ಬಾಗಲಕೋಟೆ: ಮಡಿನಲ್ಲಿನ ನೀರು ಕೊಟ್ಟು ವರ್ಷ ಪೂರ್ತಿ ಸಲಹುವ ಜಿಲ್ಲೆಯ ಮೂರೂ ನದಿಗಳು ಉಕ್ಕಿ ಹರಿಯುತ್ತಿವೆ. ಪರಿಣಾಮ ಬಿತ್ತಿ ಬೆಳೆದಿದ್ದ ಬೆಳೆಯು ಕಣ್ಮುಂದೆಯೇ ನೀರು ಪಾಲಾಗುತ್ತಿದೆ. ಜೊತೆಗೆ ಹಲವು ಮನೆಗಳಿಗೂ ನೀರು ನುಗ್ಗಿ ನಷ್ಟು ಉಂಟು ಮಾಡಿವೆ.
ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ನಾಲ್ಕಾರು ದಿನಗಳಿಂದ ಉಕ್ಕಿ ಹರಿಯುತ್ತಿವೆ. ನದಿ ದಡದ ಸಾವಿರಾರು ಎಕರೆ ಭೂಮಿಯಲ್ಲಿ ನೀರು ಹೊಕ್ಕಿದೆ. ಮೆಕ್ಕೆಜೋಳ, ಕಬ್ಬು, ಈರುಳ್ಳಿ, ಹೆಸರು ಸೇರಿದಂತೆ ಹಲವು ಬೆಳೆಗಳು ನೀರಿನಲ್ಲಿ ನಿಂತಿವೆ.
ನದಿಗಳ ಆರ್ಭಟದ ಜೊತೆಗೆ ಜಿಲ್ಲೆಯಲ್ಲಿಯೂ ನಾಲ್ಕಾರು ದಿನ ಸತತವಾಗಿ ಮಳೆ ಸುರಿಯಿತು. ಪರಿಣಾಮ ಹಳ್ಳಗಳೂ ಉಕ್ಕಿ ಹರಿದವು. ಹೊಲದ ಒಡ್ಡುಗಳು ಕಿತ್ತು ಹೋಗಿವೆ. ನೀರು ನಿಂತು ಬೆಳೆ ಹಾಳಾಗಿದೆ.
ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ 6,407 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಅದರಲ್ಲಿ ಕೃಷಿಯ 4,885 ಹೆಕ್ಟೇರ್, ತೋಟಗಾರಿಕೆ ಬೆಳೆಗಳ 1,522 ಹೆಕ್ಟೇರ್ ಬೆಳೆ ಹಾಳಾಗಿದೆ. ಇನ್ನು ಸರ್ವೆ ನಡೆದಿದ್ದು, ಇದರ ಪ್ರಮಾಣ ಹೆಚ್ಚಾಗಲಿದೆ.
ಹೆಚ್ಚಿದ ಸಂಕಷ್ಟ
ಲೋಕಾಪುರ: ಘಟಪ್ರಭಾ ನದಿ ಪ್ರವಾಹದಿಂದ ನದಿ ತೀರದ ಜನರ ಜೀವನ ದುಸ್ತರವಾಗಿದೆ.
ಮುದ್ದಾಪೂರ, ಕಸಬಾ ಜಂಬಗಿ, ಚಿಕ್ಕೂರ ಮುಂತಾದ ಗ್ರಾಮಗಳ ಜಮೀನುಗಳಿಗೆ ಪ್ರವಾಹದಿಂದ ಹಾನಿಯಾಗಿದೆ. ಈ ವರ್ಷದ ಪ್ರವಾಹದಿಂದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ಈರುಳ್ಳಿ, ಹೆಸರು, ಉದ್ದು, ಮುಂತಾದ ಬೆಳೆಗಳು ಕೈಗೆ ಬರುವಷ್ಟರಲ್ಲಿ ಪ್ರವಾಹಕ್ಕೆ ತುತ್ತಾಗಿ ಜಮೀನಿನಲ್ಲಿಯೇ ಕೊಳೆತಿವೆ. ಮಳೆ ಪ್ರಮಾಣ ನಮ್ಮ ಭಾಗದಲ್ಲಿ ಕಡಿಮೆಯಾದರೂ ಬೆಳೆಗಳಿಗೆ ಔಷಧ ಸಿಂಪಡಿಸದಿರುವುದರಿಂದ ಬೆಳೆಗಳು ನಾಶವಾಗಿವೆ ಎನ್ನುತ್ತಾರೆ ಇಲ್ಲಿನ ರೈತರು.
ಮಹಾಲಿಂಗಪುರ ಸಮೀಪದಲ್ಲಿ ಹರಿಯುವ ಘಟಪ್ರಭಾ ನದಿಯಿಂದಲೂ ಕಬ್ಬು ಬೆಳೆಯಲ್ಲಿ ನಾಲ್ಕಾರು ದಿನಗಳಿಂದ ನೀರು ನಿಂತಿದೆ.
ಪ್ರಜಾವಾಣಿ ತಂಡ: ಬಸವರಾಜ ಹವಾಲ್ದಾರ, ಎಸ್.ಎಂ. ಹಿರೇಮಠ, ಮಹೇಶ ಬೋಳಿಶೆಟ್ಟಿ, ಶ್ರೀಧರ ಗೌಡರ, ಸಂಗಮೇಶ ಹೂಗಾರ, ಮಹೇಶ ಮನ್ನಯ್ಯನವರಮಠ
ಅಪಾರ ಬೆಳೆ ಹಾನಿ
ಕೂಡಲಸಂಗಮ: ಕೃಷ್ಣಾ ಮಲಪ್ರಭಾ ನದಿಯ ಪಾತ್ರದಲ್ಲಿ ಅಧಿಕ ಮಳೆ ಸುರಿದ ಪರಿಣಾಮ ನಾರಾಯಣಪುರ ಬಸವಸಾಗರ ಜಲಾಶಯ ಹಿನ್ನಿರು ಅಧಿಕಗೊಂಡು ಕೂಡಲಸಂಗಮ ಸಮೀಪದ ಕೃಷ್ಣಾ ನದಿ ದಡದ ಗ್ರಾಮಗಳಲ್ಲಿ ಕೃಷಿಭೂಮಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.
ಕೂಡಲಸಂಗಮ ಚವಡಕಮಲದಿನ್ನಿ ವಳಕಲದಿನ್ನಿ ಬಿಸಲದಿನ್ನಿ ತುರಡಗಿ ಕಟಗೂರ ಹಂಡರಗಲ್ಲ ಮಲಪ್ರಭಾ ನದಿ ದಡದ ಕೂಡಲಸಂಗಮ ಕೆಂಗಲ್ಲ ಕಜಗಲ್ಲ ವರಗೋಡದಿನ್ನಿ ಹೂವನೂರ ನಂದನೂರ ಗಂಜಿಹಾಳ ಬೆಳಗಲ್ಲ ಇದ್ದಲಗಿ ಬಿಸನಾಳಕೊಪ್ಪ ಅಡವಿಹಾಳ ಕಮದತ್ತ ಸೇರಿದಂತೆ ವಿವಿಧ ಗ್ರಾಮದ ರೈತರ ಭೂಮಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
‘ಕಳೆದ ತಿಂಗಳ ಅವಧಿಯಲ್ಲಿ ಎರಡು ಬಾರಿ ನೀರು ಜಮೀನಿಗೆ ನುಗ್ಗಿ ಈರುಳ್ಳಿ ಹೆಸರು ಕಬ್ಬು ಬೆಳೆಗಳಿಗೆ ಹಾನಿಮಾಡಿದೆ ಈರುಳ್ಳಿ ಹೆಸರು ಕೊಳೆತು ಹೊಗಿದೆ’ ಎನ್ನುತ್ತಾರೆ ನದಿಯ ದಡದ ರೈತರು. ಪ್ರತಿ ವರ್ಷ ಮುಂಗಾರು ಮಳೆಗಾಲದ ಅವಧಿಯಲ್ಲಿ ನದಿ ಪಾತ್ರದಲ್ಲಿ ಮಳೆಯಾದರೆ ತೊಂದರೆ ಅನುಭವಿಸುವಂತಾಗಿದೆ. ನಾರಾಯಣಪುರ ಜಲಾಶಯ ನಿರ್ಮಾಣವಾದಾಗ ನದಿಯಲ್ಲಿ ಅಧಿಕ ನೀರು ಇರುತಿತ್ತು. ಈಗ ನದಿಯಲ್ಲಿ ಹೂಳು ತುಂಬಿದ ಪರಿಣಾಮ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಸ್ವಲ್ಪ ಮಳೆಯಾದರೂ ನದಿಯ ಒಡಲು ತುಂಬಿ ಜಮೀನುಗಳಿಗೆ ನೀರು ನುಗ್ಗುತ್ತದೆ. 15 ವರ್ಷಗಳಿಂದ ಮಲಪ್ರಭಾ ನದಿಯ ದಡದ ರೈತರು ತೊಂದರೆ ಅನುಭವಿಸುತ್ತಿದ್ದೇವೆ. ಫಸಲು ಕೈಗೆ ಬರುವ ಸಮಯದಲ್ಲೇ ಬೆಳೆಗೆ ನೀರು ನುಗ್ಗಿ ಹಾಳಾಗುತ್ತದೆ. ಇದರಿಂದ ಬದುಕೇ ಕಷ್ಟವಾಗಿದೆ.
Cut-off box - ಮಳೆಯಾಶ್ರಿತ ಬೆಳೆಯೂ ಹಾಳು ಬಾದಾಮಿ: ಎರಡು ವಾರ ಸುರಿದ ನಿರಂತರ ಮಳೆಯಿಂದ ಮತ್ತು ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಹೆಚ್ಚುವರಿ ನೀರು ಬಿಟ್ಟಿದ್ದರಿಂದ ನದಿ ದಂಡೆಯ ಮತ್ತು ಮಳೆಯಾಶ್ರಿತ ಬೆಳೆಗಳು ಹಾನಿಯಾಗಿವೆ. ತಾಲ್ಲೂಕಿನಲ್ಲಿ ಅಂದಾಜು ಕೃಷಿ ಇಲಾಖೆಯ 750 ಹೆಕ್ಟೇರ್ ಮತ್ತು ತೋಟಗಾರಿಕೆ ಬೆಳೆಗಳ 500 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಮೆಕ್ಕೆಜೋಳ ಸೂರ್ಯಕಾಂತಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ ಹೇಳಿದರು. ಪಪ್ಪಾಯಿ ಚೆಂಡುಹೂವು ತರಕಾರಿ ಮತ್ತು ಈರುಳ್ಳಿ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಬಾಳನಗೌಡ ಪಾಟೀಲ ತಿಳಿಸಿದ್ದಾರೆ. ಕುಳಗೇರಿ ವಲಯದ ಹಾಗನೂರ ಗ್ರಾಮದ ರೈತ ಯಲ್ಲಪ್ಪಗೌಡ ದೇಸಾಯಿಗೌಡ್ರ ಅವರ 1.20 ಎಕರೆ ಹೊಲದಲ್ಲಿ ಚೆಂಡು ಹೂವು ಅಗಿಯನ್ನು ನೆಟ್ಟಿದ್ದರು. ಪ್ರವಾಹಕ್ಕೆ ಸಿಲುಕಿ ಸಂಪೂರ್ಣವಾಗಿ ಹಾನಿಯಾಗಿದೆ. ‘ಚೆಂಡುಹೂವಿನ ಬೆಳೆ ದಸರಾ ಮತ್ತು ದೀಪಾವಳಿ ಹಬ್ಬಕ್ಕೆ ಬರತಿತ್ತು. ಆದರೆ ಹೊಳಿ ನೀರು ಬಂದು ಎಲ್ಲಾ ಕೊಚ್ಚಿ ಹೋಯಿತು. ಅಂದಾಜು₹ 6 ಲಕ್ಷ ಹಾನಿಯಾಗಿದೆ’ ಎಂದು ಯಲ್ಲಪ್ಪಗೌಡ ಕಳವಳ ವ್ಯಕ್ತಪಡಿಸಿದರು.
Cut-off box - ಹೊಲಗಳಿಗೆ ನುಗ್ಗಿದ ನೀರು ಹುನಗುಂದ: ತಾಲ್ಲೂಕಿನಲ್ಲಿ 2332 ಹೆಕ್ಟೇರ್ ಕೃಷಿ ಬೆಳೆ ಹಾಗೂ 1457.21 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ತಿಳಿಸಿದ್ದಾರೆ. ಕಂದಾಯ ಕೃಷಿ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಬೆಳೆ ಹಾನಿಗೆ ಜಂಟಿ ಸಮೀಕ್ಷೆ ತಂಡ ರಚಿಸಿದ್ದು ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಿದರು. ‘ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಪ್ರವಾಹಕ್ಕೆ ತಾಲ್ಲೂಕಿನ 36 ಗ್ರಾಮಗಳು ತುತ್ತಾಗುತ್ತಿದ್ದು ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಿ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಪ್ರವಾಹದ ಬಗ್ಗೆ ಡಂಗುರ ಸಾರಿ ಎರಡು ನದಿ ತೀರದ ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.