ADVERTISEMENT

ತೇರದಾಳ: ದೇವಸ್ಥಾನ ಲೋಕಾರ್ಪಣೆ; 14ರಿಂದ ಕಾರ್ಯಕ್ರಮ

ತೇರದಾಳ: ಅನ್ನಪ್ರಸಾದಕ್ಕೆ ಸಿದ್ದಗೊಂಡ 25 ಸಾವಿರ ರೊಟ್ಟಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 4:19 IST
Last Updated 10 ಅಕ್ಟೋಬರ್ 2024, 4:19 IST
<div class="paragraphs"><p>ತೇರದಾಳದ ಅಲ್ಲಮಪ್ರಭು ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ತಿಂಗಳ ಕಾಲ ನಡೆಯುವ ಅನ್ನಪ್ರಸಾದ ಸೇವೆಗೆ ರೊಟ್ಟಿ ಬಡಿಯುವ ಕಾರ್ಯದಲ್ಲಿ ತೊಡಗಿರುವ ಮಹಿಳೆಯರು</p></div>

ತೇರದಾಳದ ಅಲ್ಲಮಪ್ರಭು ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ತಿಂಗಳ ಕಾಲ ನಡೆಯುವ ಅನ್ನಪ್ರಸಾದ ಸೇವೆಗೆ ರೊಟ್ಟಿ ಬಡಿಯುವ ಕಾರ್ಯದಲ್ಲಿ ತೊಡಗಿರುವ ಮಹಿಳೆಯರು

   

ತೇರದಾಳ: ಭಕ್ತರು ನೀಡಿದ ₹4ಕೋಟಿಗೂ ಅಧಿಕ ದೇಣಿಗೆಯಲ್ಲಿ ನಿರ್ಮಾಣಗೊಂಡಿರುವ ತೇರದಾಳ ಕ್ಷೇತ್ರಾಧಿಪತಿ ಅಲ್ಲಮ ಪ್ರಭು ದೇವರ ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ಅ.14ರಿಂದ ನ.11ರವರೆಗೆ ನಡೆಯಲಿದ್ದು, ತಿಂಗಳ ಕಾಲ ನಿರಂತರವಾಗಿ ಅನ್ನಪ್ರಸಾದ ಕೂಡ ಜರುಗಲಿದೆ.

ಅಲ್ಲಮ ಪ್ರಭು ದೇವರ ದೇವಸ್ಥಾನ ಉದ್ಘಾಟನೆಗೆ ತೇರದಾಳ ಸೇರಿದಂತೆ ಸುತ್ತ–ಮುತ್ತಲಿನ ಭಕ್ತರು ಸಂಭ್ರಮದಿಂದ ಸಜ್ಜಾಗುತ್ತಿದ್ದಾರೆ. ಕಲ್ಲಟ್ಟಿ ಗಲ್ಲಿಯ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಗಂಗಾಧರ ಮಠದಲ್ಲಿ ಎಲ್ಲ ಸಮಾಜದ ಅಂದಾಜು 60 ಮಹಿಳೆಯರು ಜೋಳ, ಗೋವಿನ ಜೋಳ ಹಾಗೂ ಸಜ್ಜಿ ಸೇರಿದಂತೆ 25 ಸಾವಿರ ರೊಟ್ಟಿ ಬಡಿಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರೊಟ್ಟಿಗೆ ಬೇಕಾದ ಹಿಟ್ಟನ್ನು ಮಹಿಳೆಯರು ತಮ್ಮ ಮನೆಗಳಿಂದಲೇ ತರುತ್ತಿದ್ದಾರೆ. ಕೆಲವರು ಮನೆಯಲ್ಲಿಯೇ ರೊಟ್ಟಿ ಬೇಯಿಸಿ ನೀಡುತ್ತಿದ್ದಾರೆ.

ADVERTISEMENT

ರೊಟ್ಟಿ ಬಡಿಯುವ, ಅದನ್ನು ಬೇಯಿಸುವ ಕಾರ್ಯ ನಿರಂತರವಾಗಿ ಸಾಗುತ್ತಿರುವುದರಿಂದ ಮಹಿಳೆಯರು ತಮ್ಮ ಬೇಜಾರು ಕಳೆಯಲು ಸುಗ್ಗಿ, ಜಾನಪದ, ಬೀಸುವ ಕಲ್ಲಿನ ಹಾಡುಗಳನ್ನು ಹಾಗೂ ಅಲ್ಲಮಪ್ರಭು ಸ್ತೋತ್ರ ಹಾಡುವ ಮೂಲಕ ಬೇಜಾರು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಕೆಲಸ ನಮಗೆ ನೀಡಿದ್ದು ನಮ್ಮ ಪುಣ್ಯ ಎಂದು ಸಡಗರದಿಂದಲೇ ರೊಟ್ಟಿ ತಯಾರಿಕೆಯಲ್ಲಿ ತೊಡಗಿದ್ದಾರೆ.

`ಅ.14ರಿಂದ ಬಸವ ಪುರಾಣ ಪ್ರಾರಂಭದ ಮೂಲಕ ಅಲ್ಲಮ ಪ್ರಭುದೇವರ ದೇವಸ್ಥಾನ ಲೋಕಾರ್ಪಣೆ ಕಾರ್ಯ ಚಾಲನೆಗೊಳ್ಳಲಿದ್ದು, ಅಂದಿ ನಿಂದಲೇ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ. ಅಷ್ಟರಲ್ಲಿ ರೊಟ್ಟಿ  ಮಾಡಿ ಮುಗಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ರೊಟ್ಟಿ ಬಡಿಯುತ್ತಿದ್ದ ಸಾವಿತ್ರಿ ಸೋರಗಾಂವಿ, ಶಾರವ್ವ ಹನಗಂಡಿ, ಸುವರ್ಣ ಮಾಳಿ ಹಾಗೂ ಲಕ್ಷ್ಮೀ ಅಮ್ಮಣಗಿ ಸಂತಸದಿಂದ ಅನುಭವ ಹಂಚಿಕೊಂಡರು.

ಪ್ರತಿದಿನದ ಅನ್ನಪ್ರಸಾದ ಸೇವೆಗೆ ತೇರದಾಳದ ಸುತ್ತ–ಮುತ್ತಲಿನ ಬಹುತೇಕ ಹಳ್ಳಿಗಳ ಗ್ರಾಮಸ್ಥರು ಒಂದೊಂದು ದಿನದ ಪ್ರಸಾದ ವ್ಯವಸ್ಥೆಗೆ ಒಪ್ಪಿಗೆ ಸೂಚಿಸಿದ್ದಾರೆ. ಶೇಂಗಾ, ಹೂರಣ ಹಾಗೂ ಸಜ್ಜಕದ ಹೋಳಿಗೆ, ಜಿಲೇಬಿ, ಬೂಂದಿ ಲಾಡು, ಮಾದಲಿ, ಹುಗ್ಗಿ, ಪಾಯಸ, ಶಿರಾ ಹೀಗೆ ಬೇರೆ ಬೇರೆ ಬಗೆಯ ಪ್ರಸಾದ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ.

ಹಂದಿಗುಂದ ಶ್ರೀ, ಶೇಗುಣಸಿ ಶ್ರೀ, ಚಿಮ್ಮಡ ಶ್ರೀ, ಗಂಗಾಧರ ದೇವರು, ಜಗದೀಶ ಗುಡಗುಂಟಿಮಠ, ಗುಹೇಶ್ವರ ಪುರಾಣಿಕಮಠ ಮತ್ತಿತರರು ಸಿದ್ಧತೆ ಕುರಿತು ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಅನುಭವ ಮಂಟದ ಪೀಠಾಧ್ಯಕ್ಷ, ವಚನಗಳ ಗಾರೂಢಿಗ ಆಗಿರುವ ಅಲ್ಲಮಪ್ರಭುದೇವರ ನೂತನ ದೇವಸ್ಥಾನ ಲೋಕಾರ್ಪಣೆಗೆ ಸಿದ್ಧತೆಗಳು ಭರದಿಂದ ನಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.