ADVERTISEMENT

ಆಸ್ತಿ ತೆರಿಗೆಯಲ್ಲಿ ಮುಂದೆ, ನೀರಿನ ತೆರಿಗೆ ಸಂಗ್ರಹದಲ್ಲಿ ಹಿಂದೆ

₹4 ಕೋಟಿಯಷ್ಟು ಬಾಕಿ ಉಳಿದ ನೀರಿನ ತೆರಿಗೆ

ಬಸವರಾಜ ಹವಾಲ್ದಾರ
Published 11 ಜೂನ್ 2022, 16:09 IST
Last Updated 11 ಜೂನ್ 2022, 16:09 IST

ಬಾಗಲಕೋಟೆ: ಪ್ರಸಕ್ತ ಆರ್ಥಿಕ ವರ್ಷದ ಆರಂಭದಲ್ಲಿಯೇ ಉತ್ತಮ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡುವ ಮೂಲಕ ನಗರಸಭೆಯು ಗಮನ ಸೆಳೆದಿದೆ.

ಎರಡು ತಿಂಗಳ ಅವಧಿಯಲ್ಲಿ ನಗರಸಭೆಯು ₹4.15 ಕೋಟಿ ಗುರಿಯಲ್ಲಿ ₹2.23 ಕೋಟಿಯಷ್ಟು ಸಂಗ್ರಹಿಸಿದೆ. ಆ ಮೂಲಕ ಅರ್ಧಕ್ಕೂ ಹೆಚ್ಚು ವಸೂಲು ಮಾಡಿದ ಸಾಧನೆ ಮಾಡಿದೆ.

ಏಪ್ರಿಲ್‌ ತಿಂಗಳಲ್ಲಿ ತೆರಿಗೆ ಪಾವತಿಸುವವರಿಗೆ ಶೇ 5 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಇದರ ಲಾಭ ಪಡೆದುಕೊಂಡಿರುವ ಇಲ್ಲಿನ ಜನತೆ ಆ ತಿಂಗಳೊಂದರಲ್ಲಿಯೇ ₹1.73 ಕೋಟಿ ತೆರಿಗೆ ಪಾವತಿಸಿದ್ದಾರೆ. ಅಧಿಕಾರಿಗಳೂ ಉಳಿದ ತೆರಿಗೆ ವಸೂಲಾತಿ ಕಾರ್ಯದಲ್ಲಿ ನಿರತರಾಗಿದ್ದಾರೆ.

ADVERTISEMENT

ವಸತಿ, ವಾಣಿಜ್ಯ ಸೇರಿದಂತೆ ಬಾಗಲಕೋಟೆಯಲ್ಲಿ ಒಟ್ಟು 39,370 ಆಸ್ತಿಗಳಿವೆ. ಕಳೆದ ವರ್ಷದ ₹37.28 ಲಕ್ಷ ತೆರಿಗೆ ಸಂಗ್ರಹ ಬಾಕಿ ಉಳಿದುಕೊಂಡಿದ್ದು, ಅದನ್ನು ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ.

ಹೆಚ್ಚದ ಆದಾಯ: ನವನಗರ ವ್ಯಾಪ್ತಿಯ 17 ಸಾವಿರಕ್ಕೂ ಹೆಚ್ಚು ಆಸ್ತಿಗಳು ಈಗಲೂ ಬಾಗಲಕೋಟೆ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿವೆ. ಅವುಗಳನ್ನು ನಗರಸಭೆಗೆ ವಹಿಸಿದರೆ, ಆದಾಯ ಹೆಚ್ಚಲಿದೆ. ಆದರೆ, ನಗರಸಭೆಯಿಂದ ನಿರ್ವಹಣೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬಿಟಿಡಿಎ ತನ್ನ ಬಳಿಯೇ ಉಳಿಸಿಕೊಂಡಿದೆ.

ನೀರಿನ ಕರ ಸಂಗ್ರಹದಲ್ಲಿ ಹಿಂದೆ: ಎರಡು ತಿಂಗಳ ಅವಧಿಯಲ್ಲಿ ಅರ್ಧದಷ್ಟು ತೆರಿಗೆ ಸಂಗ್ರಹಿಸಿರುವ ನಗರಸಭೆಯು, ನೀರಿನ ಕರ ಸಂಗ್ರಹದಲ್ಲಿ ಹಿಂದೆ ಉಳಿದಿದೆ.

ಬಾಗಲಕೋಟೆಯಲ್ಲಿ ನಗರಸಭೆಯು 7,350 ಮನೆಗಳಿಗೆ ನೀರಿನ ಸಂಪರ್ಕ ಒದಗಿಸಿದೆ. ₹1.82 ಕೋಟಿ ಕರ ಸಂಗ್ರಹಿಸಬೇಕಿತ್ತು. ಆದರೆ, ಇಲ್ಲಿಯವರೆಗೆ ₹32 ಲಕ್ಷ ಸಂಗ್ರಹಿಸಲಾಗಿದೆ. ಹಿಂದಿನ ಬಾಕಿ ₹4 ಕೋಟಿಯಷ್ಟು ಬೆಳೆದಿದೆ.

ಹತ್ತಾರು ವರ್ಷಗಳಿಂದ ನೀರಿನ ಬಾಕಿ ಪಾವತಿಯಾಗದಿರುವ ಪ್ರಕರಣಗಳೂ ಇವೆ. ಜತೆಗೆ ಹಳೆಯ ಬಾಗಲಕೋಟೆಯಲ್ಲಿ ಹಲವಾರು ಮನೆಗಳು ಮುಳುಗಡೆ ಪ್ರದೇಶದಲ್ಲಿ ಮುಳುಗಿ ಹೋಗಿವೆ. ಆದರೂ, ಅವುಗಳ ಹೆಸರಿನಲ್ಲಿ ಬಿಲ್‌ ನೀಡಲಾಗುತ್ತಿದೆ. ಹೀಗಾಗಿ, ಬಾಕಿಯ ಮೊತ್ತ ಹೆಚ್ಚಿದೆ ಎನ್ನುತ್ತಾರೆ ಅಧಿಕಾರಿಗಳು.

ಸ್ಥಿತಿವಂತರಾಗಿರುವವರು ಏಪ್ರಿಲ್‌ ತಿಂಗಳಿನಲ್ಲಿಯೇ ರಿಯಾಯಿತಿಯ ಲಾಭ ಪಡೆಯಲು ತೆರಿಗೆ ಪಾವತಿಸಿ ಬಿಡುತ್ತಾರೆ. ನಂತರ ಉಳಿದವರಿಂದ ತೆರಿಗೆಯನ್ನು ನಗರಸಭೆಯ ಅಧಿಕಾರಿಗಳೇ ಮನೆ, ಮನೆಗೆ ತೆರಳಿ ಸಂಗ್ರಹಿಸಬೇಕು. ಇದು ಸವಾಲಿನ ಕೆಲಸ ಎನ್ನುತ್ತಾರೆ ಅವರು.

ಏಪ್ರಿಲ್‌ ತಿಂಗಳಿನಲ್ಲಿ ತೆರಿಗೆ ಸಂಗ್ರಹ ಉತ್ತಮವಾಗಿದೆ. ಉಳಿದ ತೆರಿಗೆ ಸಂಗ್ರಹಕ್ಕೂ ಆದ್ಯತೆ ನೀಡಲಾಗುವುದು
ಬಿ.ಪಿ. ನಿರುಗ್ಗಿ, ಕಂದಾಯ ಅಧಿಕಾರಿ, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.