
ಜಮಖಂಡಿ: ‘ಎಲ್ಲ ಧರ್ಮಗಳೂ ಶ್ರೇಷ್ಠವಾಗಿವೆ. ಜಾತಿ–ಧರ್ಮ ಎನ್ನದೇ ಭಾವೈಕ್ಯದಿಂದ ಇರುವುದೇ ಇಲ್ಲಿಯ ಗ್ರಾಮಸ್ಥರ ದೊಡ್ಡತನ’ ಎಂದು ಓಲೆಮಠದ ಆನಂದ ದೇವರು ಹೇಳಿದರು.
ತಾಲ್ಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ನಡೆದ ‘ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ’ ಜನಜಾಗೃತಿ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಓಲೆಮಠದ ಜೋಳಿಗೆಯು ಧನ, ದವಸ, ಧಾನ್ಯ, ಸಂಗ್ರಹಿಸದೇ ದುಶ್ಚಟ, ಅವಗುಣಗಳನ್ನು ಹೋಗಲಾಡಿಸುವ ಜೋಳಿಗೆಯಾಗಿದೆ. ಇಂದಿನ ಯುವಕರಲ್ಲಿ ಸಂಸ್ಕಾರದ ಕೊರತೆಯಿಂದಾಗಿ ದುಶ್ಚಟಗಳಿಗೆ ದಾಸರಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದರು.
‘ಮಾನವ ಜಾತಿ ಒಂದೇ. ನಮ್ಮ ಧರ್ಮದ ಬಗ್ಗೆ ಅಭಿಮಾನವಿರಬೇಕು. ಇನ್ನೊಂದು ಧರ್ಮದ ಬಗ್ಗೆ ಗೌರವವಿರಬೇಕು. ಎಲ್ಲರೂ ಸರ್ವಜನಾಂಗದ ತೋಟ ಎಂಬಂತೆ ಭಾವೈಕ್ಯದಿಂದ ಬದುಕಬೇಕು. ಒಂದು ಜಾತಿಗೆ ಮೀಸಲಾದವರು ಸನ್ಯಾಸಿಗಳಲ್ಲ. ಸರ್ವ ಜನಾಂಗದ ಶ್ರೇಯಸ್ಸನ್ನು ಬಯಸುವವರು ನಿಜವಾದ ಸನ್ಯಾಸಿಗಳು’ ಎಂದರು.
ಪ್ರವಚನಕಾರ ಬಸವರಾಜೇಂದ್ರ ಶರಣರು ಮಾತನಾಡಿ, ‘ಸಮಾಜವು ಅಂಧಕಾರದಿಂದ ಕೂಡಿದೆ. ಅದನ್ನು ಜ್ಞಾನದ ಜ್ಯೋತಿಯ ಮೂಲಕ ಸ್ವಚ್ಛಗೊಳಿಸುವ ಕಾರ್ಯವನ್ನು ಶ್ರೀಗಳು ಮಾಡಬೇಕು’ ಎಂದರು.
‘ಬದುಕಿನಲ್ಲಿ ಭರವಸೆ ಮೂಡಿಸುವ ಜೋಳಿಗೆ ಇದಾಗಿದೆ. ಯೋಗಿಗಳ, ಮಹಾತ್ಮರ ಶಕ್ತಿ ಅಗಾಧವಾಗಿದೆ. ಅದನ್ನು ನಂಬಿ ಬಂದವರ ಬದುಕು ಹಸನಾಗುವುದರಲ್ಲಿ ಯಾವ ಸಂದೇಹವೂ ಇಲ್ಲ’ ಎಂದು ಹೇಳಿದರು.
ಸದಾಶಿವ ಮಠದ ಸಂಗಯ್ಯ ಸ್ವಾಮೀಜಿ, ರಾಚಯ್ಯಸ್ವಾಮಿ ಮಠಪತಿ ಇದ್ದರು. ಬಸವರಾಜ ಮರನೂರ ಸ್ವಾಗತಿಸಿದರು. ಮುತ್ತಪ್ಪ ಸೊನ್ನದ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.