
ಬಾಗಲಕೋಟೆ: ಅಂಬಿಗರ ಚೌಡಯ್ಯ ಒಬ್ಬ ನೇರ, ನಿಷ್ಠುರ, ಮಾರ್ಮಿಕ ವಚನಕಾರರಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
ನವನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚೌಡಯ್ಯನವರು ನದಿ ದಾಟಿಸುವ ಅಂಬಿಗರಾಗಿರದೇ ಭವಸಾಗರ ದಾಟಿಸುವ ಅಂಬಿಗರಾಗಿದ್ದರು. ಇವರ ವಚನಗಳಲ್ಲಿ ಕಠೋರತೆ ಇದ್ದರೂ ಮಾತೃ ಹೃದಯಿಯಾಗಿದ್ದರು ಎಂದರು.
ವಚನಗಳ ಮೂಲಕ ಸಮಾಜದಲ್ಲಿ ಮೂಢನಂಬಿಕೆ, ಅನಿಷ್ಟ ಪದ್ಧತಿಗಳನ್ನು ನೇರವಾಗಿ ಖಂಡಿಸಿದ್ದರು. ಕಾಯಕ ಜೀವಿ, ಶೋಷಿತ ಸಮಾಜದವರಾಗಿದ್ದರು ಎಂದು ಹೇಳಿದರು.
ಉಪನ್ಯಾಸ ನೀಡಿದ ಮಲ್ಲಿಕಾರ್ಜುನ ಕಮತಗಿ, ಚೌಡಯ್ಯನವರು ಬರೆದ 719 ವಚನಗಳು ದೊರೆತಿವೆ. ಅವುಗಳಲ್ಲಿ ನೇರ, ನಿಷ್ಠುತ ಕಲ್ಯಾಣ ಸಂದೇಶಗಳಿವೆ. ಅವರ ವಚನಗಳು ದಾರಿದೀಪವಾಗಿವೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ತಹಶೀಲ್ದಾರ್ ವಾಸುದೇವಸ್ವಾಮಿ ಇದ್ದರು.
ಬಿಜೆಪಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರ:
ಅಂಬಿಗರ ಚೌಡಯ್ಯ, ಮಹಾಯೋಗಿ ವೇಮನರು ಶತಮಾನ ಕಂಡ ದಾರ್ಶನಿಕರು. ಇಬ್ಬರೂ ತಮ್ಮ ನೇರ, ನಿರ್ಭೀತ ವಚನಗಳಿಂದ ಜಾತಿ-ಭೇದಗಳನ್ನು ಖಂಡಿಸಿ, ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಪ್ರತಿಪಾದಿಸಿದರು ಎಂದು ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ ಹೇಳಿದರು.
ಅಂಬಿಗರ ಚೌಡಯ್ಯ ವಚನಗಳ ಮೂಲಕ ಭವಸಾಗರ ದಾಟುವ ಕೌಶಲ ಹೇಳಿದರೆ, ವೇಮನರು ತಮ್ಮ ಪದ್ಯಗಳಲ್ಲಿ ಜನಪದ ಮತ್ತು ತತ್ವಶಾಸ್ತ್ರ ಬೆರೆಸಿ ಸಾರ್ವತ್ರಿಕ ಮೌಲ್ಯಗಳನ್ನು ಸಾರಿದರು ಎಂದರು.
ಬಸವರಾಜ ಯಂಕಂಚಿ, ಶಿವಾನಂದ ಟವಳಿ ಮಾತನಾಡಿದರು. ಡಾ. ಎಂ.ಎಸ್. ದಡ್ಡೇನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ಗುಂಡೂರಾವ್ ಶಿಂಧೆ, ಭಾಗೀರಥಿ ಪಾಟೀಲ, ರಾಮಣ್ಣ ರಾಮೋಡಗಿ, ಸಿ.ವಿ.ಕೋಟಿ, ಅಯ್ಯಪ್ಪ ವಾಲ್ಮೀಕಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.