ADVERTISEMENT

ಶೇ 75ರಷ್ಟು ಹಿಂಗಾರು ಬಿತ್ತನೆ, ಉತ್ತಮ ಫಸಲು ನಿರೀಕ್ಷೆ

ಬಸವರಾಜ ಹವಾಲ್ದಾರ
Published 26 ನವೆಂಬರ್ 2022, 6:04 IST
Last Updated 26 ನವೆಂಬರ್ 2022, 6:04 IST

ಬಾಗಲಕೋಟೆ: ಅತಿವೃಷ್ಟಿಯಿಂದಾಗಿ ಮುಂಗಾರು ಬೆಳೆ ಕೆಲವು ಕಡೆಗಳಲ್ಲಿ ಹಾಳಾಗಿತ್ತು. ಇದೀಗ ಹಿಂಗಾರು ಬೆಳೆ ಹಾಕಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ ರೈತರು.

ಹಿಂಗಾರಿನಲ್ಲಿ 3.10 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 2.33 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದ್ದು, ಶೇ 75ರಷ್ಟು ಬಿತ್ತನೆಯಾಗಿದೆ.

ಕಡಲೆ, ಜೋಳ, ಗೋಧಿ ಮುಂತಾದವು ಪ್ರಮುಖ ಬೆಳೆಗಳಾಗಿವೆ. 1.06 ಲಕ್ಷ ಹೆಕ್ಟೇರ್‌ ಕಡಲೆ ಬಿತ್ತನೆ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 1.09 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಬೆಂಬಲ ಬೆಲೆಯಡಿ ಖರೀದಿ ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯಲಿದೆ ಎಂಬ ಆಶಾಭಾವನೆಯನ್ನು ರೈತರು ಹೊಂದಿದ್ದಾರೆ.

ADVERTISEMENT

ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದ ಜೋಳದ ಪ್ರದೇಶ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದ್ದು, ವಾಣಿಜ್ಯ ಬೆಳೆಯ ಪ್ರದೇಶ ಹೆಚ್ಚಾಗುತ್ತಿದೆ. ಮಳೆ ಸತತವಾಗಿ ಬರುತ್ತಿದ್ದುದರಿಂದ ಬಿತ್ತನೆ ವಿಳಂಬವಾಯಿತು. ಪರಿಣಾಮ 98 ಸಾವಿರ ಹೆಕ್ಟೇರ್ ಜೋಳ ಬಿತ್ತನೆಯ ಗುರಿ ಇತ್ತು. ಆದರೆ 54 ಸಾವಿರ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ.

ಕಳೆದ ವರ್ಷ ಪಡಿತರದಲ್ಲಿ ಜೋಳ ನೀಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಸರ್ಕಾರಕ್ಕೆ ಜೋಳ ಸಿಕ್ಕಿರಲಿಲ್ಲ. ಈ ಬಾರಿಯೂ ಬಿತ್ತನೆ ಕಡಿಮೆಯಾಗುವುದರಿಂದ ಜೋಳಕ್ಕೆ ಬೇಡಿಕೆ ಹೆಚ್ಚಲಿದೆ.

25,400 ಹೆಕ್ಟೇರ್ ಗೋವಿನಜೋಳ ಬಿತ್ತನೆ ಗುರಿ ಇತ್ತು. ಈವರೆಗೆ 14 ಸಾವಿರ ಹೆಕ್ಟೇರ್‌ ಬಿತ್ತನೆಯಾಗಿದೆ. 28 ಸಾವಿರ ಹೆಕ್ಟೇರ್ ಇದ್ದ ಗೋಧಿ, 18,341 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ.

ವಾಣಿಜ್ಯ ಬೆಳೆಯಾದ ಸೂರ್ಯಕಾಂತಿ 21 ಸಾವಿರ ಹೆಕ್ಟೇರ್ ಪ್ರದೇಶ ಗುರಿಯಲ್ಲಿ, ಕೇವಲ 3,835 ಹೆಕ್ಟೇರ್ ಬಿತ್ತನೆಯಾಗಿದೆ. ಮಳೆ ಹೆಚ್ಚು ಸುರಿದಿದ್ದರಿಂದಲೇ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ.

‘ಕಬ್ಬು ಬೆಲೆ ನಿಗದಿಗೆ 50ಕ್ಕೂ ಹೆಚ್ಚು ದಿನಗಳ ಹೋರಾಟ ನಡೆಯಿತು. ಇದರಿಂದಾಗಿ ಹಲವು ಕಬ್ಬು ಕಾರ್ಖಾನೆಗಳು ಕಬ್ಬು ನುರಿಸುವಿಕೆಯನ್ನು ನಿಲ್ಲಿಸಿದ್ದವು. ಹೀಗಾಗಿ, ಕಬ್ಬು ಕಟಾವಿನಲ್ಲಿ ವಿಳಂಬವಾಗಿದೆ. ಕಬ್ಬು ಕಟಾವು ಇನ್ನಷ್ಟೇ ಆರಂಭವಾಗಿದೆ. ಗೋಧಿ ಬಿತ್ತನೆ ಇನ್ನು ಮೇಲೆ ಕಷ್ಟ. ಆದರೆ, ಹೈಬ್ರಿಡ್ ಗೋಧಿ ಬಿತ್ತನೆ ಮಾಡಬಹುದು’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ.

ಮಳೆಯಾಶ್ರಿತ ತಾಲ್ಲೂಕುಗಳಾದ ಬಾದಾಮಿ, ಗುಳೇದಗುಡ್ಡ, ಬಾಗಲಕೋಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದ್ದರೆ, ಜಮಖಂಡಿ, ಮುಧೋಳ ತಾಲ್ಲೂಕಿನಲ್ಲಿ ಕಡಿಮೆಯಾಗಿದೆ.

*
ನೀರಾವರಿ ಆಶ್ರಿತ ತಾಲ್ಲೂಕುಗಳಲ್ಲಿ ಇನ್ನೂ ಬಿತ್ತನೆಗೆ ಅವಕಾಶ ಇದ್ದು, ಬಿತ್ತನೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ
-ಚೇತನಾ ಪಾಟೀಲ, ಜಂಟಿ ನಿರ್ದೇಶಕಿ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.