ADVERTISEMENT

‘ಅಕ್ಷಯ ಪಾತ್ರೆ’ಗೆ ಬಿಸಿಯೂಟ: ಆಕ್ರೋಶ

ಜಿಪಂ ಕಚೇರಿ ಎದುರು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 16:48 IST
Last Updated 12 ನವೆಂಬರ್ 2019, 16:48 IST
ಬಿಸಿಯೂಟ ಯೋಜನೆ ಖಾಸಗೀಕರಣ ವಿರೋಧಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಮಂಗಳವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಬಿಸಿಯೂಟ ಯೋಜನೆ ಖಾಸಗೀಕರಣ ವಿರೋಧಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಮಂಗಳವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ಅಕ್ಷಯ ಪಾತ್ರೆ ಫೌಂಡೇಷನ್‌ ಮೂಲಕ ಜಿಲ್ಲೆಯಲ್ಲಿ ಬಿಸಿಯೂಟ ಯೋಜನೆ ಜಾರಿಗೊಳಿಸಿರುವ ಕ್ರಮ ಖಂಡಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಮಂಗಳವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಧ್ಯಾಹ್ನದ ಬಿಸಿಯೂಟ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಿಂದ ಬಡ ಕುಟುಂಬದ ಅಸಂಘಟಿತ ವಲಯದ ಕಾರ್ಮಿಕರ ಮಕ್ಕಳು, ಕೃಷಿ ಕೂಲಿಕಾರರ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುತ್ತಿದೆ. ಯೋಜನೆಯಿಂದ ಲಕ್ಷಾಂತರ ಬಡ, ದಲಿತ, ಹಿಂದುಳಿದ, ವಿಧವೆಯರಿಗೆ ಉದ್ಯೋಗ ಸಿಕ್ಕಿದೆ. ಈ ಕೆಲಸ ನಂಬಿ ಕುಟುಂಬಗಳು ಕಳೆದ 19 ವರ್ಷಗಳಿಂದ ಬದುಕು ಸಾಗಿಸುತ್ತಿವೆ. ಆದರೆ ಈಗ ಯೋಜನೆಯನ್ನು ಖಾಸಗೀಕರಣಗೊಳಿಸಿ ಕಾರ್ಮಿಕರನ್ನು ಬೀದಿಪಾಲು ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಎನ್‌ಸಿಆರ್‌ಟಿ ಅಧ್ಯಯನ ಮತ್ತು ವರದಿ ಪ್ರಕಾರ ಈ ಯೋಜನೆ ಜಾರಿಯಾದ ನಂತರ ಮಕ್ಕಳ ಕಲಿಕಾ ಸಾಮರ್ಥ್ಯ ಮತ್ತು ಕ್ರಿಯಾಶೀಲನೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಶಾಲಾ ಹಂತದಲ್ಲಿ ಜಾತಿ ತಾರತಮ್ಯ ನೀಗಿಸಿ, ಸಹ ಪಂಕ್ತಿ ಭೋಜನದಿಂದ ಮಕ್ಕಳಲ್ಲಿ ಸಾಮರಸ್ಯ ಬೆಳೆಸಲು ಸಹಕಾರಿಯಾಗಿದೆ. ಇಂತಹ ಪರಿಣಾಮಕಾರಿ ಬದಲಾವಣೆಗೆ ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರು ಕಾರಣಕರ್ತರಾಗಿದ್ದಾರೆ. ಆದರೆ ಈಗ ಧರ್ಮಾಧಾರಿತ ಸಂಸ್ಥೆಗೆ ಯೋಜನೆಯ ಹೊಣೆ ನೀಡಿರುವುದು ಖಂಡನೀಯ ಎಂದು ಆರೋಪಿಸಿದರು.

ADVERTISEMENT

ಇಸ್ಕಾನ್‌ ಸರಬರಾಜು ಮಾಡುವ ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಇರುವುದಿಲ್ಲ. ಊಟವನ್ನು ದೂರದಿಂದ ವಾಹನಗಳಲ್ಲಿ ಸರಬರಾಜು ಮಾಡುತ್ತಾರೆ. ಮಧ್ಯಾಹ್ನದ ಹೊತ್ತಿಗೆ ಊಟ ತಣ್ಣಗಾಗಿ ಮಕ್ಕಳು ತಿನ್ನುವ ಸ್ಥಿತಿಯಲ್ಲಿ ಇರುವುದಿಲ್ಲ. ಇದು ಬಿಸಿಯೂಟ ಯೋಜನೆಯ ಉದ್ದೇಶವನ್ನೇ ನಾಶ ಮಾಡುತ್ತದೆ. ಧರ್ಮಾಧಾರಿತ ಸಂಸ್ಥೆಗೆ ನೀಡಿರುವುದನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ನೌಕರರ ಹಿತ ಕಾಯಬೇಕು ಎಂದು ಒತ್ತಾಯ ಮಾಡಿದರು.

ಅಕ್ಷಯ ಪಾತ್ರೆ ಫೌಂಡೇಷನ್‌ಗೆ ಯೋಜನೆ ನೀಡುವುದರಲ್ಲಿ ಬಿಜೆಪಿ ಸರ್ಕಾರ ಪ್ರಮುಖ ಪಾತ್ರ ವಹಿಸಿದೆ. ಅದರ ಭಾಗವಾಗಿರುವ ಅಡುಗೆಮನೆಯನ್ನು ಸಂಸದೆ ಸುಮಲತಾ ಉದ್ಘಾಟನೆ ಮಾಡಿದ್ದಾರೆ. ಇದು ಕಾರ್ಮಿಕ ವಿರೋಧಿ ನೀತಿಯಾಗಿದ್ದು ಕೂಡಲೇ ವಾಪಸ್‌ ಪಡೆಯಬೇಕು. 2012ರಲ್ಲಿ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿದ್ದು ಬಿಸಿಯೂಟ ಯೋಜನೆಯನ್ನು ಸೇವಾ ಸಂಸ್ಥೆಗಳಿಗೆ ವಿಸ್ತರಿಸುವುದನ್ನು ನಿಷೇಧಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಹೀಗಿದ್ದರೂ ಅಕ್ಷಯ ಪಾತ್ರೆ ಫೌಂಡೇಷನ್‌ಗೆ ಯೋಜನೆಯನ್ನು ನೀಡಿರುವುದು ಸರಿಯಲ್ಲ ಆರೋಪಿಸಿದರು.

ಸರ್ಕಾರಿ ಯೋಜನೆಯ ಖಾಸಗೀಕರಣದಿಂದ ಬಿಸಿಯೂಟ ನೌಕರರಿಗೆ ಮಾನಸಿಕ ಒತ್ತಡ ಉಂಟಾಗಲಿದೆ. ಉದ್ಯೋಗ ಅಭದ್ರತೆ ಕಾಡಲಿದೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಇಸ್ಕಾನ್‌ ಸಂಸ್ಥೆಗೆ ನೀಡಿರುವ ಯೊಜನೆಯನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷೆ ಎಸ್‌.ವರಲಕ್ಷ್ಮಿ ಜಿಲ್ಲಾ ಘಟಕದ ಅಧ್ಯಕ್ಷೆ ಮಹದೇವಮ್ಮ, ಪ್ರಧಾನ ಕಾರ್ಯದರ್ಶಿ ಸುನೀತಾ, ಸುನಂದಾ ಜಯರಾಂ, ಪದ್ಮಾ ಮಂಜುಳಾ, ವಿ.ಡಿ.ಸರಸ್ವತಿ, ಜಿ.ರಾಮಕೃಷ್ಣ, ಟಿ.ಶಯವಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.