ಲಿರುವ ನಾಡಿನ ಸಂಗೀತ, ನೃತ್ಯ, ರಂಗಭೂಮಿ, ಯಕ್ಷಗಾನ, ಜಾನಪದ, ಲಲಿತಕಲೆ, ಶಿಲ್ಪಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅಸಕ್ತ ಮತ್ತು ವಯೋವೃದ್ಧ ಕಲಾವಿದರಿಗೆ ಪ್ರತಿ ತಿಂಗಳು ರೂ. 1 ಸಾವಿರ ಮಾಸಾಶನ ನೀಡುವ ಮಹತ್ವದ ಯೋಜನೆ ನೆನೆಗುದಿಗೆ ಬಿದ್ದಿದೆ.

ಕಷ್ಟ ಪರಿಸ್ಥಿತಿಯಲ್ಲಿರುವ ಸಾಹಿತಿ ಮತ್ತು ಕಲಾವಿದರಿಗೆ ಮಾಸಾಶನ ನೀಡುವ ಸಂಬಂಧ ಡಾ. ಹಂಪ ನಾಗರಾಜಯ್ಯ ಅಧ್ಯಕ್ಷತೆಯಲ್ಲಿ ಸರ್ಕಾರ 2006ರಲ್ಲಿ ನೇಮಿಸಿದ್ದ ಆಯ್ಕೆ ಸಮಿತಿ ಶಿಫಾರಸು ಮಾಡಿರುವ 1200 ಕಲಾವಿದರು ಮಾಸಾಶನಕ್ಕಾಗಿ ಜಾತಕಪಕ್ಷಿಗಳಂತೆ ಕಾಯುತ್ತಿದ್ದು, ಅದರಲ್ಲಿ ಅನೇಕರು ಈಗಾಗಲೇ ಮೃತಪಟ್ಟಿದ್ದಾರೆ.

2006-07, 2007-08 ಮತ್ತು 2008-09ನೇ ಸಾಲಿಗೆ ಒಟ್ಟು 1200 ಅರ್ಹ ಸಾಹಿತಿ ಮತ್ತು ಕಲಾವಿದರನ್ನು ಮಾಸಾಶನ ನೀಡಲು ಆಯ್ಕೆ ಮಾಡಲಾಗಿದೆ. ಆದರೆ ಈ ಕಲಾವಿದರಿಗೆ ಇನ್ನೂ ಮಾಸಾಶನ ಸಿಗದೇ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ಅಲೆದು ಅಲೆದು ಮಾಸಾಶನದ ಆಸೆಯ
ನ್ನೇ  ಕೈಬಿಟ್ಟಿದ್ದಾರೆ.

ಅಲ್ಲದೇ 2009-10 ಮತ್ತು 2010-11ನೇ ಸಾಲಿಗೆ ಸಾವಿರಾರು ಕಲಾವಿದರು ಮಾಸಾಶನಕ್ಕಾಗಿ ಅರ್ಜಿ ಹಾಕಿದ್ದು, ಇನ್ನೂ ಸಂದರ್ಶನ ಪೂರ್ಣಗೊಂಡಿಲ್ಲ.

ಮಾಸಾಶನಕ್ಕಾಗಿ ಅಲೆದು ಸುಸ್ತಾದ ಬಾಗಲಕೋಟೆ ಜಿಲ್ಲೆಯ ಜನಪದ ಕಲಾವಿದೆ ಸತ್ಯವ್ವ ತಳಗೇರಿ ಈ ಸಂಬಂಧ `ಪ್ರಜಾವಾಣಿ~ಯೊಂದಿಗೆ ಮಾತನಾಡಿ, ಕಳೆದ 10 ವರ್ಷಗಳಿಂದ ಮಾಸಾಶನಕ್ಕೆ ಅರ್ಜಿ ಹಾಕಿಕೊಂಡು ಕಾಯುತ್ತಿದ್ದೇನೆ, ಈಗ ಬರಬಹುದು, ಆಗ ಬರಬಹುದು ಎಂದು ಕಾದುಕಾದು ಅದರ ಆಸೆಯನ್ನೇ ಬಿಟ್ಟಿದ್ದೇನೆ ಎಂದು ಹತಾಶೆ ವ್ಯಕ್ತಪಡಿಸಿದರು.

 40 ವರ್ಷದಿಂದ ಗೀಗೀಪದ, ಭಜನೆ ಮಾಡುತ್ತಾ ಬರುತ್ತಿದ್ದೇನೆ, ಬರುವ ಅಲ್ಪ ಹಣದಲ್ಲಿ ಜೀವನ ಸರಿದೂಗಿಸುವುದು ಕಷ್ಟವಾಗಿದೆ. ಸರ್ಕಾರ ಈಗಲಾದರೂ ನಮ್ಮತ್ತ ಕಣ್ಣು ತೆರೆದು ನೋಡಬೇಕು ಎಂದು ಮನವಿ ಮಾಡಿದರು.
 
ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯ ಜಾನಪದ ಅಂಧ ಕಲಾವಿದ ನಾರಾಯಣ ಡಿ. ಬಡಿಗೇರ  `ಪ್ರಜಾವಾಣಿ~ಯೊಂದಿಗೆ ಮಾತನಾಡಿ, ಮಾಸಾಶನಕ್ಕಾಗಿ 2006ರಲ್ಲೇ ಅರ್ಜಿ ಸಲ್ಲಿಸಿದ್ದೇ, ವಿಜಾಪುರದಲ್ಲಿ 2009ರಲ್ಲಿ ಸಂದರ್ಶನ ಮಾಡಿ ಮಾಸಾಶನ ನೀಡಲು ಆಯ್ಕೆ ಮಾಡಿದ್ದಾರೆ, ಆದರೆ ಇದುವರೆಗೂ ಮಾಸಾಶನ ಬಂದಿಲ್ಲ, ಜೀವನ ನಡೆಸುವುದು ಕಷ್ಟವಾಗಿದೆ ಎಂದು ಹೇಳಿದರು.

ಮಾಸಾಶನ ಪಡೆಯಲು 25 ವರ್ಷ ಕಲಾವಿದರಾಗಿ ಸೇವೆ ಸಲ್ಲಿಸಿರಬೇಕು, 58 ವರ್ಷ ವಯಸ್ಸಾಗಿರಬೇಕು ಎಂಬ ಸರ್ಕಾರದ ಕಟ್ಟುಪಾಡಿಗೆ ಜಮಖಂಡಿ ತಾಲ್ಲೂಕಿನ ಅಲಗೂರ ಗ್ರಾಮದ ರಂಗಭೂಮಿ ಕಲಾವಿದ ಶಿವಲಿಂಗ ಸಿದ್ದರಾಯ ದೊಡ್ಡಮನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಒಂದಲ್ಲ ಒಂದು ಚಟಕ್ಕೆ ದಾಸರಾಗಿರುವ ಕಲಾವಿದರು 58 ವರ್ಷ ಬದುಕುವುದೇ ಕಷ್ಟ, ಅಲ್ಲದೇ ಊರಿನಿಂದ ಊರಿಗೆ ಅಲೆದು, ಸರಿಯಾಗಿ ಊಟೋಪಚಾರವಿಲ್ಲದೇ 40ರಿಂದ 50 ವರ್ಷದೊಳಗೆ ನಿತ್ರಾಣಗೊಳ್ಳುತ್ತಾರೆ. ಹೀಗಾಗಿ ಮಾಸಾಶನಕ್ಕೆ ಅರ್ಜಿ ಸಲ್ಲಿಸಲು 40 ವರ್ಷ ಸೀಮಿತಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ರಾಜ್ಯದಲ್ಲಿ ಸಾವಿರಾರು ಅಸಕ್ತ ಮತ್ತು ವಯೋವೃದ್ಧ ಕಲಾವಿದರು ಇದ್ದು, ಪ್ರತಿ ವರ್ಷ ಅರ್ಜಿ ಸಲ್ಲಿಸುವ ಕಲಾವಿದರ ಸಂದರ್ಶನ ನಡೆಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಕೇವಲ 400 ಕಲಾವಿದರನ್ನು ಮಾತ್ರ ಆಯ್ಕೆ ಮಾಡುತ್ತದೆ.

ಹೀಗಾಗಿ ಅದೆಷ್ಟೋ ಕಲಾವಿದರನ್ನು ಯೋಜನೆಯಿಂದ ಕೈಬಿಡಲಾಗಿದೆ.ಯೋಜನೆ ವಂಚಿತ ಅರ್ಹ ಎಲ್ಲಾ ಕಲಾವಿದರಿಗೂ ಮಾಸಾಶನ  ದೊರೆಯುವಂತಾಗಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.