ADVERTISEMENT

ಹಿಪ್ಪರಗಿ ಆಣೆಕಟ್ಟು ಖಾಲಿ: ಹೆಚ್ಚಾಗಲಿದೆ ನೀರಿನ ಸಮಸ್ಯೆ

ಬರಿದಾದ ಕೃಷ್ಣಾ ನದಿ: ಸಾರ್ವಜನಿಕರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 14 ಮೇ 2018, 6:16 IST
Last Updated 14 ಮೇ 2018, 6:16 IST
ರಬಕವಿ ಬನಹಟ್ಟಿ ಹಿಪ್ಪರಗಿ ಜಲಾಶಯದ ಮುಂಭಾಗವು ಸಂಪೂರ್ಣವಾಗಿ ಖಾಲಿಯಾಗಿರುವುದು.
ರಬಕವಿ ಬನಹಟ್ಟಿ ಹಿಪ್ಪರಗಿ ಜಲಾಶಯದ ಮುಂಭಾಗವು ಸಂಪೂರ್ಣವಾಗಿ ಖಾಲಿಯಾಗಿರುವುದು.   

ರಬಕವಿ -ಬನಹಟ್ಟಿ : ಉತ್ತರ ಕರ್ನಾಟಕದ ಜೀವನದಿಯಾಗಿರುವ ಕೃಷ್ಣೆ ಖಾಲಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸಮೀಪದ ಹಿಪ್ಪರಗಿ ಜಲಾಶಯ ಕೂಡ ಖಾಲಿಯಾಗಿದ್ದು ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಪ್ರದೇಶದ ಲಕ್ಷಾಂತರ ಜನ ಮತ್ತು ಜಾನುವಾರುಗಳು ಮುಂಬರುವ ದಿನಗಳಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಲಿದೆ. ಅದಾಗಲೇ ರಬಕವಿ-ಬನಹಟ್ಟಿ ತಾಲ್ಲೂಕಿನ ಹಲವೆಡೆ ನೀರಿನ ಸಮಸ್ಯೆ ಪ್ರಾರಂಭವಾಗಿದೆ.

ಬರುವ ಜೂನ್‌ನಲ್ಲಿ ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಮಳೆಯಾಗಿ ನೀರು ಹರಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಲ್ಲಿಯವರೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಧಾನಸಭೆ ಚುನಾವಣೆ ನೆಪದಲ್ಲಿ ನೀರಿನ ಸಮಸ್ಯೆ ಮರೆತಿದ್ದಾರೆ. ಕೆಲವೇ ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆ ‌ಹೆಚ್ಚಾಗಲಿದ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿ ಬಾರಿ ಕೃಷ್ಣಾನದಿ ಬತ್ತಿದಾಗ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ನೀರು ಬಿಡಿಸಿಕೊಂಡು ಬರುತ್ತಿದ್ದರು. ಆದರೆ ಈ ಬಾರಿ ರಾಜ್ಯದಲ್ಲಿ ಚುನಾವಣೆ ಇರುವುದರಿಂದ ಜನಪತ್ರಿನಿಧಿಗಳು ಮತ್ತು ಅಧಿಕಾರಿಗಳು ಈವರೆಗೂ ಈ ಬಗ್ಗೆ ಗಮನ ಹರಿಸಿಲ್ಲ. ಕೃಷ್ಣಾ ನದಿಯು ಬೇಸಿಗೆಯಲ್ಲಿ ಸಂಪೂರ್ಣ ಬತ್ತುವುದರಿಂದ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಕೂಡಲೇ ಮಹಾರಾಷ್ಟ್ರಕ್ಕೆ ನಿಯೋಗ ತೆರಳಿ ಅಲ್ಲಿಯ ವಿವಿಧ ಜಲಾಶಯಗಳಿಂದ ನೀರನ್ನು ಬಿಡಿಸಿಕೊಂಡು ಬರಬೇಕು ಎಂಬುದು ಆಗ್ರಹಿಸಿದ್ದಾರೆ.

ADVERTISEMENT

ಕುಡಿಯುವ ನೀರನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಸಭೆ ಮಾಡಿದ್ದು, ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಕಳುಹಿಸಲಾಗಿದೆ. ಅಗತ್ಯವಿರುವ ಕಡೆ ಬೋರ್‌ವೆಲ್ ಹಾಗೂ ಬಾವಿಗಳ ಮೂಲಕ ನೀರು ಪೂರೈಸಲಾಗುವುದು ಎಂದು ರಬಕವಿ –ಬನಹಟ್ಟಿ ತಹಶೀಲ್ದಾರ್‌ ಪ್ರಶಾಂತ ಚನಗೊಂಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.