ADVERTISEMENT

ಹೀಗೊಂದು ಮಾದರಿ ಸರ್ಕಾರಿ ವಸತಿ ಶಾಲೆ

ಜಗದಾಳದ ಪರಿಸರ ಪ್ರೇಮಿ ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 11:36 IST
Last Updated 17 ಜೂನ್ 2018, 11:36 IST
ಸುಂದರವಾದ ಪರಿಸರ ಮಧ್ಯದಲ್ಲಿ ಓಡಾಡುತ್ತಿರುವ ವಿದ್ಯಾರ್ಥಿಗಳು
ಸುಂದರವಾದ ಪರಿಸರ ಮಧ್ಯದಲ್ಲಿ ಓಡಾಡುತ್ತಿರುವ ವಿದ್ಯಾರ್ಥಿಗಳು   

ರಬಕವಿ ಬನಹಟ್ಟಿ: ತಾಲ್ಲೂಕಿನ ಜಗದಾಳ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಉತ್ತಮ ಪರಿಸರದ ಜೊತೆ ಮಕ್ಕಳಲ್ಲಿ ಶಿಸ್ತು, ಸ್ವಾವಲಂಬನೆ ಬೆಳೆಸುವುದರ ಮೂಲಕ ಇತರೆ ವಸತಿ ನಿಲಯಗಳಿಗೆ ಮಾದರಿಯಾಗಿದೆ.

ಇಲ್ಲಿ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ 100 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ವಸತಿ ಶಾಲೆಗೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ವಸತಿ ನಿಲಯದ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿದ್ದು, ಪ್ರತ್ಯೇಕವಾದ ಸ್ನಾನ, ಬಟ್ಟೆ ತೊಳೆಯುವ ಸ್ಥಳ, ವಸತಿ ನಿಲಯದ ಆವರಣದಲ್ಲಿಯ ಹತ್ತಾರು ಮರಗಳು ಸುತ್ತಲೂ ಬೆಳೆದ ಬಳ್ಳಿಗಳು ವಸತಿ ನಿಲಯವನ್ನು ಹಸಿರನ್ನಾಗಿಸಿವೆ.

ಇಲ್ಲಿರುವ ಪ್ರತಿಯೊಂದು ಕೋಣೆಗೆ ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರುಗಳನ್ನು, ಡಾ.ಜಗಜ್ಜೀವನರಾಂ ಮತ್ತು ಡಾ. ಅಂಬೇಡ್ಕರ್‌ ಸೇರಿದಂತೆ ಅನೇಕ ರಾಷ್ಟ್ರ ನಾಯಕರ ಹೆಸರುಗಳನ್ನು ಇಡಲಾಗಿದೆ. ಶಾಲೆಯ ಸುತ್ತ ಮುತ್ತಲಿನ ಎಲ್ಲ ಪ್ರದೇಶವನ್ನು ಸಂಪೂರ್ಣ ಸಿಮೆಂಟ್‌ ಕಾಂಕ್ರೀಟ್‌ ಮಾಡಲಾಗಿದೆ.

ADVERTISEMENT

ಗಮನ ಸೆಳೆಯುವ ಕೈತೋಟ

ಶಾಲೆಯ ಸುತ್ತಲೂ ಇರುವ ಕೈತೋಟ ಎಲ್ಲರ ಗಮನ ಸೆಳೆಯುತ್ತದೆ. ಮೊದಲು ವಸತಿ ನಿಲಯದ ಸುತ್ತಲೂ ಪ್ರದೇಶ ಗುಡ್ಡದ ಪ್ರದೇಶವಾಗಿತ್ತು. ಅದನ್ನು ಒಡೆದು ಅಲ್ಲಿ ಮಣ್ಣು ಹಾಕಿಸಿ ಅಲ್ಲಿ ಸದ್ಯ ವಿವಿಧ ರೀತಿಯ ತರಕಾರಿಯನ್ನು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆದ ತರಕಾರಿಗಳನ್ನು ದಿನ ನಿತ್ಯದ ಅಡುಗೆಯಲ್ಲಿ ಬಳಸಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ದೊರೆಯುತ್ತಿದೆ. ಉತ್ತಮ ಪರಸರ ಇರುವುದರಿಂದ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ.

ಈ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಇಷ್ಟೊಂದು ಸ್ವಚ್ಛ ಮತ್ತು ಸುಂದರ ಪರಿಸರದಲ್ಲಿ ಓದುವುದಕ್ಕೆ ಮತ್ತು ಇರುವುದಕ್ಕೆ ಮೂಲ ಕಾರಣ ಇಲ್ಲಿಯ ವಾರ್ಡನ್‌  ಮಂಜುನಾಥ ಆಲಗೂರ. ಅವರ ಒಂದು ಪರಿಶ್ರಮದಿಂದಾಗಿ ಇಂದು ವಸತಿ ಶಾಲೆ ಮಾದರಿ ವಸತಿ ಶಾಲೆಯಾಗಿದೆ.

‘ವಸತಿ ನಿಲಯದ ಸುಂದರ ಪರಿಸರ ಹಾಗೂ ಕೈ ತೋಟ ಬೆಳೆಸುವಲ್ಲಿ ಇಲ್ಲಿಯ ಪ್ರತಿಯೊಬ್ಬ ವಿದ್ಯಾರ್ಥಿಯ ಶ್ರಮದಾನ ಮಹತ್ವವಾದುದು. ಶಾಲೆಯಲ್ಲಿ ಆನ್‌ ಲೈನ್‌ ಹಾಜರಾತಿ ವ್ಯವಸ್ಥೆ ಇರುವುದರಿಂದ ಹಾಜರಾತಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್’ಲ ಎನ್ನುತ್ತಾರೆ ವಸತಿ ನಿಲಯದ ವಾರ್ಡನ್‌ ಮಂಜುನಾಥ ಆಲಗೂರ.

ವಿಶ್ವಜ ಕಾಡದೇವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.