
ರಬಕವಿ ಬನಹಟ್ಟಿ: ‘ಇಂದಿನ ದಿನಗಳಲ್ಲಿ ಕಲಾವಿದರ ಸ್ಥಿತಿಗತಿಗಳ ಕುರಿತು ಸರ್ಕಾರ ಮತ್ತು ಸಮಾಜ ಚಿಂತನೆ ಮಾಡುವುದರ ಜೊತೆಗೆ ಕಲಾವಿದರ ಬದುಕಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಮುಖ್ಯವಾಗಿದೆ. ಕಲೆ ಕೇವಲ ಮನರಂಜನೆಯ ಸಾಧನವಲ್ಲ. ಅದು ಸಮಾಜ ಸಂಸ್ಕೃತಿ, ಪರಂಪರೆ ಮತ್ತು ಗುರುತಿನ ಜೀವಾಳವಾಗಿದೆ. ಕಲೆ ಉಳಿಯಬೇಕಾದರೆ ಕಲಾವಿದರು ಆರ್ಥಿಕವಾಗಿ ಸಬಲರಾಗಬೇಕು’ ಎಂದು ನಾವಲಗಿ ಗ್ರಾಮದ ಜಾನಪದ ಹಿರಿಯ ಕಲಾವಿದ ಮಲ್ಲಪ್ಪ ಗಣಿ ಹೇಳಿದರು.
ಸಮೀಪದ ನಾವಲಗಿ ಗ್ರಾದಮ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಬಾಗಲಕೋಟೆ ಜಿಲ್ಲಾ ಕಲಾವಿದರ ಪ್ರಥಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಡ ಮತ್ತು ನಿರ್ಗತಿಕರ ಕಲಾವಿದರಿಗೆ ವಸತಿ ಯೋಜನೆ ಮತ್ತು ಕಲಾವಿದರ ಮಕ್ಕಳಿಗೆ ಶಿಕ್ಷಣ ಮತ್ತು ನೌಕರಿಯಲ್ಲಿ ಮೀಸಲಾತಿ ನೀಡಬೇಕು. ಕಲಾವಿದರಿಗೆ ಉಚಿತ ವೈದ್ಯಕೀಯ ಸೇವೆ ನೀಡಬೇಕು. ಇದರಿಂದ ಕಲಾವಿದರ ಕುಟುಂಬಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ‘ನಿಜವಾದ ಕಲೆ, ಕಲಾವಿದರಿಗೆ ಮತ್ತು ಸಾಹಿತಿಗಳಿಗೆ ಗೌರವ ದೊರೆಯಬೇಕು. ಅಶ್ಲೀಲ ಹಾಡುಗಳ ಜಾನಪದ ಕ್ಯಾಸೆಟ್‌ಗಳ ಹಾವಳಿ ನಿಲ್ಲಬೇಕು. ಈ ಕುರಿತು ಈಗಾಗಲೇ ಹೋರಾಟಗಳು ಆರಂಭವಾಗಿವೆ’ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ‘ಕಲಾವಿದರಿಗೆ ತಮ್ಮ ಕಲೆ ಅನಾವರಣಗೊಳಿಸಲು ಸಮ್ಮೇಳನ ಉತ್ತಮ ವೇದಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಇಂಥ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ’ ಎಂದರು.
ಯುವ ಮುಖಂಡೆ ವಿದ್ಯಾ ಸವದಿ ಮಾತನಾಡಿ, ಜಾನಪದ ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಚಿಮ್ಮಡದ ಪ್ರಭು ದೇವರು ಮಾತನಾಡಿ, ಜಾನಪದ ಕಲೆ ಮತ್ತು ಕಲಾವಿದರನ್ನು ಗೌರವಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಕಾಂತಿ, ಉಪಾಧ್ಯಕ್ಷೆ ಮುತ್ತವ್ವ ಭಜಂತ್ರಿ, ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷ ಮ.ಕೃ.ಮೇಗಾಡಿ, ಗಂಗಾಧರ ಮೋಪಗಾರ, ಸಿದ್ದು ದಿವಾಣ, ದಾನಪ್ಪ ಆಸಂಗಿ, ಆನಂದ ಕಂಪು, ಗುರು ಮರಡಿಮಠ, ಹಣಮಂತ ಸವದಿ, ಬಸವರಾಜ ದಲಾಲ, ದಾಕ್ಷಾಯಣಿ ಮಂಡಿ, ಕಲಾವಿದರಾದ ಮಲ್ಲಪ್ಪ ಹೂಗಾರ, ಜೀವಪ್ಪ ಬಡಿಗೇರ, ವಿಶ್ವನಾಥ ದೇವದಾಸ, ಸಿದ್ದಪ್ಪ ಕಂಚು, ಹಣಮಂತ ಬರಗಾಲ, ಮಾರುತಿ ಭಜಂತ್ರಿ, ಶ‍್ರೀಶೈಲ ಪಟ್ಟಣಶೆಟ್ಟಿ, ಶೋಭಾ ವಾರದ, ಎಂ.ಎಸ್.ತುಪ್ಪದ, ಶಿಲ್ಪಾ ಕುಲಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ನಗರ ಮತ್ತು ಗ್ರಾಮೀಣ ಭಾಗದ ಜಾನಪದ ಕಲಾವಿದರು ಇದ್ದರು.
ಕಲಾವಿದರ ಮಕ್ಕಳಿಗೆ ಶಿಕ್ಷಣ, ನೌಕರಿಯಲ್ಲಿ ಮೀಸಲಾತಿ ನೀಡಲಿ ಅಶ್ಲೀಲ ಹಾಡುಗಳ ಜಾನಪದ ಕ್ಯಾಸೆಟ್‌ಗಳ ಹಾವಳಿ ನಿಲ್ಲಲಿ ಸಮ್ಮೇಳನ ನಿರಂತರವಾಗಿ ನಡೆಯಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.