ADVERTISEMENT

ಹಣ, ಹೆಂಡ ಹಂಚಿ ಮತ ಕೇಳಲ್ಲ: ಬಿದರಿ

ಶ್ರೀಸಾಮಾನ್ಯನಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸುವೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 7:22 IST
Last Updated 20 ಮಾರ್ಚ್ 2014, 7:22 IST

ಬಾಗಲಕೋಟೆ: ಮತದಾರರಿಗೆ ಹಣ, ಹೆಂಡ ಹಾಗೂ ಯಾವುದೇ ಆಮಿಷ­ಗಳನ್ನು ಒಡ್ಡಿ ಮತದಾರರನ್ನು ಓಲೈಸಿ­ಕೊಳ್ಳುವುದಿಲ್ಲ. ಶ್ರೀಸಾಮಾನ್ಯನಾಗಿ ಲೋಕಸಭೆ ಚುನಾವಣಾ ಕಣಕ್ಕೆ ಇಳಿದಿದ್ದು ಜಿಲ್ಲೆಯ ಮತದಾರರು ಆಶೀರ್ವದಿಸಲಿದ್ದಾರೆಂದು ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಲೋಕಸಭೆ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ  ಶಂಕರ ಬಿದರಿ ತಿಳಿಸಿದರು.

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
42 ವರ್ಷ ಪ್ರಾಮಾಣಿಕವಾಗಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಅದರಂತೆ 14 ಗಂಟೆಗಳ ಕಾಲ ಜನರಪ್ರತಿನಿಧಿಯಾಗಿ ಕೆಲಸ ಮಾಡುತ್ತೇನೆ. ದುಡ್ಡು ಕೊಟ್ಟು ಮತ ಕೇಳುವುದಿಲ್ಲ ಎಂದು ಹೇಳಿದರು.

ದೇಶದ ಜನತೆ ದಯನೀಯ ಸ್ಥಿತಿಯಲ್ಲಿ­ದ್ದಾರೆ. ದೇಶದ ಆರ್ಥಿಕ ಸ್ಥಿತಿ ಕುಂಠಿತಗೊಂಡಿದ್ದು,ದೇಶದ ರಾಜಕಾ­ರಣಕ್ಕೆ ಹೊಸದನ್ನು ತರುವುದು ಅನಿವಾರ್ಯವಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಬಿದರಿ ಕೇವಲ ಸಂಕೇತ ಆದರೆ ಶ್ರೀಸಾಮಾನ್ಯ­ನಾಗಿ ಪ್ರಚಾರ ನಡೆಸುತ್ತೇನೆ. ಜಿಲ್ಲೆಯ ಪ್ರತಿ­ಯೊಬ್ಬ ಮತದಾರರು ನನ್ನನ್ನು ಬೆಂಬಲಿ­ಸ­ಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ತಿರಸ್ಕಾರ: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣೆಗೆ ಸ್ಪರ್ಧಿ­ಸಬೇಡಿ ತಮಗೆ ಬೆಂಬಲ ನೀಡ­ಬೇಕು ಎಂದು ಕೇಳಿಕೊಂಡಿದ್ದಾರೆ. ಆದರೆ ಅವರ ಮಾತನ್ನು ತಿರಸ್ಕಾರ ಮಾಡಿ­ದ್ದೇನೆ ಎಂದು ತಿಳಿಸಿದರು. ಜನಶಕ್ತಿ ಪಕ್ಷಕ್ಕೆ ನೋಂದಣಿ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಇನ್ನೂ ಚುನಾವಣಾ ಆಯೋಗ ಮಾನ್ಯತೆ ನೀಡದ ಹಿನ್ನೆಲೆಯಲ್ಲಿ ಕಾರ್ಯಕರ್ತ­ರಲ್ಲಿರುವ ಗೊಂದಲ ದೂರ ಮಾಡಲು ಇಂದೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದರು.

ನಾಮಪತ್ರ ಸಲ್ಲಿಸುವಾಗ ಯಾವುದೇ ಮುಹೂರ್ತ ಮತ್ತು ಸ್ವಾಮೀಜಿಗಳ ಹೇಳಿಕೆಯಂತೆ ನಡೆದುಕೊಂಡಿಲ್ಲ. ಸಾಮಾನ್ಯ ಪ್ರಜೆಯಾಗಿ ಬಂದು ನಾಮಪತ್ರ ಸಲ್ಲಿಸಿದ್ದೇನೆ ಎಂದು ಹೇಳಿದರು.

ಬಿದರಿಯವರು ರಾಜಕಾರಣಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮ­ಯ್ಯನವರು ಇತ್ತೀಚೆಗೆ ಹೇಳಿಕೆ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಈಗಿನ ರಾಜಕಾರಣಿಗಳ ತರ ಅಲ್ಲ ನಾನೊಬ್ಬ ಪ್ರಾಮಾಣಿಕ ಅಧಿಕಾರಿ­ಯಾಗಿ ಕೆಲಸ ಮಾಡಿದ ವ್ಯಕ್ತಿಯಾಗಿದ್ದು ಜನರ ನೋವು ಯಾವು ರೀತಿ ಅರ್ಥೈಸಿಕೊಳ್ಳಬೇಕು ಎಂಬ ತಿಳುವಳಿಕೆ ಇದೆ’ ಎಂದು ಪ್ರತಿಕ್ರಿಯೆ ನೀಡಿದರು.

ಶಂಕರ ಬಿದರಿ ನಾಮಪತ್ರ ಸಲ್ಲಿಕೆ
ಬಾಗಲಕೋಟೆ:
ನೂತನ ಜನಶಕ್ತಿ ಪಕ್ಷವನ್ನು ಕಟ್ಟಿ ರಾಜಕೀಯ ಅಖಾಡಕ್ಕೆ ಇಳಿಯಲು ತಯಾರಿ ನಡೆಸಿರುವ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಬಾಗಲಕೋಟೆ ಲೋಕಸಭೆ ಮತಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಮೂಲಕ ತಮ್ಮ ರಾಜಕೀಯ ದ್ವಿತೀಯ ಇನಿಂಗ್ಸ್ ಪ್ರಾರಂಭಿಸಿದ್ದಾರೆ.

ಚುನಾವಣೆ ಆಯೋಗದಿಂದ ಜನಶಕ್ತಿ ಪಕ್ಷಕ್ಕೆ ಮಾನ್ಯತೆ ಸಿಗದ  ಹಿನ್ನೆಲೆಯಲ್ಲಿ  ಜಿಲ್ಲಾಧಿಕಾರಿಗಳ ಕಚೇರಿಗೆ ತಮ್ಮ ಕೆಲ ಬೆಂಬಲರೊಂದಿಗೆ ಬುಧವಾರ ಬಂದ ಶಂಕರ ಬಿದರಿ ಜಿಲ್ಲಾ ಚುನಾವಣೆ ಅಧಿಕಾರಿ ಆಗಿರುವ ಮನೋಜ ಜೈನ್ ಅವರಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅರವಿಂದ ಎಂ., ಎಸ್.ಜಿ. ಮಠ, ಎಸ್.ಕೆ. ಮಗಜಿ, ಭಾವಿಮಠ, ಜಗದೀಶ ಹಳ್ಳೂರ, ರಾಜೇಶ ಮಗಜಿ, ಗೋಪಾಲ್ ರಾಠೋಡ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.