ತೇರದಾಳ: ತಾಲ್ಲೂಕಿನ ತಮದಡ್ಡಿ ಹಾಗೂ ಹಳಿಂಗಳಿಯ ಜನವಸತಿ ಪ್ರದೇಶಗಳಿಗೆ ಕೃಷ್ಣಾ ನದಿಯ ನೀರು ಬಂದ ಪರಿಣಾಮ ಅಲ್ಲಿನ ಜನ ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಆದರೆ ಮೂರು ದಿನ ಕಳೆದರೂ ಜಾನುವಾರುಗಳಿಗೆ ಮೇವು ಕೊಡದೆ, ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳನ್ನು ತೆರೆಯದೆ ಸತಾಯಿಸುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಕೃಷ್ಣಾ ನದಿಯಲ್ಲಿ ಶನಿವಾರ ಎರಡು ಅಡಿಯಷ್ಟು ನೀರಿನ ಮಟ್ಟ ಏರಿಕೆಯಾಗಿದ್ದು, ತಮದಡ್ಡಿಯ ಚನಾಳ ವಸತಿ ಪ್ರದೇಶ ಹಾಗೂ ಹಳಿಂಗಳಿಯ ಗುಳಿಮಳೆ ಜನವಸತಿ ಪ್ರದೇಶಗಳ ಮತ್ತಷ್ಟು ಮನೆಗಳು ಜಲಾವೃತವಾಗಿವೆ. ಅಲ್ಲಿನ ಜನ ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.
ಸಂತ್ರಸ್ತರು ತಮ್ಮ ಜಾನುವಾರುಗಳನ್ನು ರಸ್ತೆ ಬದಿ ಕಟ್ಟಿ, ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ತಾಡಪಾಲುಗಳ ಸಹಾಯದಿಂದ ತಮಗೆ ಆಸರೆ ಮಾಡಿಕೊಂಡಿದ್ದಾರೆ. ಇವುಗಳಿಂದ ದೂರದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದಿರುವುದರಿಂದ ಕೇವಲ ಊಟಕ್ಕೆಂದು ಬಯಲಲ್ಲಿ ದನಕರುಗಳನ್ನು ಬಿಟ್ಟು ಸಂತ್ರಸ್ತರು ಹೋಗುತ್ತಿಲ್ಲ. ಮತ್ತು ಕಾಳಜಿ ಕೇಂದ್ರ ತೆರೆದಿರುವ ಬಗ್ಗೆ ಸಂತ್ರಸ್ತರಿಗೆ ಮಾಹಿತಿ ಅಧಿಕಾರಿಗಳು ನೀಡಿಲ್ಲ ಎನ್ನುತ್ತಾರೆ ತಮದಡ್ಡಿಯ ಸಂತ್ರಸ್ತ ಶಿವಾನಂದ ಗಸ್ತಿ.
‘ರಾತ್ರಿಯಿಂದಲೇ ನೀರು ಹೆಚ್ಚಾಗುತ್ತಿದ್ದು ಮನೆ ಮುಂದೆ ಬಂದಿದೆ. ವಿಷ ಜಂತುಗಳ ಹೆದರಿಕೆಯಿಂದ ರಾತ್ರಿಯಿಡಿ ನಿದ್ರೆ ಮಾಡಿಲ್ಲ. ಪ್ರತಿ ವರ್ಷ ಪ್ರವಾಹ ಬಂದಾಗ ಮಾತ್ರ ಇತ್ತ ಸುಳಿಯುವ ಅಧಿಕಾರಿಗಳು ನಂತರದಲ್ಲಿ ನಮ್ಮ ಸಮಸ್ಯೆ ಕೇಳುವುದಿಲ್ಲ. ನಮಗೆ ಶಾಶ್ವತ ಪರಿಹಾರ ಒದಗಿಸುತ್ತಿಲ್ಲ‘ ಎಂದು ಸಂತ್ರಸ್ತ ಉಳಪ್ಪ ಹಳೇಮನಿ ಹಾಗೂ ಸಂಜು ಹಳೇಮನಿ ತಿಳಿಸಿದರು.
ಹಳಿಂಗಳಿಯ ಗುಳ್ಳಿಮಳೆ ವಸತಿಗೆ ಸಂಪರ್ಕ ಕಲ್ಪಿಸುವ ಹಾಗೂ ತೇರದಾಳ ಜಾಕವೆಲ್ ರಸ್ತೆ ಜಲಾವೃತವಾಗಿದ್ದು, ಗುಳ್ಳಿಮಳೆಯಲ್ಲಿನ ಜನುವಾರುಗಳನ್ನು ಸ್ಥಳಾಂತರಿಸಿದ್ದು, ಸಂತ್ರಸ್ತರಿಗೆ ಗ್ರಾಮದ ಮಹಾವೀರ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದು ಗ್ರಾಮ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಖವಟಗೊಪ್ಪ ತಿಳಿಸಿದರು.
`ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿದ್ದು, ನೀರಿನ ಮಟ್ಟವೂ ಕಡಿಮೆಯಾಗುತ್ತಿದೆ. ಇದರಿಂದ ಭಾನುವಾರ ತಮದಡ್ಡಿ ಹಾಗೂ ಹಳಿಂಗಳಿಯ ಕೃಷ್ಣಾ ನದಿಯಲ್ಲೂ ನೀರು ಇಳಿಯುವ ಸಾಧ್ಯತೆ ಇದೆ. ಇದರಿಂದ ಜಾನುವಾರುಗಳಿಗೆ ಮೇವು ಕೊಟ್ಟಿಲ್ಲ. ಕಾಳಜಿ ಕೇಂದ್ರ ತೆರೆಯಲಾಗಿದೆ ಆದರೆ ಗ್ರಾಮಸ್ಥರು ಬಂದಿಲ್ಲ. ನೀರು ಹೆಚ್ಚಾದರೆ ಮೇವು ಕೊಡಲಾಗುವುದು‘ ಎಂದು ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.