ADVERTISEMENT

ಮಹಿಳೆಯರ ಜನಧನ ಖಾತೆಗೆ ₹500 ಜಮಾ

ಬ್ಯಾಂಕ್ ಖಾತೆಯ ಸಂಖ್ಯೆವಾರು ಇಂದಿನಿಂದ ಹಣ ಲಭ್ಯ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 13:14 IST
Last Updated 2 ಏಪ್ರಿಲ್ 2020, 13:14 IST
ಬಾಗಲಕೋಟೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ.ರಾಜೇಂದ್ರ ಬ್ಯಾಂಕರ್‌ಗಳ ಸಭೆ ನಡೆಸಿದರು
ಬಾಗಲಕೋಟೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ.ರಾಜೇಂದ್ರ ಬ್ಯಾಂಕರ್‌ಗಳ ಸಭೆ ನಡೆಸಿದರು   

ಬಾಗಲಕೋಟೆ : ಕೋವಿಡ್-19 ಹರಡುವಿಕೆ ತಡೆಗಟ್ಟಲು ಲಾಕ್‌ಡೌನ್ ಅವಧಿಯಲ್ಲಿ ಬಡವರಿಗೆ ನೆರವಾಗಲು ಕೇಂದ್ರ ಸರ್ಕಾರದಿಂದ ಜನಧನ ಯೋಜನೆಯಡಿ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹500ರಂತೆ ಮುಂದಿನ ಮೂರು ತಿಂಗಳು ಜಮಾ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಬ್ಯಾಂಕರ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏಪ್ರಿಲ್ 2 ರಂದು ಹಣ ಜಮಾ ಆಗಲಿದೆ. ಅದೇ ರೀತಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುವ ₹6 ಸಾವಿರ ಕೂಡ ಜಮಾ ಆಗಲಿದೆ ಎಂದು ತಿಳಿಸಿದರು.

ಮಹಿಳಾ ಪಿಎಂಜೆಡಿಎಲ್ ಖಾತೆದಾರರು ತಮ್ಮ ಬ್ಯಾಂಕ್ ಖಾತೆಯ ಸಂಖ್ಯೆಯ ಕೊನೆಯಲ್ಲಿ 0 ಅಥವಾ 1 ಇದ್ದವರು ಏಪ್ರಿಲ್ 3 ರಂದು, 2 ಅಥವಾ 3 ಇದ್ದರೆ ಏಪ್ರಿಲ್ 4 ರಂದು, 4 ಅಥವಾ 5 ಇದ್ದರೆ ಏಪ್ರಿಲ್ 7 ರಂದು, 6 ಅಥವಾ 7 ಇದ್ದರೆ ಏಪ್ರಿಲ್ 8 ರಂದು ಹಾಗೂ 8 ಅಥವಾ 9 ಇದ್ದರೆ ಏಪ್ರಿಲ್ 9 ರಂದು ಖಾತೆಯೊಳಗಿನ ಹಣ ತೆಗೆದುಕೊಳ್ಳಬಹುದಾಗಿದೆ ಎಂದರು.

ADVERTISEMENT

ಬ್ಯಾಂಕರ್ಸ್‌ಗಳಿಗೂ ಈಗಾಗಲೇ ಸ್ಯಾನಿಟೈಸರ್ ಖರೀದಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ ಸ್ಯಾನಿಟೈಸರ್ ಲಭ್ಯವಿದ್ದು, ಅವರಿಂದ ಖರೀದಿಸಿ ಕಡ್ಡಾಯವಾಗಿ ಎಟಿಎಂ ಹಾಗೂ ಬ್ಯಾಂಕ್‌ಗಳಲ್ಲಿ ಇಡುವಂತೆ ಸೂಚಿಸಿದರು. ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಲು ಕ್ರಮಕೈಗೊಳ್ಳಲು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಲೀಡ್‌ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಗೋಪಾಲರೆಡ್ಡಿ, ಬಿಡಿಸಿಸಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಎಸ್.ಎಂ.ದೇಸಾಯಿ, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ವೈ.ಸತೀಶಬಾಬು, ಕೆವಿಜಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ರಮೇಶ ಯಡಹಳ್ಳಿ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.