ADVERTISEMENT

ಆಲಮಟ್ಟಿ: ಅಣಕು ಪ್ರದರ್ಶನ

ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಎಸ್‌ಪಿ, ಡಿ.ಸಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಮೇ 2025, 16:12 IST
Last Updated 17 ಮೇ 2025, 16:12 IST
ಆಲಮಟ್ಟಿಯಲ್ಲಿ ಶನಿವಾರ ನಡೆದ ಅಣಕು ಪ್ರದರ್ಶನದ ದೃಶ್ಯ
ಆಲಮಟ್ಟಿಯಲ್ಲಿ ಶನಿವಾರ ನಡೆದ ಅಣಕು ಪ್ರದರ್ಶನದ ದೃಶ್ಯ   

ಆಲಮಟ್ಟಿ: ಎರಡು ವಾಹನಗಳಲ್ಲಿ ಶಸ್ತ್ರಸಜ್ಜಿತರಾಗಿ ಪೆಟ್ರೋಲ್ ಪಂಪ್ ಮಾರ್ಗವಾಗಿ ಆಲಮಟ್ಟಿಯ ಪ್ರವೇಶ ದ್ವಾರಕ್ಕೆ ಬಂದ ಉಗ್ರರು, ಅಲ್ಲಿನ ಚೆಕ್ ಪೋಸ್ಟ್‌ನಲ್ಲಿ ಉಗ್ರರ ದಾಳಿಗೆ ನೆಲಕ್ಕುರಳಿದ ಪೊಲೀಸರು, ಪ್ರವಾಸಿಗರನ್ನು, ಕೆಬಿಜೆಎನ್ಎಲ್ ನಿಗಮದ ಅಧಿಕಾರಿಗಳನ್ನು ಒತ್ತೆಯಾಳಾಗಿರಿಸಿಕೊಂಡ ಉಗ್ರರು, ಮೊಳಗಿದ ತುರ್ತು ಸೈರನ್, ಅಲರ್ಟ್ ಆದ ಪೊಲೀಸರು..

ಇದು, ಶನಿವಾರ ಸಂಜೆ ನಡೆದ ಅಣಕು ಪ್ರದರ್ಶನದ ದೃಶ್ಯ.

ವಿಜಯಪುರ, ಬಾಗಲಕೋಟೆ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಎರಡು ಜಿಲ್ಲೆಯ ಪೊಲೀಸರು, ಕೆಎಸ್ಐಎಸ್ಎಫ್ ಪೊಲೀಸರು, ಆರೋಗ್ಯ, ಅಗ್ನಿಶಾಮಕ, ಹೋಂಗಾರ್ಡ್ ಸೇರಿದಂತೆ ನಾನಾ ಇಲಾಖೆಗಳ ಸಂಯೋಜನೆಯಲ್ಲಿ ಅಣಕು ಕಾರ್ಯಾಚರಣೆ ನಡೆಯಿತು.

ADVERTISEMENT

ಬೆಳಿಗ್ಗೆಯಿಂದಲೇ ಎರಡು ಜಿಲ್ಲೆಯ ಎಸ್‌ಪಿಗಳು ಮಾರ್ಗದರ್ಶನ ನೀಡಿ ಅಣಕು ಪ್ರದರ್ಶನಕ್ಕೆ ಸಿಬ್ಬಂದಿಯನ್ನು ಸಜ್ಜುಗೊಳಿಸಿದರು.

ಅಣಕು ಪ್ರದರ್ಶನ ಚಿತ್ರಣ: ಎರಡು ವಾಹನಗಳಲ್ಲಿ ಉಗ್ರರ ಪ್ರವೇಶ, ಟಿಕೆಟ್ ಕೌಂಟರ್‌ನಲ್ಲಿ ಭಯೋತ್ಪಾದಕರ ದಾಳಿ, ಇಬ್ಬರ ನಾಗರಿಕರ ಸಾವು, ಅಲ್ಲಿನ ಚೆಕ್ ಪೋಸ್ಟ್ ಬಳಿಯಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್ಐಎಸ್ಎಫ್) ಇಬ್ಬರ ಪೊಲೀಸರು ಸಾವು, ಓರ್ವ ಗಾಯ, ಗಾಯಗೊಂಡ ಸಿಬ್ಬಂದಿ ಕೆಎಸ್ಐಎಸ್ಎಫ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುತ್ತಾರೆ. ತಕ್ಷಣವೇ ಅಣೆಕಟ್ಟಿನ ಸೈರನ್ ಮೊಳಗಿತು. ವಿಜಯಪುರ, ಬಾಗಲಕೋಟೆ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಗೆ, ಸಮೀಪದ ಪೊಲೀಸ್ ಠಾಣೆಗಳಿಗೆ, ಅಗ್ನಿಶಾಮಕ, ಅಂಬುಲೆನ್ಸ್‌ಗಳಿಗೆ ತಕ್ಷಣವೇ ಮಾಹಿತಿ ರವಾನೆಯಾಗಿ, ಆಲಮಟ್ಟಿ ಪ್ರವೇಶಿಸುವ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ. ಅಷ್ಟರಲ್ಲಿ ರಾಕ್ ಉದ್ಯಾನ ಪ್ರವೇಶಿಸಿದ ಭಯೋತ್ಪಾದಕರು ಅಲ್ಲಿ ಪ್ರವಾಸಿಗರನ್ನು ಒತ್ತೆಯಿರಿಸಿಕೊಂಡಿದ್ದರು. ಭಯೋತ್ಪಾದಕರ ಇನ್ನೊಂದು ವಾಹನ ಅಣೆಕಟ್ಟು ವೃತ್ತಕ್ಕೆ ಬಂತು. ಎಲ್ಲಾ ಭಯೋತ್ಪಾದಕರನ್ನು ಶಸ್ತ್ರ ಸಜ್ಜಿತ ಕೆಎಸ್ಐಎಸ್ಎಫ್ ಪೊಲೀಸರು ಹೊಡೆದುರುಳಿಸಿದರು.

ಇನ್ನಷ್ಟು ಭಯೋತ್ಪಾದಕರು ಕೆಬಿಜೆಎನ್ಎಲ್ ಕಚೇರಿಗೆ ನುಗ್ಗಿ ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒತ್ತೆಯಿರಿಸಿಕೊಂಡರು. ಒತ್ತೆಯಾಳುಗಳನ್ನು ಇರಿಸಿರುವ ಪೊಲೀಸರು ಸ್ಥಳಗಳನ್ನು ಸುತ್ತುವರಿದರು. ವೈದ್ಯಕೀಯ ಸಿಬ್ಬಂದಿಯಿರುವ ಅಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಆಗಮಿಸಿ ಗಾಯಾಳುಗಳ ತುರ್ತು ಚಿಕಿತ್ಸೆಗೆ ಕ್ರಮ ಕೈಗೊಂಡರು.

ಕೆಬಿಜೆಎನ್ಎಲ್ ಅಧಿಕಾರಿಗಳಾದ ಎಸ್.ವಿ. ಹಿರೇಗೌಡರ, ತಾರಾಸಿಂಗ್ ದೊಡಮನಿ, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಗಜಾನನ ಸುತಾರ, ಕೆಪಿಸಿಎಲ್ ಎಸ್ಇ ಚಂದ್ರಕಾಂತ ದೊರೆ, ಕೆಎಸ್ಐಎಸ್ಎಫ್ ಸಹಾಯಕ ಕಮಾಂಡೆಂಟ್ ಡಿ.ವಿ. ಅರುಣ, ಇನ್‌ಸ್ಪೆಕ್ಟರ್ ಶಿವಲಿಂಗ ಕುರೆನ್ನವರ, ಆರ್‌ಟಿಒ ವಸೀಮಬಾವಾ ಮುದ್ದೇಬಿಹಾಳ, ಸಿದ್ದಪ್ಪ ಇದ್ದರು.

ಆಲಮಟ್ಟಿಯಲ್ಲಿ ಶನಿವಾರ ನಡೆದ ಅಣಕು ಪ್ರದರ್ಶನದ ದೃಶ್ಯ
ಆಲಮಟ್ಟಿಯಲ್ಲಿ ಶನಿವಾರ ನಡೆದ ಅಣಕು ಪ್ರದರ್ಶನದ ದೃಶ್ಯ
ಆಲಮಟ್ಟಿಯಲ್ಲಿ ಶನಿವಾರ ಉಗ್ರರು ದಾಳಿ ನಡೆಸಿದಾಗ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ವಿಜಯಪುರ ಬಾಗಲಕೋಟೆ ಜಿಲ್ಲಾಡಳಿತದ ನೇತೃತ್ವದಲ್ಲಿ ಅಣಕು ಪ್ರದರ್ಶನದಲ್ಲಿ ನೆಲಕ್ಕುರುಳಿದ ಉಗ್ರರ ದೃಶ್ಯ
ಆಲಮಟ್ಟಿಯಲ್ಲಿ ಶನಿವಾರ ಉಗ್ರರು ದಾಳಿ ನಡೆಸಿದಾಗ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ವಿಜಯಪುರ ಬಾಗಲಕೋಟೆ ಜಿಲ್ಲಾಡಳಿತದ ನೇತೃತ್ವದಲ್ಲಿ ಅಣಕು ಪ್ರದರ್ಶನ ನಡೆಯಿತು
ಆಲಮಟ್ಟಿಯಲ್ಲಿ ಶನಿವಾರ ಉಗ್ರರು ದಾಳಿ ನಡೆಸಿದಾಗ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ವಿಜಯಪುರ ಬಾಗಲಕೋಟೆ ಜಿಲ್ಲಾಡಳಿತದ ನೇತೃತ್ವದಲ್ಲಿ ಅಣಕು ಪ್ರದರ್ಶನ ನಡೆಯಿತು

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಅಣಕು ಕಾರ್ಯಾಚರಣೆ ನಡೆಸಲಾಗಿದ್ದು ಇದರಿಂದ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಹೆಚ್ಚುವುದು

– ಟಿ.ಭೂಬಾಲನ್ ಜಿಲ್ಲಾಧಿಕಾರಿ ವಿಜಯಪುರ

ಎಲ್ಲಾ ಇಲಾಖೆಗಳು ಯಾವ ರೀತಿ ಸಮನ್ವತೆಯಿಂದ ಕಾರ್ಯನಿರ್ವಹಿಸುತ್ತಿವೆ ಹಾಗೂ ಏಷ್ಟರ ಮಟ್ಟಿಗೆ ನಾನಾ ವಿಧದ ದಾಳಿ ಸನ್ನದ್ಧವಾಗಿವೆ ಎಂದು ತಿಳಿಯಲು ಸಾಧ್ಯವಾಯಿತು

– ಜಾನಕಿ ಜಿಲ್ಲಾಧಿಕಾರಿಬಾಗಲಕೋಟೆ

ಪ್ರತಿ ಮೂರು ತಿಂಗಳಿಗೊಮ್ಮೆ ಪ್ರದರ್ಶನ ‘ಈ ರೀತಿಯ ಅಣಕು ಪ್ರದರ್ಶನ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಲಾಗುವುದು. ಇದರಿಂದ ಪೊಲೀಸರು ಎಂತಹ ಸನ್ನಿವೇಶದಲ್ಲಿಯೂ ಸರ್ವಸನ್ನದ್ಧವಾಗಲು ಸಾಧ್ಯವಾಗಲಿದೆ. ಶನಿವಾರ ಆಲಮಟ್ಟಿಯಲ್ಲಿ ನಾಲ್ಕು ವಿವಿಧ ರೀತಿಯ ಉಗ್ರರ ದಾಳಿ ನಡೆಸಿದಾಗ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿವಿಧ ಇಲಾಖೆಗಳ ಸಂಯೋಜನೆಯಲ್ಲಿ ಅಣಕು ಪ್ರದರ್ಶನ ನಡೆಸಲಾಯಿತು’ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಬಾಗಲಕೋಟೆ ಎಸ್‌ಪಿ ಅಮರನಾಥ ರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.