ADVERTISEMENT

ಕಬ್ಬು ಪ್ರತಿ ಟನ್‌ಗೆ ₹3,163 ನಿಗದಿ: ಬಾಲಚಂದ್ರ ಭಕ್ಷಿ

ಗೋಧಾವರಿ ಸಕ್ಕರೆ ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಭಕ್ಷಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 11:52 IST
Last Updated 28 ಅಕ್ಟೋಬರ್ 2020, 11:52 IST
ಮಹಾಲಿಂಗಪುರದ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಭಕ್ಷಿ ಚಾಲನೆ ನೀಡಿದರು
ಮಹಾಲಿಂಗಪುರದ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಭಕ್ಷಿ ಚಾಲನೆ ನೀಡಿದರು   

ಮಹಾಲಿಂಗಪುರ: ‘ಸಮೀರವಾಡಿಯ ಗೋಧಾವರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿಗೆ ಎಫ್.ಆರ್.ಪಿ ದರದಂತೆ (ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಸೇರಿ) ನ್ಯಾಯ ಮತ್ತು ಲಾಭದಾಯಕವಾದ ಬೆಲೆ ₹3,163 ಪ್ರತಿ ಟನ್‌ಗೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ’ ಎಂದು ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಭಕ್ಷಿ ಹೇಳಿದರು.

ಮಂಗಳವಾರ ಜರುಗಿದ 2020-21ನೇ ಸಾಲಿನ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಕಾಯಕ್ರಮದ ಹೋಮ, ಹವನ ಮತ್ತು ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಕಬ್ಬು ಬೆಳೆಗಾರರು ಮತ್ತು ರೈತರು ಗುಣಮಟ್ಟದ ಕಬ್ಬು ಪೂರೈಸಿ ಉತ್ತಮ ಧಾರಣೆ ಪಡೆದುಕೊಳ್ಳಬೇಕು. ಪ್ರಸಕ್ತ ಸಾಲಿಗೆ ಕಬ್ಬಿನ ಬೆಲೆಯಾಗಿ ಪ್ರತಿಟನ್‌ಗೆ ₹2,500ರೂ(ಕಬ್ಬು ಕಟಾವು-ಸಾಗಾಣಿಕೆ ವೆಚ್ಚ ಹೊರತು ಪಡಿಸಿ) ಘೋಷಿಸಲು ಸಂತೋಷವೆನಿಸುತ್ತದೆ. ರೈತರು ಮತ್ತು ಕಾರ್ಖಾನೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇವೆರಡರಲ್ಲಿ ಯಾವುದಕ್ಕೂ ಹಾನಿಯಾದರೂ ಇಬ್ಬರಿಗೂ ನಷ್ಟ. ಹಾಗಾಗಿ ರೈತರು ಗುಣಮಟ್ಟದ ಕಬ್ಬು ಪೂರೈಸಬೇಕು’ ಎಂದು ವಿನಂತಿಸಿದರು.

ADVERTISEMENT

ಮುಧೋಳ ಸಿಪಿಐ ಎಚ್.ಆರ್.ಪಾಟೀಲ್ ಮಾತನಾಡಿ, ‘ರೈತರು ಮತ್ತು ಟ್ರಾಕ್ಟರ್ ಮಾಲೀಕರು ತಮ್ಮ ವಾಹನಗಳಿಗೆ ಕಡ್ಡಾಯವಾಗಿ ನಂಬರ ಪ್ಲೇಟ್, ಇನ್ಶುರೆನ್ಸ್ ಹೊಂದಿರಬೇಕು. ವಾಹನ ಹಿಂದೆ, ಮುಂದೆ ಮತ್ತು ಎರಡು ಪಕ್ಕದ ಎರಡು ಬದಿಗಳಲ್ಲಿ ರೇಡಿಯಂ ಅಳವಡಿಸಬೇಕು. ಚಾಲಕರಿಗೆ ಚಾಲನಾ ಪರವಾನಗಿ ಪತ್ರ ಹೊಂದಿರುವಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ಟ್ರಾಕ್ಟರ್‌ನಲ್ಲಿ ಟೇಪ್ ಹಚ್ಚಬಾರದು, ಕಬ್ಬನ್ನು ಟ್ರಾಕ್ಟರ್ ಡಬ್ಬಿ ಬಿಟ್ಟು ಹೊರಬರದಂತೆ ತುಂಬಬೇಕು. ಮುಖ್ಯವಾಗಿ ಮದ್ಯಪಾನ ಮಾಡುವ ಚಾಲಕರಿಗೆ ಸೂಕ್ತ ಎಚ್ಚರಿಕೆ ನೀಡಿ, ಪ್ರಸಕ್ತ ಹಂಗಾಮಿನಲ್ಲಿ ಯಾವುದೇ ಅಪಘಾತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು’ ಎಂದು ರೈತರಿಗೆ ಮತ್ತು ಟ್ರಾಕ್ಟರ್ ಮಾಲೀಕರಿಗೆ ತಿಳಿಸಿದರು.

ಕಾರ್ಖಾನೆ ಅಧಿಕಾರಿಗಳಾದ ಅತುಲ್ ಅಗರವಾಲ್, ಗಾಂವಕರ್, ಕಿಲಾರಿ, ರಾಮಚಂದ್ರ ಸೋನವಾಲ್ಕರ್, ಎಂ.ಎ.ಕಡಿವಾಳ, ಗ್ರಾಪಂ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಸನದಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ರೈತರಾದ ಬಿ.ಜಿ.ಹೊಸೂರ, ಲಕ್ಷ್ಮಣ ಹುಚ್ಚರೆಡ್ಡಿ, ಮಹಾದೇವ ಮಾರಾಪೂರ, ಮಲಗೌಡ ಪಾಟೀಲ್, ರಾಮಕೃಷ್ಣ ಬುದ್ನಿ, ವೆಂಕಪ್ಪ ಕೇದಾರಿ, ಯಲ್ಲಪ್ಪ ಹಟ್ಟಿ, ಮಜದೂರ್ ಯುನಿಯನ್ ಅಧ್ಯಕ್ಷ ಬಸವರಾಜ ಪೂಜಾರ, ಬನಹಟ್ಟಿ ಪಿಎಸ್ಐ ರವಿಕುಮಾರ ಧರ್ಮಟ್ಟಿ, ಮಹಾಲಿಂಗಪುರ ಪಿಎಸ್ಐ ಜಿ.ಎಸ್.ಉಪ್ಪಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.