ADVERTISEMENT

ಕೇಂದ್ರ ಸರ್ಕಾರದಿಂದ ಸಂವಿಧಾನ ಬದಲಿಸುವ ಹುನ್ನಾರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 9:24 IST
Last Updated 5 ಫೆಬ್ರುವರಿ 2018, 9:24 IST
ಹುನಗುಂದ ಪಟ್ಟಣದಲ್ಲಿ ಪ್ರಜಾ ಪರಿವರ್ತನ ವೇದಿಕೆ ಹಮ್ಮಿಕೊಂಡಿದ್ದ ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ, ಮಾನವೀಯತೆ ಬೆಳಿಸಿ, ಸಹೋದರತ್ವ ಸಮಾವೇಶ ಉದ್ಘಾಟಿಸಿ ಪ್ರಜಾ ಪರಿವರ್ತನ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಬಿ. ಗೋಪಾಲ ಮಾತನಾಡಿದರು
ಹುನಗುಂದ ಪಟ್ಟಣದಲ್ಲಿ ಪ್ರಜಾ ಪರಿವರ್ತನ ವೇದಿಕೆ ಹಮ್ಮಿಕೊಂಡಿದ್ದ ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ, ಮಾನವೀಯತೆ ಬೆಳಿಸಿ, ಸಹೋದರತ್ವ ಸಮಾವೇಶ ಉದ್ಘಾಟಿಸಿ ಪ್ರಜಾ ಪರಿವರ್ತನ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಬಿ. ಗೋಪಾಲ ಮಾತನಾಡಿದರು   

ಹುನಗುಂದ: ‘ದೇಶದಲ್ಲಿ ದುಡಿಯುವ ವರ್ಗದ ಮೇಲೆ ಆಳುವ ವರ್ಗ ನಿರಂತರವಾಗಿ ಶೋಷಣೆ, ದಬ್ಬಾಳಿಕೆ ನಡೆಸುತ್ತಿದೆ. ಅಂಬೇಡ್ಕರ್ ಆಶಯದಂತೆ ಯಾವುದೇ ಪಕ್ಷ ನಡೆದುಕೊಳ್ಳುತ್ತಿಲ್ಲ, ಕೇಂದ್ರ ಸರ್ಕಾರ ಸಂವಿಧಾನ ಬದಲಾವಣೆ ಮಾಡುವ ಹುನ್ನಾರ ನಡೆಸಿದೆ. ಇದಕ್ಕೆ ಮತೀಯ ಶಕ್ತಿಗಳು ಕೂಡ ಕೈಜೋಡಿಸುತ್ತಿವೆ’ ಎಂದು ಪ್ರಜಾ ಪರಿವರ್ತನಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಬಿ.ಗೋಪಾಲ ಆರೋಪಿಸಿದರು.

ಹುನಗುಂದ ಪಟ್ಟಣದಲ್ಲಿ ಪ್ರಜಾ ಪರಿವರ್ತನಾ ವೇದಿಕೆ ಹಮ್ಮಿಕೊಂಡ ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ, ಮಾನವೀಯತೆ ಬೆಳೆಸಿ, ಸಹೋದರತ್ವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಸಂವಿಧಾನ ವಿರೋಧಿಗಳನ್ನು ಬಗ್ಗು ಬಡಿಯಲು ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ಜನಾಂಗ ಹಾಗೂ ಮುಸ್ಲಿಮರು ಒಂದಾಗಬೇಕಿದೆ’ ಎಂದರು.

‘ಸಾಮಾನ್ಯ ಮನುಷ್ಯ ಈ ದೇಶದ ಪ್ರಧಾನಿಯಾಗಲು ಸಂವಿಧಾನ ಕಾರಣ ಎಂದು ಮೋದಿ ಹೇಳಿದ್ದರು. ಆದರೆ, ಇಂದು ಅದನ್ನೆ ಬದಲು ಮಾಡಲು ಹೊರಟಿರುವುದು ಅವರ ಧ್ವಂದ್ವ ನೀತಿಗೆ ಸಾಕ್ಷಿ. ರಾಜ್ಯ ಸರ್ಕಾರದ ಅನ್ನ ಭಾಗ್ಯ, ಶಾದಿಭಾಗ್ಯದಿಂದ ಜನರ ಉದ್ಧಾರ ಆಗಲ್ಲ. ಅವರಿಗೆ ಉದ್ಯೋಗ ಭಾಗ್ಯ ಕೊಡಿ. ನೀವು ಅಧಿಕಾರಕ್ಕೆ ಬಂದ ಮೇಲೆ 50 ಲಕ್ಷ ಉದೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದು, ಎಲ್ಲಿ ಹೋಯಿತು. ಎಷ್ಟು ಬರಡು ಭೂಮಿಯನ್ನು ಬಡವರು, ದಲಿತರು ಹಾಗೂ ಹಿಂದುಳಿದವರಿಗೆ ಹಂಚಿಕೆ ಮಾಡಿದ್ದೀರಿ’ ಎಂದು ಪ್ರಶ್ನಿಸಿದರು.

ADVERTISEMENT

ಪಂಜಾಬನ ಜಸ್ವಂಧರ ಕೌರ ಮಾತನಾಡಿ, ‘ಪ್ರತಿಯೊಬ್ಬರು ಸಂವಿಧಾನದ ಆಶಯದಂತೆ ನಡೆಯಬೇಕಾಗಿದೆ. ಚುನಾವಣೆಯಲ್ಲಿ ಹಣ, ಹೆಂಡಕ್ಕೆ ಮತವನ್ನು ಮಾರಿಕೊಳ್ಳದೇ ಪ್ರಾಮಾಣಿಕತೆಯಿಂದ ಮತದಾನ ಮಾಡಬೇಕಾಗಿದೆ’ ಎಂದರು.

ಛತ್ತೀಸಗಡ ರಾಜ್ಯದ ಮಾಜಿ ಶಾಸಕ ದಾವುದ್ ರಾಮ ರತ್ನಾಕರ ಮಾತನಾಡಿ, ‘ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಆದಿವಾಸಿಗಳು ಹಾಗೂ ಹಿಂದುಳಿದ ವರ್ಗದವರ ಜನಸಂಖ್ಯೆ ಅಧಿಕವಾಗಿದೆ. ಆದರೆ ದೇಶವನ್ನು ಬಹುಜನ ಆಳುತ್ತಿಲ್ಲ. ಹಾಗಾಗಿ ಸ್ವಾತಂತ್ರ್ಯ ದೊರೆತು 70 ವರ್ಷವಾದರೂ ನಮ್ಮ ಸ್ಥಿತಿಗತಿ ಸುಧಾರಣೆ ಕಂಡಿಲ್ಲ. ಈ ನಿಟ್ಟಿನಲ್ಲಿ ಬಹುಜನತೆ ಒಂದಾಗಬೇಕಾಗಿದೆ’ ಎಂದರು.

ಸಮಾರಂಭದಲ್ಲಿ ಸಿದ್ದಣ್ಣ ಅಮದಿಹಾಳ ಅಧ್ಯಕ್ಷತೆ ವಹಿಸಿದ್ದರು. ಪರಶುರಾಮ ಮಹಾರಾಜನವರ, ಡಾ. ಸೈಯದ್ ರೋಷನ್ ಮುಲ್ಲಾ, ಮುಪ್ತಿ ಜುಬೇರಸಾಬ್, ಹಸನಸಾಬ್ ಬಾಗವಾನ, ಮಂಜುನಾಥ ಹೊಸಮನಿ, ವಿವೇಕನಂದ ಚಂದ್ರರಗಿರಿ, ಸದಾಶಿವ ಕೊಡಬಾಗಿ, ಶಂಕರಾನಂದ ಕುಂಚನೂರ, ಅರುಣ ಗರಸಂಗಿ, ಆನಂದ ಜಾಲಗಾರ, ಪವಾಡೆಪ್ಪ ಚಲವಾದಿ, ಸುರೇಶ ಜಂಗ್ಲಿ, ನರಸಪ್ಪ ಹಿರೇಮನಿ ಪರಶುರಾಮ ಈಟಿ, ಶ್ಯಾಮ ಮುಧೋಳ, ಸಿದ್ದು ಹಿರೆಮನಿ, ಆನಂದ ಚಲವಾದಿ , ರಮೇಶ ಹಿರೇಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.