ADVERTISEMENT

ಮಹಾಲಿಂಗಪುರ | ವೈವಿಧ್ಯಮಯ ಬೆಳೆ ಬೆಳೆದು ಮಾದರಿಯಾದ ರೈತ ರಾಚಪ್ಪ ಉಳ್ಳಾಗಡ್ಡಿ

ಶಾಲೆ ಮೆಟ್ಟಿಲು ಹತ್ತದ ಸಂಗಾನಟ್ಟಿ ರೈತ ರಾಚಪ್ಪನ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 5:11 IST
Last Updated 20 ಜೂನ್ 2025, 5:11 IST
ಬಾಳೆ ಬೆಳೆಯೊಂದಿಗೆ ಸಂಗಾನಟ್ಟಿ ರೈತ ರಾಚಪ್ಪ ಉಳ್ಳಾಗಡ್ಡಿ 
ಬಾಳೆ ಬೆಳೆಯೊಂದಿಗೆ ಸಂಗಾನಟ್ಟಿ ರೈತ ರಾಚಪ್ಪ ಉಳ್ಳಾಗಡ್ಡಿ    

ಮಹಾಲಿಂಗಪುರ: ಸಮೀಪದ ಸಂಗಾನಟ್ಟಿ ಗ್ರಾಮದ ರೈತ ರಾಚಪ್ಪ ಉಳ್ಳಾಗಡ್ಡಿ, ತಮ್ಮ ಜಮೀನಿನಲ್ಲಿ ಕಬ್ಬು ಜತೆಗೆ ಅರಿಶಿನ, ಬಾಳೆ ಬೆಳೆದು ಉತ್ತಮ ಲಾಭ ಗಳಿಸಿ ಸೈ ಎನಿಸಿಕೊಂಡಿದ್ದಾರೆ.

ಶಾಲೆಯ ಮೆಟ್ಟಿಲನ್ನೇ ಹತ್ತದ 55 ವಯಸ್ಸಿನ ರಾಚಪ್ಪ, ಮಾರುಕಟ್ಟೆಯ ಏರು-ಪೇರುಗಳನ್ನು ಅರಿತು ಲಾಭ-ನಷ್ಟದ ಅಂದಾಜು ಲೆಕ್ಕ ಹಾಕಿ ತಮ್ಮ ಜಮೀನಿನಲ್ಲಿ ಅರಿಶಿನ, ಕಬ್ಬು, ಬಾಳೆಯಂತಹ ವೈವಿಧ್ಯಮಯ ಬೆಳೆ ಬೆಳೆದು ಇದಕ್ಕೆ ಪೂರಕವಾಗಿ 20ಕ್ಕೂ ಹೆಚ್ಚು ಜಾನುವಾರುಗಳನ್ನು ಸಾಕಣೆ ಮಾಡಿ ಹೈನೋದ್ಯಮವನ್ನೂ ಮಾಡುತ್ತಿದ್ದಾರೆ. 

ಕಬ್ಬು-ಅರಿಶಿನ ನಾಟಿ:

ADVERTISEMENT

ತಮ್ಮ 8 ಎಕರೆ 20 ಗುಂಟೆ ಜಮೀನಿನಲ್ಲಿ 5 ಎಕರೆ ವಿವಿಧ ನಾಲ್ಕು ತಳಿಯ ಕಬ್ಬು ನಾಟಿ ಮಾಡಿದ್ದಾರೆ. ಪ್ರತಿ ಎಕರೆಗೆ 60-65 ಟನ್ ಕಬ್ಬು ಬೆಳೆಯುತ್ತಿದ್ದಾರೆ. ಕಬ್ಬಿನ ಸಸಿಯಿಂದ ಸಸಿಗೆ ನಾಲ್ಕುವರಿಯಿಂದ ಐದು ಅಡಿಯ ಸಾಲು ಬಿಟ್ಟಿದ್ದಾರೆ. 2 ಎಕರೆಯಲ್ಲಿ ಸೇಲಂ ತಳಿಯ ಅರಿಶಿನವನ್ನು ಮೂರುವರೆ ಅಡಿ ಸಾಲು ಬಿಟ್ಟು ನಾಟಿ ಮಾಡಿ ಅಂದಾಜು ₹ 1.50 ಲಕ್ಷ ಖರ್ಚು ಮಾಡಿ ₹ 4 ಲಕ್ಷ ದವರೆಗೆ ಆದಾಯ ಗಳಿಸುತ್ತಿದ್ದಾರೆ. ಸ್ಪಲ್ಪ ಜಮೀನಿನಲ್ಲಿ ತಮಗಾಗಿ ವಿವಿಧ ರೀತಿಯ ತರಕಾರಿ ಹಾಗೂ ಜಾನುವಾರುಗಳಿಗೆ ಮೇವು ಬೆಳೆಸಿದ್ದಾರೆ.

ಬಾಳೆಯಿಂದ ಉತ್ತಮ ಆದಾಯ:

ಕೇವಲ 20 ಗುಂಟೆಯಲ್ಲಿ ಬಾಳೆ ಬೆಳೆದಿರುವ ರಾಚಪ್ಪ, ವರ್ಷಕ್ಕೆ ₹ 10 ಸಾವಿರ ಖರ್ಚು ತೆಗೆದು ₹ 1 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇದಕ್ಕೂ ಮುನ್ನ ಬಾಳೆ ಬೆಲೆ ಹೆಚ್ಚಾದಾಗ ಇಷ್ಟೇ ಜಮೀನಿನಲ್ಲಿ ವರ್ಷಕ್ಕೆ ₹ 2.50 ಲಕ್ಷ ಆದಾಯ ಗಳಿಸಿದ್ದರು. ಎಂಟು ವರ್ಷದ ಹಿಂದೆ ಪರಿಚಯಸ್ಥರೊಬ್ಬರಿಂದ 160 ಬಾಳೆ ಸಸಿ ತಂದು ನಾಟಿ ಮಾಡಿದ್ದರು. ಯಾವುದೇ ಸರ್ಕಾರಿ ಗೊಬ್ಬರ ಹಾಕದೇ ಸಂಪೂರ್ಣ ಸಾವಯವ ಪದ್ಧತಿಯಿಂದಲೇ ಬಾಳೆ ಬೆಳೆಯುತ್ತಿರುವುದು ವಿಶೇಷ. ಪ್ರತಿ ಬಾಳೆಗೊನೆ 6 ರಿಂದ 8 ಕೆ.ಜಿ ವರೆಗೆ ತೂಗುತ್ತದೆ. ಪತ್ನಿ ಮಹಾನಂದಾ, ಒಂದೆರಡು ಟ್ರೇನಲ್ಲಿ ಬಾಳೆ ಇಟ್ಟುಕೊಂಡು ಸಮೀಪದ ಮಹಾಲಿಂಗಪುರ, ಢವಳೇಶ್ವರ ಹಾಗೂ ಸೈದಾಪುರ ಗ್ರಾಮದ ವಾರದ ಸಂತೆಗಳಿಗೆ ತೆರಳಿ ಬಾಳೆ ಮಾರಾಟ ಮಾಡುತ್ತಾರೆ. ಪ್ರತಿ ಸಂತೆಗೆ ₹ 1500 ನಷ್ಟು ಆದಾಯ ಗಳಿಸುತ್ತಾರೆ. ವರ್ಷ ಪೂರ್ತಿ ಬಾಳೆ ಇಲ್ಲಿ ದೊರಕುತ್ತದೆ.

ನೀರಿನ ಸೌಲಭ್ಯ:

ನೀರಾವರಿಗಾಗಿ 1 ಬಾವಿ, 2 ಬೋರ್‍ವೆಲ್ ಹೊಂದಿದ್ದಾರೆ. ನದಿ ನೀರಿನ ಸೌಲಭ್ಯವಿದ್ದು, ಇದನ್ನು ಬಾವಿಗೆ ಸಂಗ್ರಹ ಮಾಡುತ್ತಾರೆ. ಇಷ್ಟಿದ್ದರೂ ನೀರಿನ ಮಿತವ್ಯಯಕ್ಕಾಗಿ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಬ್ಬು, ಬಾಳೆ, ಅರಿಶಿನಕ್ಕೆ ಸಂಪೂರ್ಣ ಹನಿ ನೀರಾವರಿ ಅಳವಡಿಸಿದ್ದಾರೆ. ತಿಂಗಳಿಗೊಮ್ಮೆ ಬೇರೆ ಪೈಪ್‍ನಲ್ಲಿ ಜಾನುವಾರುಗಳ ಮೂತ್ರ ಮಿಶ್ರಣ ಮಾಡಿ ನೀರುಣಿಸುತ್ತಾರೆ. ಮಗ ಆನಂದ ಹಾಗೂ ಸೊಸೆ ಪೂಜಾ ಸದ್ಯ ಜಮೀನಿನಲ್ಲಿ ತೊಡಗಿಕೊಂಡು ರೈತ ರಾಚಪ್ಪ ಅವರಿಗೆ ನೆರವಾಗಿದ್ದಾರೆ.

ರೈತ ರಾಚಪ್ಪ ಉಳ್ಳಾಗಡ್ಡಿ ಜಮೀನಿನಲ್ಲಿನ ಅರಿಸಿನ
ಸಮೃದ್ಧವಾಗಿ ಬೆಳೆದಿರುವ ಬಾಳೆ

ಬಾಳೆ, ಅರಿಶಿನ, ಕಬ್ಬು, ಹೈನುಗಾರಿಕೆಗೆ ಒತ್ತು 8 ಎಕರೆ 20 ಗುಂಟೆಯಲ್ಲಿ ಲಾಭ ಕಂಡುಕೊಂಡ ರೈತ ಪ್ರತಿದಿನ 30 ಲೀಟರ್ ಹಾಲು ಉತ್ಪಾದನೆ

ಕಡಿಮೆ ಖರ್ಚಿನಲ್ಲಿ ಬಾಳೆ ಉತ್ತಮ ಆದಾಯ ನೀಡುವ ಬೆಳೆಯಾಗಿದೆ. ಒಂದೇ ಬೆಳೆಗೆ ಅವಲಂಬನೆ ಆಗದೆ ವೈವಿಧ್ಯಮಯ ಬೆಳೆ ಬೆಳೆದರೆ ಲಾಭ ದೊರಕುತ್ತದೆ. ಮನೆಯ ಸದಸ್ಯರೇ ದುಡಿಯುತ್ತಿರುವುದರಿಂದ ಲಾಭ ಹೆಚ್ಚಿಗೆ ದೊರಕುತ್ತದೆ
ರಾಚಪ್ಪ ಉಳ್ಳಾಗಡ್ಡಿ ರೈತ

ಹೈನುಗಾರಿಕೆಯಿಂದಲೂ ಲಾಭ: ಮನೆಮುಂದೆ ₹ 3 ಲಕ್ಷ ವೆಚ್ಚದಲ್ಲಿ ಶೆಡ್ ನಿರ್ಮಿಸಿ 2 ಸಾಹಿವಾಲ್ 3 ಎಚ್‍ಎಫ್ 1 ಜವಾರಿ ಆಕಳು 5 ಎಮ್ಮೆ 13 ಆಡು 2 ಎತ್ತು ಸಾಕಿದ್ದಾರೆ. ಪ್ರತಿ ದಿನ 30 ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಪ್ರತಿ ಲೀಟರ್‌ ₹ 33 ಯಂತೆ ₹ 1 ಸಾವಿರ ಆದಾಯ ಗಳಿಸುತ್ತಿದ್ದಾರೆ. ಸಂಗ್ರಹವಾಗುವ ತಿಪ್ಪೆ ಗೊಬ್ಬರವನ್ನು ಮಾರಾಟ ಮಾಡದೆ ಬೆಳೆಗಳಿಗೆ ಬಳಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.