ADVERTISEMENT

‘ಜ.14ಕ್ಕೆ ಅಂತಿಮ ತೀರ್ಮಾನ’

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 8:57 IST
Last Updated 12 ಜನವರಿ 2018, 8:57 IST
ಆಂಜನೇಯ
ಆಂಜನೇಯ   

ಬಾಗಲಕೋಟೆ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಕುರಿತಂತೆ ಜ.14 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ಅಲ್ಲಿಯೇ ಎಲ್ಲವೂ ಇತ್ಯರ್ಥವಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿಗಳು ಯಾವುದೇ ಜಾತಿಯನ್ನು ಎತ್ತಿಕಟ್ಟುತ್ತಿಲ್ಲ. ಎಲ್ಲರಿಗೂ ಸಮಾನತೆ ಕಲ್ಪಿಸಿದ್ದಾರೆ. ಮಾದಿಗ ಜನಾಂಗಕ್ಕೆ ಸಾಕಷ್ಟು ಉಪಕಾರ ಮಾಡಿದ್ದಾರೆ. 2012ರಲ್ಲಿಯೇ ಸದಾಶಿವ ಆಯೋಗದ ವರದಿ ಸ್ವೀಕಾರ ಮಾಡಿದ್ದ ಬಿಜೆಪಿ ಆಗೇಕೆ ಕೇಂದ್ರಕ್ಕೆ ಶಿಫಾರಸು ಮಾಡಿರಲಿಲ್ಲ ಎಂದು ಪ್ರಶ್ನಿಸಿದರು.

‘ವರದಿ ಶಿಫಾರಸು ಮಾಡಲು ನಾವು ಎಲ್ಲ ರೀತಿಯ ಪ್ರಯತ್ನ ಮಾಡಿದ್ದೇವೆ. ಇದು ದಲಿತ ಸಂಘಟನೆಗಳ ಒಕ್ಕೊರಲ ಕೂಗಾಗಿದೆ. ಸಂಪುಟದಲ್ಲಿ ಮುಖ್ಯಮಂತ್ರಿಗಳು ಏನು ಹೇಳುತ್ತಾರೆ. ಅದೇ ಒಮ್ಮತದ ನಿರ್ಧಾರವಾಗಲಿದೆ. ಸಭೆಯಲ್ಲಿ ಎಲ್ಲವೂ ತೀರ್ಮಾನವಾಗಲಿದೆ. ಅಲ್ಲಿಯವರೆಗೆ ಕಾಯಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

ಗೋವಾ ಮುಖ್ಯಮಂತ್ರಿ ಮನೋ ಹರ ಪರ್ರೀಕರ್‌ ಅವರು ಮಹದಾಯಿ ಮಾತುಕತೆ ಇಲ್ಲವೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅದು ಸರಿಯಲ್ಲ. ನಾವು ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ. ಒಂದು ರಾಜ್ಯದ ಕುಡಿಯುವ ನೀರಿನ ಅಳಲನ್ನು ಗಂಭೀರವಾಗಿ ಪರಿಗಣಿ ಸಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕು. ಗೋವಾ, ಮಹಾರಾಷ್ಟ್ರ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪರ್ರೀಕರ್ ಬರೆದ ಪತ್ರವನ್ನು ಹಿಡಿದುಕೊಂಡು ನೀರು ಹರಿದೇ ಬಿಡ್ತು ಅಂತ ಓಡಾಡಿದ್ರು, ಆದರೆ ಮುಂದೆ ಏನಾಯ್ತು? ಎಂದು ಲೇವಡಿ ಮಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಉಗ್ರ ಹಾದಿಯಲ್ಲಿ ಹೋಗುತ್ತಿವೆ ಎಂದು ಹೇಳಿದ್ದಾರೆ ಹೊರತು ಉಗ್ರಗಾಮಿಗಳು ಎಂದು ಕರೆದಿಲ್ಲ. ಅವರ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಬಿಜೆಪಿ, ಆರ್‌ಎಸ್‌ಎಸ್‌ ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿಲ್ಲ. ಕರಾವಳಿಯಲ್ಲಿ ಯಾರು ಸತ್ತರೂ ಹಿಂದೂಗಳ ಕೊಲೆ ಎಂದು ಹೇಳುತ್ತಾರೆ. ನಾನು ಕೂಡ ಹಿಂದೂ ಎಂದ ಆಕ್ರೋಶ ವ್ಯಕ್ತಪಡಿಸಿದ ಆಂಜನೇಯ, ಕಾಂಗ್ರೆಸ್ ಪಕ್ಷ ಸರ್ವಧರ್ಮವನ್ನು ಗೌರವಿಸುತ್ತದೆ. ಎಲ್ಲರಿಗೂ ಸಮಾನ ಸ್ಥಾನಮಾನಗಳನ್ನು ಕಲ್ಪಿಸಿದೆ. ಬಿಜೆಪಿ ಅವರು ಧರ್ಮ–ಧರ್ಮಗಳ ನಡುವೆ ವಿಷ ಬೀಜ ಬಿತ್ತುವುದನ್ನು ನಿಲ್ಲಿಸಿದಾಗ ರಾಜ್ಯದಲ್ಲಿ ಮತೀಯ ಗಲಭೆಗಳು ನಿಲ್ಲುತ್ತವೆ’ ಎಂದರು.

‘ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯಕೊಡಿಸಲು ಜಾತಿಗಣತಿ ಮಾಡಲಾಗಿದೆ. ದೇಶದಲ್ಲಿ ಇಂತಹ ಕಾರ್ಯಕ್ಕೆ ಯಾರೂ ಕೂಡಾ ಕೈಹಾಕಿಲ್ಲ. ಆಯೋಗವು ಎಲ್ಲ ರೀತಿಯಿಂದಲೂ ತುಲನೆ ಮಾಡಿ ವರದಿ ಸಲ್ಲಿಸಿದ್ದು, ಸಮಯ ಹಿಡಿಯಲಿದೆ. ಹಾಗಾಗಿ ಜಾತಿಗಣತಿ ವರದಿ ವಿಳಂಬವಾಗಿದೆ. ಆ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸುತ್ತಾರೆ’ ಎಂದರು.

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದು ಸಮಾವೇಶ ನಡೆಸಿದರೂ ಏನೂ ಆಗೊಲ್ಲ. ಗುಜರಾತಿನಲ್ಲಿಯೇ ಅವರ ಹವಾ ಇಲ್ಲ. ಗುಜರಾತ್‌ನಲ್ಲಿ ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲಿ ಹೊಸ ನಾಯಕತ್ವವನ್ನು ಹುಟ್ಟು ಹಾಕಿದವರು ರಾಹುಲ್‌ ಗಾಂಧಿ ಅವರು. ಅಲ್ಲಿ ನಮ್ಮದೇ ನಿಜವಾದ ಗೆಲುವಾಗಿದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಅಭಿವೃದ್ಧಿಗೆ ಹಣದ ಹೊಳೆಯನ್ನೇ ಹರಿಸಿದೆ. ಎಸ್‌ಟಿಪಿ, ಟಿಎಸ್‌ಪಿಗೆ ನಾವೇ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರಕ್ಕೆ ದೈರ್ಯವಿದ್ದರೆ, ಸಾಮಾಜಿಕ ಕಳಕಳಿ ಇದ್ದರೆ ಜನಸಂಖ್ಯೆಗೆ ಅನುಗುಣವಾಗಿ ಅಂತಹ ಕಾರ್ಯಕ್ಕೆ ಮುಂದಾಗಲಿ’ ಎಂದರು.

ತಕ್ಷಣ ವರದಿ ಸಲ್ಲಿಸಲು ಕೋರುತ್ತೇನೆ

‘ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಪ್ರಸ್ತಾವನೆಗಳ ಪರಾಮರ್ಶೆಗೆ ಸರ್ಕಾರ ರಚಿಸಿದ ಸಮಿತಿ ವರದಿಯನ್ನು ಆರು ತಿಂಗಳ ಬದಲಿಗೆ ತಕ್ಷಣವೇ ಸಲ್ಲಿಸಲು ಸಂಬಂಧಿಸಿದವರಿಗೆ ಸೂಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋರುತ್ತೇನೆ’ ಎಂದು ಸಚಿವ ಆಂಜನೇಯ ಕೂಡಲಸಂಗಮದಲ್ಲಿ ತಿಳಿಸಿದರು.

ಬೀದರ್‌ ಜಿಲ್ಲೆ ಬಸವಕಲ್ಯಾಣದ ಬಸವ ಧರ್ಮ ಪೀಠ ಆವರಣದಲ್ಲಿ ಹರಳಯ್ಯ ಹಾಗೂ ಮಾದಾರ ಚನ್ನಯ್ಯ ಸಮುದಾಯ ಭವನ ನಿರ್ಮಾಣಕ್ಕೆ ₹ 3 ಕೋಟಿ ಮಂಜೂರು ಮಾಡಲಾಗಿದೆ. ಫೆಬ್ರುವರಿಯಲ್ಲಿ ಅದರ ಶಂಕು ಸ್ಥಾಪನೆ ನೆರವೇರಿಸುವುದಾಗಿ ಹೇಳಿದರು.

* * 

ಲಿಂಗಾಯತರು ನಮ್ಮನ್ನು (ದಲಿತ ರನ್ನು) ಮಕ್ಕಳಂತೆ ನೋಡಿಕೊಂಡು ಬಂದಿದ್ದಾರೆ. ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ವಿಚಾರದಲ್ಲಿ ನನ್ನದೂ ಸಹಮತವಿದೆ. ಎಚ್.ಆಂಜನೇಯ, ಸಮಾಜಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.