ADVERTISEMENT

ಬಾಗಲಕೋಟೆ | ಫಲಾನುಭವಿಗಳ ಹೆಸರಿನಲ್ಲಿ ₹2.83 ಕೋಟಿ ವಂಚನೆ

ಕಾರ್ಮಿಕರಿಗೆ ತಲುಪಬೇಕಾದ ಹಣ ಅನ್ಯರ ಪಾಲು

ಬಸವರಾಜ ಹವಾಲ್ದಾರ
Published 16 ಜುಲೈ 2024, 6:00 IST
Last Updated 16 ಜುಲೈ 2024, 6:00 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬಾಗಲಕೋಟೆ: ಪ್ರವಾಸೋದ್ಯಮ ಇಲಾಖೆಯ ಖಾತೆಯಲ್ಲಿದ್ದ ಹಣವನ್ನು ಬೇರೆ ಖಾತೆಗೆ ವರ್ಗ ಮಾಡಿದ್ದರೆ, ಕಾರ್ಮಿಕರ ಇಲಾಖೆಯಲ್ಲಿ ಫಲಾನುಭವಿಗಳಿಗೆ ದೊರೆಯಬೇಕಿದ್ದ ₹2.83 ಕೋಟಿ ಹಣವನ್ನು ಹೊರಗುತ್ತಿಗೆಯ ನೌಕರೊಬ್ಬರು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.

ಕಾರ್ಮಿಕ ಬೆವರಿನ ಶ್ರಮಕ್ಕೆ ಸೇರಬೇಕಿದ್ದ ಹಣವು ಅನ್ಯರ ಪಾಲಾಗಿದೆ. ಫೆಬ್ರವರಿಯಲ್ಲಿ ಪ್ರಕರಣ ಬೆಳಕಿಗೆ ಬಂದಾಗ ಅದರ ಮೊತ್ತ ₹37.12 ಲಕ್ಷವಿತ್ತು. ಈಗ ಅದರ ಮೊತ್ತ ಮೂರು ಕೋಟಿ ಸಮೀಪಿಸಿದೆ. ಮುಂದಿನ ದಿನಗಳಲ್ಲಿ ಅದರ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ.

ADVERTISEMENT

ಬಾಗಲಕೋಟೆಯ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ದ್ಯಾವಪ್ಪ ತಳವಾರ ಎಂಬಾತ ವಂಚನೆ ಮಾಡಿದ್ದಾನೆ ಎಂದು ದೂರು ನೀಡಲಾಗಿದೆ.

404 ಕಾರ್ಮಿಕ ಫಲಾನುಭವಿಗಳಿಗೆ ₹2.83 ಕೋಟಿ ವಂಚನೆಯಾಗಿದೆ. ಲೆಕ್ಕ ಪರಿಶೋಧನೆ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಎಷ್ಟಾಗಿದೆ ಎಂಬುದು ಗೊತ್ತಾಗಲಿದೆ ಎನ್ನುತ್ತಾರೆ ಬಾಗಲಕೋಟೆ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಸುಂಬಡ.

ಧನಸಹಾಯ ದೋಚಿದ್ದೇಗೆ: ‌ಕಟ್ಟಡ ಹಾಗೂ ಇತರೆ ನಿರ್ಮಾಣ ನೋಂದಾಯಿತ ಕಾರ್ಮಿಕ ಫಲಾನುಭವಿಗಳಿಗೆ ಇಲಾಖೆ ವತಿಯಿಂದ ಕಾರ್ಮಿಕರ ಮಕ್ಕಳ ಮದುವೆ ಹಾಗೂ ಕಾರ್ಮಿಕರಿಗೆ ವೈದ್ಯಕೀಯ ವೆಚ್ಚದ ಧನಸಹಾಯ ನೀಡಲಾಗುತ್ತದೆ.

ಫಲಾನುಭವಿಗಳಿಗೆ ಮಂಜೂರು ಮಾಡುವ ಕಡತವನ್ನು ಕಾರ್ಮಿಕ ಅಧಿಕಾರಿಗೆ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ. ಬೆಂಗಳೂರನಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಳುಹಿಸಿ, ಅಲ್ಲಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಆದರೆ, ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದ್ಯಾವಪ್ಪ ಸಹಾಯಧನ ಕೋರಿ ಬಂದಿದ್ದ ಅರ್ಜಿ ಸಂಖ್ಯೆ ಹಾಗೂ ಫಲಾನುಭವಿಗಳ ಹೆಸರು ಸರಿಯಾಗಿ ಬರೆದು ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಐಎಫ್‌ಸಿ ಕೋಡ್ ಅನ್ನು ತನ್ನ ಅಥವಾ ಸಂಬಂಧಿಕರ ಖಾತೆಯದ್ದು ನೀಡುತ್ತಿದ್ದ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.