ಜಮಖಂಡಿ: ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಎರಡು ಜೋಡಿಯನ್ನು ಇಲ್ಲಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಂದುಗೂಡಿಸಲಾಯಿತು.
ತಾಲ್ಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ದಂಪತಿಗಳಿಗೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ ಒಂದಾಗಿ ಜೀವನ ನಡೆಸುವಂತೆ ನೀಡಿದ ಬುದ್ಧಿ ಮಾತಿಗೆ ಸಮ್ಮತಿಸಿ ದಂಪತಿಗಳು ಒಪ್ಪಿಕೊಂಡರು.
ಕಲ್ಲಹಳ್ಳಿ ಗ್ರಾಮದ ಸದಾಶಿವ ನಾಗಪ್ಪ ಬಸವನಪೂಜಾರಿ ಹಾಗೂ ಅವರ ಪತ್ನಿ ಗೀತಾ ಸದಾಶಿವ ಬಸವನಪೂಜಾರಿ ಮತ್ತು ಜಮಖಂಡಿ ನಗರದ ಗೋಪಾಲ ಶಾಮರಾವ ಭಜಂತ್ರಿ ಮತ್ತು ಅವರ ಪತ್ನಿ ರಜನಿ ಗೋಪಾಲ ಭಜಂತ್ರಿ ಒಂದಾದ ದಂಪತಿಗಳಾಗಿದ್ದಾರೆ.
ವಕೀಲರಾದ ಎಸ್.ಎ. ಅಂಬಿ, ಎಸ್.ಕೆ. ಹಾಲಳ್ಳಿ, ಕಟ್ಟೆಪ್ಪನವರ, ಸಂಧಾನಗಾರ್ತಿ ವಕೀಲರಾದ ಜೆ.ಬಿ. ಕಳಸಣ್ಣವರ ಲೋಕ ಅದಾಲತ್‌ನಲ್ಲಿ ಹಾಜರಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಒಂದಾದ ದಂಪತಿಗಳು ಸಿಹಿ ಹಂಚಿ ಖುಷಿಪಟ್ಟರು. ಲೋಕ ಅದಾಲತ್‌ನಲ್ಲಿ ಈ ವರೆಗೆ 1,263 ವ್ಯಾಜ್ಯಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.