
ಬಾದಾಮಿ: ಕೇಂದ್ರ ಸರ್ಕಾರದ ಅಮೃತ ಭಾರತ ಯೋಜನೆಯಲ್ಲಿ ₹15.1 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ಐತಿಹಾಸಿಕ ಪ್ರವಾಸಿ ತಾಣ ಬಾದಾಮಿ ರೈಲ್ವೆ ನಿಲ್ದಾಣದ ಕಟ್ಟಡ ಉದ್ಘಾಟನೆಗೆ ಸಜ್ಜಾಗಿದೆ.
ಸ್ವದೇಶಿ ಮತ್ತು ವಿದೇಶಿ ಪ್ರವಾಸಿಗರು ಚಾಲುಕ್ಯರ ಸ್ಮಾರಕಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಹಾಕೂಟ, ಹುಲಿಗೆಮ್ಮನಕೊಳ್ಳ, ನಾಗನಾಥಕೊಳ್ಳ, ಸಿದ್ದನಕೊಳ್ಳ, ಕೋಟೆ ಕೊತ್ತಲಗಳು, ಮಳೆಗಾಲದಲ್ಲಿ ಜಲಪಾತಗಳು ಮತ್ತು ನಿಸರ್ಗ ಸೌಂದರ್ಯದ ಬೃಹತ್ ಹೆಬ್ಬಂಡೆಗಳ ಸಾಲನ್ನು ವೀಕ್ಷಿಸಲು ಆಗಮಿಸುವರು.
ಫೆ.2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ವಿಡಿಯೊ ಕಾನ್ಫರನ್ಸ್ ಮೂಲಕ ಅಮೃತ ಭಾರತ ಯೋಜನೆಯಡಿ ನೂತನ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ₹15.1 ಕೋಟಿ ಮತ್ತು ರೈಲ್ವೆ ಮೇಲ್ಸೇತುವೆ ನಿರ್ಮಿಸಲು ₹39. 63 ಕೋಟಿ ವೆಚ್ಚದ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಶಂಕುಸ್ಥಾಪನೆ ನೆರವೇರಿಸಿದ್ದರು.
ರೈಲ್ವೆ ನಿಲ್ದಾಣ ಕಾಮಗಾರಿಯಲ್ಲಿ ಪ್ರವೇಶ ದ್ವಾರವನ್ನು ಗುಹಾಂತರ ದೇವಾಲಯದ ಸ್ತಂಭದಂತೆ ನಿರ್ಮಿಸಿ ಮೂರ್ತಿ ಶಿಲ್ಪಗಳನ್ನು ಆಕರ್ಷಕವಾಗಿ ರೂಪಿಸಿದ್ದಾರೆ. ಒಳಗೆ ಬರುತ್ತಿದ್ದಂತೆ ಭಿತ್ತಿಯಲ್ಲಿ ಪಟ್ಟದಕಲ್ಲಿನ ದ್ರಾವಿಡ ಮತ್ತು ನಾಗರ ಶೈಲಿಯ ದೇವಾಲಯಗಳನ್ನು ರೂಪಿಸಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ನಾಲ್ಕು ಟಿಕೆಟ್ ಕೌಂಟರ್, ಮಹಿಳೆಯರ ಮತ್ತು ಪುರುಷರ ನಿರೀಕ್ಷಣಾಲಯ, ಅಂಗವಿಕಲರಿಗೆ ಶೌಚಾಲಯ, ಹವಾನಿಯಂತ್ರಿತ ಪ್ರತಿಕ್ಷಾಲಯ, ಟಿಕೆಟ್ ಬುಕಿಂಗ್ ಕೊಠಡಿ, ನಿಲ್ದಾಣ ವ್ಯವಸ್ಥಾಪಕರ ಕೊಠಡಿ, ವಿಶ್ರಾಂತಿ ಕೊಠಡಿ, ಎರಡು ಪ್ಲಾಟ್‌ಫಾರ್ಮ್‌ಗೆ ಪಾದಚಾರಿ, ಎರಡು ಮೇಲ್ಸೇತುವೆ ಮತ್ತು ಲಿಫ್ಟ್ ಸೌಲಭ್ಯಗಳನ್ನು ಒಳಗೊಂಡಿದೆ.
ಪ್ರವೇಶ ದ್ವಾರದ ಸ್ತಂಭದಲ್ಲಿ ದ್ವಾರಪಾಲಕರು, ಚಾಲುಕ್ಯರ ಲಾಂಛನ, ವೈವಿಧ್ಯಮಯ ಮೂರ್ತಿಶಿಲ್ಪಗಳು, ಹೊರಗೋಡೆಯಲ್ಲಿ ನಟರಾಜ ಮೂರ್ತಿ, ವಿಶ್ರಾಂತಿ ಕೊಠಡಿಗಳಲ್ಲಿ ಅಗಸ್ತ್ಯತೀರ್ಥ ಕೆರೆ, ಭೂತನಾಥ ದೇವಾಲಯ, ಬಾದಾಮಿ, ಪಟ್ಟದಕಲ್ಲಿನ ಸ್ಮಾರಕಗಳನ್ನು ಅಂದವಾಗಿ ವರ್ಣದಲ್ಲಿ ಚಿತ್ರಿಸಲಾಗಿದೆ.
‘ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡದಲ್ಲಿ ಪ್ರಯಾಣಿಕರಿಗೆ ಎಲ್ಲ ಸೌಲಭ್ಯಗಳಿವೆ. ಆದರೆ, ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಹೆಚ್ಚಿಸಿ ಪ್ರವಾಸಿಗರು ಬರುವಂತೆ ಆಕರ್ಷಿಸಬೇಕು’ ಎಂದು ಹುಬ್ಬಳ್ಳಿಗೆ ಪ್ರಯಾಣಿಸಲು ಆಗಮಿಸಿದ ವಿನಿತಾ ಮರ್ದಾ ಪ್ರತಿಕ್ರಿಯಿಸಿದರು.
‘ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಎಸ್ಕಲೆಟರ್ ಸೌಲಭ್ಯದ ಕಾಮಗಾರಿ ಮತ್ತು ಬಾದಾಮಿ-ಬಾಗಲಕೋಟೆ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಬೇಗ ಪೂರ್ಣಗೊಳಿಸಬೇಕು’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಆಗ್ರಹಿಸಿದ್ದಾರೆ.
‘ಎಸ್ಕಲೆಟರ್ ಕಾಮಗಾರಿ ಆರಂಭಿಸಲಾಗುವುದು’ ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ ಎಂಜಿನಿಯರ್ ನವೀನ ತಿಳಿಸಿದರು.
ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆಯಾಗಲಿ ಎಸ್ಕಲೆಟರ್ ಮತ್ತು ರಸ್ತೆ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಿ ಸ್ಮಾರಕಗಳ ಮಾಹಿತಿ ಫಲಕ ಹಾಕಲು ಆಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.