ADVERTISEMENT

ಬಡವರಿಗೆ ಒಂದು ರೂಪಾಯಿಗೆ ಚಿಕಿತ್ಸೆ!

ಕೃಷ್ಣೆ ನಾಡಿನೊಂದಿಗೆ ವಿಶ್ವೇಶತೀರ್ಥರದ್ದು ಆರು ದಶಕಗಳ ನಂಟು

ವೆಂಕಟೇಶ್ ಜಿ.ಎಚ್
Published 29 ಡಿಸೆಂಬರ್ 2019, 14:30 IST
Last Updated 29 ಡಿಸೆಂಬರ್ 2019, 14:30 IST
ಬಾಗಲಕೋಟೆಯಲ್ಲಿ 1986ರಲ್ಲಿ ಜನಸೇವಾ ಆಸ್ಪತ್ರೆ ಕಟ್ಟಡಕ್ಕೆ ದೇಣಿಗೆ ಸಂಗ್ರಹಿಸಲು ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲು ಬಂದಿದ್ದ ವರನಟ ಡಾ.ರಾಜಕುಮಾರ ದಂಪತಿಯೊಂದಿಗೆ ಪೇಜಾವರ ಮಠದ ವಿಶ್ವೇಶತೀರ್ಥರು ಪತ್ರಿಕಾಗೋಷ್ಠಿ ನಡೆಸಿದ್ದರು.
ಬಾಗಲಕೋಟೆಯಲ್ಲಿ 1986ರಲ್ಲಿ ಜನಸೇವಾ ಆಸ್ಪತ್ರೆ ಕಟ್ಟಡಕ್ಕೆ ದೇಣಿಗೆ ಸಂಗ್ರಹಿಸಲು ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲು ಬಂದಿದ್ದ ವರನಟ ಡಾ.ರಾಜಕುಮಾರ ದಂಪತಿಯೊಂದಿಗೆ ಪೇಜಾವರ ಮಠದ ವಿಶ್ವೇಶತೀರ್ಥರು ಪತ್ರಿಕಾಗೋಷ್ಠಿ ನಡೆಸಿದ್ದರು.   

ಬಾಗಲಕೋಟೆ: ಕೃಷ್ಣೆಯ ನಾಡು ಬಾಗಲಕೋಟೆಯೊಂದಿಗೆಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥರದ್ದು ಸುದೀರ್ಘ 60 ವರ್ಷಗಳ ಅವಿನಾಭಾವ ನಂಟು. ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಹಾಗೂ ಕೃಷ್ಣೆಯ ನಾಡಿನ ಪ್ರೀತಿ ಗಳಿಸಿದ್ದರು.

1965ರಲ್ಲಿ ಅಖಿಲ ಭಾರತ ಮಾಧ್ವಮಹಾಮಂಡಳ ಆರಂಭಿಸಿ ಇಲ್ಲಿನ ಕಾರಿಹಳ್ಳದ ಸಮೀಪ ಉಚಿತ ವಸತಿ ನಿಲಯ ಆರಂಭಿಸಿ ಬ್ರಾಹ್ಮಣ ಸಮುದಾಯದ ಬಡ ಮಕ್ಕಳಿಗೆ ಆಶ್ರಯ ಕಲ್ಪಿಸಿದ್ದರು. ಈಗಲೂ ಅದು ಕೃಷ್ಣ ಮಠದ ಹೆಸರಿನಲ್ಲಿ ಅದೇ ಕೈಂಕರ್ಯ ಮುಂದುವರೆಸಿದೆ.

ಚಿಕಿತ್ಸೆಗೆ ₹1 ಶುಲ್ಕ: 1986ರಲ್ಲಿ ಜಿಲ್ಲೆಯಲ್ಲಿ ತೀವ್ರ ಬರಗಾಲವಿತ್ತು. ಈ ಅವಧಿಯಲ್ಲಿಯೇ ಸಾಮಾನ್ಯ ಜನರ ಸೇವೆಗೆ ಟೊಂಕಕಟ್ಟಿ ನಿಂತ ಶ್ರೀಗಳು ಬಾಗಲಕೋಟೆಯ ಹಳೆ ಅಂಜುಮನ್ ಶಾಲೆಯ ಸಮೀಪದ ಜೋರಾಪುರ ಗಿರಣಿ ಬಳಿ 1986ರಲ್ಲಿ ಜನಸೇವಾ ಚಿಕಿತ್ಸಾಲಯ ಆರಂಭಿಸಿದ್ದರು.

ADVERTISEMENT

ವೈದ್ಯಕೀಯ ಸವಲತ್ತು ಬಡವರಿಗೆ ಸುಲಭವಾಗಿ ದೊರಕಲಿ ಎಂಬ ಉದ್ದೇಶದಿಂದ ಚಿಕಿತ್ಸೆ ಪಡೆದವರಿಂದ ಶುಲ್ಕದ ರೂಪದಲ್ಲಿ ಒಂದು ರೂಪಾಯಿ ಮಾತ್ರ ಪಡೆಯಲಾಗುತ್ತಿತ್ತು. ಇಂಜೆಕ್ಷನ್‌ಗೆ 25 ಪೈಸೆ ಕೊಡಬೇಕಿತ್ತು. ಶ್ರೀಗಳ ಈ ಕಾರ್ಯದಲ್ಲಿ ಇಲ್ಲಿನ ಪದ್ಮನಾಭ ಹೋಟೆಲ್‌ನ ಮಾಲೀಕ ಲಕ್ಷ್ಮೀನಾರಾಯಣ ಮಾರಕೋಡ ಸಾಹುಕಾರರು ಬೆನ್ನಿಗೆ ನಿಂತಿದ್ದರು. ವಿಶೇಷವೆಂದರೆ ಆಸ್ಪತ್ರೆಗೆ ಕಟ್ಟಡ ಕಟ್ಟಲು ಹಣ ಸಂಗ್ರಹಕ್ಕಾಗಿ ವರನಟ ಡಾ.ರಾಜಕುಮಾರ್ ಬಾಗಲಕೋಟೆಯಲ್ಲಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಬಾಗಲಕೋಟೆಯ ತಜ್ಞ ವೈದ್ಯರಾಗಿ ಹೆಸರು ಮಾಡಿದ್ದ ಡಾ.ವಿ.ಎನ್.ಜೋಶಿ, ಡಾ.ಎಂ.ಎಂ.ಶಿರೂರ, ಡಾ.ಎ.ಬಿ.ಡಂಬಳ, ಡಾ.ಜಿ.ಆರ್.ದಾತಾರ ಜನಸೇವಾ ಆಸ್ಪತ್ರೆಯಿಂದಲೇ ತಮ್ಮ ವೃತ್ತಿ ಬದುಕು ಆರಂಭಿಸಿದ್ದರು.

’1986ಲ್ಲಿಯೇ ಬಾಗಲಕೋಟೆ ಸುತ್ತಲಿನ ಕೆರೆ ಹೂಳೆತ್ತುವ ಜೊತೆಗೆ ಸಮೀಪದ ಹವೇಲಿ ಬಳಿ ಗೋಶಾಲೆ ಸ್ಥಾಪನೆ ಮಾಡಿ 1600 ಗೋವುಗಳಿಗೆ ಆಶ್ರಯ ನೀಡಿದ್ದರು. ಮುಂದೆ ತಾಲ್ಲೂಕಿನ ನೀರಲಕೇರಿ ಗ್ರಾಮದ ಬಳಿ ವೃದ್ಧಾಶ್ರಮ ಸ್ಥಾಪಿಸಿದ್ದರು. ಅದೀಗ ಅನಾಥಾಲಯವಾಗಿ ಬದಲಾಗಿದೆ. 2008ರಲ್ಲಿ ನವನಗರದ ಹರಿಣಶಿಕಾರಿ ಕಾಲೊನಿಗೆ ತೆರಳಿದ್ದ ಅವರಿಗೆ ಅಲ್ಲಿನ ಭಕ್ತರು ಪಾದಪೂಜೆ ನೆರವೇರಿಸಿದ್ದರು‘ ಎಂದು ಬ್ರಾಹ್ಮಣ ಸಮಾಜದ ಹಿರಿಯರಾದ ಬಿಂದುಮಾಧವಾಚಾರ್ಯ ನಾಗಸಂಪಿಗೆ ಸ್ಮರಿಸುತ್ತಾರೆ.

ತುಲಾಭಾರ ಕೊನೆಯ ಕಾರ್ಯಕ್ರಮ:ವರ್ಷಕ್ಕೆ ಕನಿಷ್ಠ 2ರಿಂದ 3 ಬಾರಿ ಬಾಗಲಕೋಟೆಗೆ ಬರುತ್ತಿದ್ದ ಪೇಜಾವರ ಶ್ರೀಗಳು ಇಲ್ಲಿನ ನವನಗರದ ಏಳನೇ ಸೆಕ್ಟರ್‌ನಲ್ಲಿರುವ ಶ್ರೀಕೃಷ್ಣ ಮಠದಲ್ಲಿ ಉಳಿಯುತ್ತಿದ್ದರು. ಅವರಿಗೆ 80 ವರ್ಷ ಆಗಿದ್ದ ಕಾರಣ ಕಳೆದ ಮಾರ್ಚ್ 3ರಂದು ನಗರದ ಭಕ್ತರು ಶ್ರೀಗಳ ತುಲಾಭಾರ ಮಾಡಿ ಗೌರವಿಸಿದ್ದರು. ಅದೇ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.