ADVERTISEMENT

ಗಡಿ ಭಾಗದಲ್ಲಿ ಅಪರಿಚಿತ ಪ್ರಾಣಿ ಹಾವಳಿ

ಬಾಗಲಕೋಟೆ–ವಿಜಯಪುರ ಜಿಲ್ಲೆ ಅರಣ್ಯಾಧಿಕಾರಿಗಳಿಂದ ಜಂಟಿ ಕಾರ್ಯಾಚರಣೆ

ವೆಂಕಟೇಶ ಜಿ.ಎಚ್.
Published 3 ಜೂನ್ 2020, 11:35 IST
Last Updated 3 ಜೂನ್ 2020, 11:35 IST
ಜಮಖಂಡಿ ತಾಲ್ಲೂಕಿನ ಬಿದರಿ ಗ್ರಾಮದ ಬಳಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿರುವ ಅಪರಿಚಿತ ಪ್ರಾಣಿಯ ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಇಟ್ಟಿರುವ ಬೋನು
ಜಮಖಂಡಿ ತಾಲ್ಲೂಕಿನ ಬಿದರಿ ಗ್ರಾಮದ ಬಳಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿರುವ ಅಪರಿಚಿತ ಪ್ರಾಣಿಯ ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಇಟ್ಟಿರುವ ಬೋನು   

ಬಾಗಲಕೋಟೆ: ಜಮಖಂಡಿ ತಾಲ್ಲೂಕು ವ್ಯಾಪ್ತಿಯ ಬಾಗಲಕೋಟೆ–ವಿಜಯಪುರ ಗಡಿ ಭಾಗದಲ್ಲಿ ಅಪರಿಚಿತ ಪ್ರಾಣಿಯೊಂದು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ. ಇದು ಎರಡೂ ಜಿಲ್ಲೆಗಳ ಅರಣ್ಯ ಇಲಾಖೆ ಅಧಿಕಾರಿಗಳ ನಿದ್ರೆ ಕೆಡಿಸಿದೆ.

ಹಾವಳಿ ಇಡುತ್ತಿರುವ ಪ್ರಾಣಿ ಚಿರತೆಯೋ ಇಲ್ಲವೇ ಕತ್ತೆ ಕಿರುಬವೋ (ಹೈನಾ) ಎಂಬುದು ಸ್ಪಷ್ಟವಾಗಿಲ್ಲ. ಮಳೆಯ ಕಾರಣ ಪ್ರಾಣಿಯ ಹೆಜ್ಜೆ ಗುರುತು ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಅರಣ್ಯ ಇಲಾಖೆ ಕ್ಯಾಮೆರಾ ಟ್ರ್ಯಾಪಿಂಗ್ ಮಾಡುವ ಪ್ರಯತ್ನ ನಡೆಸಿದೆ. ಅದು ವಿಫಲವಾದ ಕಾರಣ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆ ವ್ಯಾಪ್ತಿಯಲ್ಲಿ ಮಂಗಳವಾರ ತಲಾ ಒಂದೊಂದು ಕಡೆ ಬೋನು ಇಟ್ಟು ಜೀವಂತವಾಗಿ ಸೆರೆ ಹಿಡಿಯಲು ಮುಂದಾಗಿದ್ದಾರೆ.

ಆಡು–ಕರು ಸಾವು: ಜಮಖಂಡಿ ತಾಲ್ಲೂಕಿನ ಬಿದರಿ ಹಾಗೂ ವಿಜಯಪುರ ತಾಲ್ಲೂಕಿನ ದೇವರಗೆಣ್ಣೂರು, ಬಬಲಾದಿ ಹಾಗೂ ಕೆಂಗಲಗುತ್ತಿ ಗ್ರಾಮಗಳಲ್ಲಿ ಅಪರಿಚಿತ ಪ್ರಾಣಿಯ ದಾಳಿಗೆ ಒಂದು ಆಡು ಹಾಗೂ ಎಮ್ಮೆ ಕರುಗಳು ಬಲಿಯಾಗಿವೆ. ಬಿದರಿ ಹಾಗೂ ಬಬಲಾದಿ ಗ್ರಾಮಗಳಲ್ಲಿ ಮೂರು ಎಮ್ಮೆ ಕರುಗಳ ಮೇಲೆ ದಾಳಿ ನಡೆಸಿದೆ. ಬಿದರಿಯಲ್ಲಿ ದಾಳಿ ನಡೆದ ಜಮೀನುಗಳಲ್ಲಿ ಎರಡು ಕಡೆ ಕ್ಯಾಮೆರಾ ಅಳವಡಿಸಿದ್ದರೂ ಪ್ರಾಣಿಯ ಚಿತ್ರ ಮಾತ್ರ ಸೆರೆ ಸಿಕ್ಕಿಲ್ಲ.

ADVERTISEMENT

ದುರ್ಗಮ ಹಾದಿ: ಕೃಷ್ಣಾ ನದಿ ಪಾತ್ರದ ಈ ಪ್ರದೇಶದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆದು ನಿಂತಿದೆ. ದುರ್ಗಮ ಹಾದಿಯ ಕಾರಣ ಪ್ರಾಣಿಯ ಸೆರೆ ಹಿಡಿಯುವ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಜಮಖಂಡಿ ವಲಯ ಅರಣ್ಯಾಧಿಕಾರಿ ಸಿದ್ದರಾಜ ಬಬಲಾದಿ ಹೇಳುತ್ತಾರೆ. ದಾಳಿ ಮಾಡಿದ ಪ್ರಾಣಿಯನ್ನು ನೋಡಿದವರ ಹೇಳಿಕೆ ಗಮನಿಸಿದರೆ ಅದು ಕತ್ತೆ ಕಿರುಬ ಅನ್ನಿಸುತ್ತಿದೆ. ಆದರೆ ಖಚಿತಪಟ್ಟಿಲ್ಲ ಎನ್ನುವ ಅವರು, ಬಿದರಿ ಹಾಗೂ ವಿಜಯಪುರ ಜಿಲ್ಲೆ ದೇವರಗೆಣ್ಣೂರಿನಲ್ಲಿ ಬೋನು ಇಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.