ಬಾದಾಮಿ: ‘ಸಮೀಪದ ನಂದಿಕೇಶ್ವರ ಗ್ರಾಮದ ಆಸರೆ ಬಡಾವಣೆಯಲ್ಲಿ ಬೆಳೆದಿರುವ ಮುಳ್ಳುಕಂಟಿ, ಸಮರ್ಪಕ ರಸ್ತೆ, ಚರಂಡಿ ಇಲ್ಲ. ತೆರೆದ ಭಾವಿಗಳನ್ನು ಮುಚ್ಚಿಲ್ಲ, ಹಕ್ಕುಪತ್ರ ವಿತರಿಸಿಲ್ಲ, ಹಾಳುಬಿದ್ದ ಕಟ್ಟಡಗಳು, ವಿದ್ಯಾರ್ಥಿಗಳ ಪರದಾಟ ಕೇಳುವವರೆ ಇಲ್ಲ ಎನ್ನುವಂತಾಗಿದೆ’ ಎಂದು ಸ್ಥಳಾಂತರಗೊಂಡ ಆಸರೆ ಬಡಾವಣೆಯ ಸಂತ್ರಸ್ತ ನಿವಾಸಿಗಳು ಹೇಳಿದರು.
2009ರಲ್ಲಿ ಮಲಪ್ರಭಾ ನದಿ ನೆರೆ ಪ್ರವಾಹದಿಂದ ನಂದಿಕೇಶ್ವರ ಗ್ರಾಮದ ಜನರ ಸ್ಥಳಾಂತರಕ್ಕಾಗಿ 404 ಮನೆಗಳನ್ನು ಸಂತ್ರಸ್ತರಿಗಾಗಿ ನಿರ್ಮಿಸಲಾಗಿದೆ. 2019ರಲ್ಲಿ ನೆರೆ ಪ್ರವಾಹ ಬಂದಾಗ 10 ವರ್ಷಗಳ ನಂತರ ಇಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ಕುಡಿಯಲು ನೀರು ಮಾತ್ರ ಎರಡು ದಿನಕ್ಕೆ ಒಂದು ಬಾರಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಪೂರೈಕೆಯಾಗುತ್ತಿದೆ. ಇನ್ನುಳಿದ ಯಾವುದೇ ಮೂಲ ಸೌಲಭ್ಯಗಳಿಲ್ಲ.
300ಕ್ಕೂ ಅಧಿಕ ಕುಟುಂಬಗಳು ವಾಸವಾಗಿದ್ದಾರೆ. ನೂರಾರು ಮನೆಗಳು ಖಾಲಿ ಇವೆ. ಮನೆಗಳನ್ನು ನಿರ್ಮಿಸಿ 15 ವರ್ಷಗಳು ಗತಿಸಿವೆ. ಜನರು ವಾಸವಾಗದ ಕಾರಣ ಕೆಲವು ಮನೆಗಳ ಕಿಟಕಿ ಬಾಗಿಲು ಹೋಗಿದ್ದು ಶಿಥಿಲಗೊಂಡಿವೆ. ವಾಸಿಸಲು ಯೋಗ್ಯವಾಗಿಲ್ಲ. ಆಸರೆ ಬಡಾವಣೆ ಸುತ್ತ ಸಂಚರಿಸಿದಾಗ ಮುಳ್ಳುಕಂಟಿಗಳಿಂದ ಬೆಳೆದು ಮನೆಗಳೆಲ್ಲ ಮರೆಯಾಗುತ್ತಿವೆ. ರಸ್ತೆ ಇಲ್ಲ, ಚರಂಡಿ ಇಲ್ಲ. ಎರಡು ತೆರೆದ ಭಾವಿಗಳು ತೆರೆದಂತಿವೆ ಭಾವಿಯಲ್ಲಿ ನೀರು ತುಂಬಿದೆ.
ಕೆಲವರಿಗೆ ಹಕ್ಕಪತ್ರ ಕೊಟ್ಟಿದ್ದಾರೆ. ಆದರೆ ಮನೆ ಅಳತೆ ಇಲ್ಲ. ಇನ್ನು ಕೆಲವರಿಗೆ ಹಕ್ಕು ಪತ್ರಗಳನ್ನು ಕೊಟ್ಟಿಲ್ಲ. ಮಳೆಗಾಲದಲ್ಲಿ ಮನೆಗಳು ಸೋರುತ್ತಿವೆ. ಮನೆಗಳನ್ನು ರಿಪೇರಿ ಮಾಡಲು ಆಗುತ್ತಿಲ್ಲ. ಬೇಗನೇ ಹಕ್ಕು ಪತ್ರಗಳನ್ನು ಕೊಟ್ಟು ಗ್ರಾಮ ಪಂಚಾಯ್ತಿಯಿಂದ ಸೌಲಭ್ಯಗಳನ್ನು ಒದಗಿಸಬೇಕೆಂದು ನಿವಾಸಿಗಳು ಆಗ್ರಹಿಸಿದರು.
‘ತೆರೆದ ಭಾವಿಯಿಂದ ಅಪಾಯವಿದೆ. ಅದರ ಪಕ್ಕದಲ್ಲೆ ಬಾಲಕರು ಹಾಗೂ ಜಾನುವಾರುಗಳು ಸಂಚರಿಸುತ್ತವೆ. ಯಾರೂ ಸ್ಪಂದಿಸುತ್ತಿಲ್ಲ’ ಎಂದು ಬಡಾವಣೆಯ ನಿವಾಸಿ ಮಲ್ಲಣ್ಣ ಮತ್ತು ಮಹಿಳೆಯರು ಹೇಳಿದರು.
‘ಈಗಾಗಲೇ ಹಲವು ದನಕರು ಅದರಲ್ಲಿ ಬಿದ್ದು ಪ್ರಾಣ ಬಿಟ್ಟಿವೆ. ಸ್ಥಳಾಂತರವಾದ ಪ್ರದೇಶಕ್ಕೆ ಬಂದ ನಂತರ ಜನರ ಗೋಳು ಯಾರೂ ಆಲಿಸುತ್ತಿಲ್ಲ’ ಎಂದು ಬಡಾವಣೆಯ ಯಮನಮ್ಮ, ಬಸಮ್ಮ ನೋವನ್ನು ವ್ಯಕ್ತಪಡಿಸಿದರು.
‘ಸ್ಥಳಾಂತರವಾದ ಕಡೆಯಲ್ಲಿ ಮನೆಗಳನ್ನು ಹೊರತುಪಡಿಸಿ ಯಾವುದೇ ಮೂಲ ಸೌಲಭ್ಯ ಒದಗಿಸಿಲ್ಲ. ರಾತ್ರಿಯಾದರೆ ವಯೋವೃದ್ಧರು ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೆ ಆಗುವುದಿಲ್ಲ. ಹಳೇ ಮನೆಗಳೆಲ್ಲ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಈಗ ಏನು ಮಾಡಬೇಕು ಎಂಬುದು ದಿಕ್ಕು ತೋಚದಂತಾಗಿದೆ’ ಎಂದು ಮಾಹಬೂಬಿ ಅಸಹಾಯಕತೆ ವ್ಯಕ್ತಪಡಿಸಿದರು.
ಶಾಲೆ, ದೇವಾಲಯ, ಗ್ರಂಥಾಲಯ, ಅಂಗನವಾಡಿ, ಆರೋಗ್ಯ ಕೇಂದ್ರ ಮತ್ತಿತರ ಕಟ್ಟಡಕ್ಕೆ ಮತ್ತು ಸಮಾರಂಭಕ್ಕೆ ಬಯಲು ಜಾಗಯನ್ನು ನಿಗದಿ ಮಾಡಲಾಗಿದೆ. ಇಲ್ಲಿ ಯಾವುದೇ ಕಟ್ಟಡ ನಿರ್ಮಾಣವಾಗಿಲ್ಲ. ಅದೇ ಜಾಗದಲ್ಲಿ ಬೇರೆ ಕಟ್ಟಡಗಳು ನಿರ್ಮಾಣವಾಗುತ್ತಿವೆ ಎಂದು ಬಡಾವಣೆಯ ನಿವಾಸಿಗರು ಆರೋಪಿಸಿದರು.
ಆಸರೆ ಬಡಾವಣೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡದೇ ಇಲ್ಲಿನ ಖಾಲಿ ನಿವೇಶನದಲ್ಲಿ ಲಕ್ಷಾಂತರ ಅನುದಾನದ ವೆಚ್ಚದಲ್ಲಿ ತ್ಯಾಜ್ಯ ಘಟಕ ಸಂಕೀರ್ಣ, ದನದ ಕೊಟ್ಟಿಗೆ, ಕೋಳಿಫಾರ್ಮ್ ಮತ್ತು ಸ್ವಸಹಾಯ ಕಟ್ಟಡ, ಶೆಡ್ ನಿರ್ಮಾಣ ಕಾಮಗಾರಿ ನಡೆದಿದೆ ಎಂದರು.
ಆಸರೆ ಬಡಾವಣೆ ಪಂಚಾಯಿತಿಗೆ ಹಸ್ತಾಂತರ ಆಗಿಲ್ಲ ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯ ಬೇರೆ ಕಟ್ಟಡಗಳಿಗೆ ಪಂಚಾಯಿತಿ ಅನುದಾನ ಬಳಕೆ
ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡದೇ ಯಾವುದೇ ಕಾಮಗಾರಿ ಕೈಗೊಳ್ಳಲು ಬರುವುದಿಲ್ಲ. ಆದರೆ ಕೆಲವು ಕಟ್ಟಡಗಳು ನಿರ್ಮಾಣವಾಗಿವೆ. ಈ ಬಗ್ಗೆ ಪರಿಶೀಲಿಸುತ್ತೇನೆ
-ಸುರೇಶ ಕೊಕರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ
ನಂದಿಕೇಶ್ವರ ಆಸರೆ ಬಡಾವಣೆ ಗ್ರಾಮ ಪಂಚಾಯ್ತಿಗೆ ಹಸ್ತಾಂತರವಾಗಿಲ್ಲ. ಇದರಿಂದ ಮೂಲ ಸೌಕರ್ಯ ಕೊಟ್ಟಿಲ್ಲ. ಪರಿಶಿಷ್ಟರ ಕಾಲೊನಿಯಲ್ಲಿ ಮಾತ್ರ ಸಿಸಿ ರಸ್ತೆ ಮಾಡಲಾಗಿದೆ
-ಎಂ.ವಿ. ಚಲವಾದಿ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.