ADVERTISEMENT

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕುಖ್ಯಾತ ಆರೋಪಿ ಕುಡ್ಡ ನಿಂಗಪ್ಪ ಬಂಧನ

ಇಂತಹದ್ದೇ ಪ್ರಕರಣದಲ್ಲಿ 17 ವರ್ಷ ಶಿಕ್ಷೆ ಅನುಭವಿಸಿದ್ದ

ವೆಂಕಟೇಶ್ ಜಿ.ಎಚ್
Published 30 ಸೆಪ್ಟೆಂಬರ್ 2019, 14:10 IST
Last Updated 30 ಸೆಪ್ಟೆಂಬರ್ 2019, 14:10 IST
ಬಾಗಲಕೋಟೆಯಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಯತ್ನದ ಆರೋಪಿ ಕುಡ್ಡನಿಂಗಪ್ಪನೊಂದಿಗೆ ಪೊಲೀಸರ ತಂಡ
ಬಾಗಲಕೋಟೆಯಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಯತ್ನದ ಆರೋಪಿ ಕುಡ್ಡನಿಂಗಪ್ಪನೊಂದಿಗೆ ಪೊಲೀಸರ ತಂಡ   

ಬಾಗಲಕೋಟೆ: ನಗರದಲ್ಲಿ ಸೆಪ್ಟೆಂಬರ್ 28ರಂದು ಕಿರಾಣಿ ಅಂಗಡಿಗೆ ಚುರುಮರಿ ಕೊಳ್ಳಲು ಬಂದಿದ್ದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ ಕುಖ್ಯಾತ ಆರೋಪಿಯನ್ನು ಇಲ್ಲಿನ ಶಹರಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆ ಜುಮನಾಳದ ಕುಡ್ಡನಿಂಗಪ್ಪ ಮಾದರ (45) ಬಂಧಿತ ಆರೋಪಿ. ಕಿರಾಣಿ ಅಂಗಡಿ ಬಳಿ ಬಾಲಕಿಗೆ ಎದುರಾಗಿದ್ದ ಕುಡ್ಡನಿಂಗಪ್ಪ ಆಕೆಯ ತಂದೆಯ ಪರಿಚಯ ಹೇಳಿದ್ದನು. ‘ನೀವು ಹೊಸದಾಗಿ ಮನೆಕಟ್ಟಿಸುತ್ತಿದ್ದು, ಅದಕ್ಕೆ ಹೂವಿನ ಕುಂಡ ಕಳುಹಿಸಲುನಿಮ್ಮ ತಂದೆ ಹೇಳಿದ್ದಾರೆ. ಕೊಡುವೆ ಬಾ‘ ಎಂದು ಸಮೀಪದ ಕಬ್ಬಿನ ಹೊಲಕ್ಕೆ ಕರೆದೊಯ್ದಿದ್ದನು. ಅಲ್ಲಿ ಬಾಲಕಿಯ ಕುತ್ತಿಗೆ ಹಿಚುಕಿ ಅತ್ಯಾಚಾರ ಮಾಡಲು ಯತ್ನಿಸಿದ್ದನು. ಈ ವೇಳೆ ಅಲ್ಲಿಗೆ ವೃದ್ಧರೊಬ್ಬರು ಬಂದಿದ್ದು, ಅವರನ್ನು ಗಮನಿಸಿ ಆರೋಪಿ ಓಡಿಹೋಗಿದ್ದನು ಎನ್ನಲಾಗಿದೆ. ಮನೆಗೆ ಮರಳಿದ ಬಾಲಕಿ ನಡೆದ ಸಂಗತಿಯನ್ನು ಪೋಷಕರಿಗೆ ಹೇಳಿದ್ದಳು. ನಂತರ ಆ ಬಗ್ಗೆ ನಗರ ಠಾಣೆಯಲ್ಲಿ ಬಾಲಕಿಯ ತಂದೆ ದೂರು ದಾಖಲಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ಪತ್ತೆಗೆ ಡಿವೈಎಸ್‌ಪಿ ಎಸ್.ಬಿ.ಗಿರೀಶ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

ADVERTISEMENT

ರೈಟರ್ ನೀಡಿದ ಸುಳಿವು: 20 ವರ್ಷಗಳ ಹಿಂದೆ ನಡೆದಿದ್ದ ಇಂತಹದ್ದೇ ಪ್ರಕರಣಗಳನ್ನು ನೆನಪಿಸಿಕೊಂಡು ಠಾಣೆಯ ರೈಟರ್‌ (ಬರಹಗಾರರ) ನೀಡಿದ ಸುಳಿವು ಆರೋಪಿ ಪತ್ತೆಗೆ ನೆರವಾಗಿದೆ ಎಂದು ತಿಳಿದುಬಂದಿದೆ.

ತನಿಖಾ ತಂಡನಂತರ ಹೆಚ್ಚಿನ ಮಾಹಿತಿ ಕಲೆಹಾಕಿದಾಗ ಕುಡ್ಡನಿಂಗಪ್ಪ 1997 ಹಾಗೂ 98ರಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಾಗೂ 2017ರಲ್ಲಿ ವಿಜಯಪುರದ ಗೋಲಗುಂಬಜ್‌ ಬಳಿ ನಡೆದ ಮತ್ತೊಂದು ಅತ್ಯಾಚಾರ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿತ್ತು. ಜಮಖಂಡಿಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯದಿಂದ 17 ವರ್ಷ ಶಿಕ್ಷೆಗೆ ಒಳಗಾಗಿ ವಿಜಯಪುರ ಜೈಲಿನಲ್ಲಿ ಇದ್ದದ್ದು ತಿಳಿದುಬಂದಿತ್ತು.

ಬಿಡುಗಡೆಯಾಗಿದ್ದನು:ಬಾಲಕಿ ನೀಡಿದ ಮಾಹಿತಿ ಆಧರಿಸಿ ಆರೋಪಿ ಓಡಾಟ ನಡೆಸಿದ್ದ ರಸ್ತೆಗಳಲ್ಲಿ ಅಳವಡಿಸಿರುವ ಸಿ.ಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದರು. ಆ ವೇಳೆ ದಡ್ಡೇನವರ ಕ್ರಾಸ್‌ನಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಆರೋಪಿಯ ಚಿತ್ರ ಸೆರೆಯಾಗಿತ್ತು. ಅದನ್ನು ವಿಜಯಪುರ ಜೈಲಿಗೆ ಒಯ್ದು ಜೈಲರ್‌ಗೆ ತೋರಿಸಿದಾಗ ಆವರು ಕುಡ್ಡನಿಂಗಪ್ಪನನ್ನು ಗುರುತಿಸಿದ್ದರು.

ಜೈಲು ಶಿಕ್ಷೆ ಪೂರ್ಣಗೊಳಿಸಿ 14 ತಿಂಗಳ ಹಿಂದೆಯೇ ಆತ ಬಿಡುಗಡೆ ಆಗಿರುವುದಾಗಿ ತಿಳಿಸಿದ್ದರು.ಪಾನಮತ್ತನಾದರೆ ಇಂತಹ ದುಷ್ಕೃತ್ಯ ನಡೆಸುತ್ತಾನೆ ಎಂಬ ಮಾಹಿತಿ ಅಲ್ಲಿ ಗೊತ್ತಾಗುತ್ತಿದ್ದಂತೆಯೇ ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದರು. ತಕ್ಷಣ ಸ್ವಗ್ರಾಮ ಜುಮನಾಳಕ್ಕೆ ತೆರಳಿ, ಅಲ್ಲಿ ವಿಚಾರಿಸಿದಾಗ ಆರೋಪಿ ಬಾಗಲಕೋಟೆಗೆ ಬಂದಿರುವುದು ಗೊತ್ತಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾಗಿ ನಗರದಲ್ಲಿಯೇ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ನಂತರ ಗೌಂಡಿ ಕೆಲಸ ಮಾಡುತ್ತಿದ್ದ ಕುಡ್ಡ ನಿಂಗಪ್ಪ, ನಗರದಲ್ಲಿರುವ ಸಂಬಂಧಿಯೊಬ್ಬರ ಮನೆಗೆ ಆಗಾಗ ಬರುತ್ತಿದ್ದನು. ಆ ವೇಳೆ ಇಂತಹ ದುಷ್ಕೃತ್ಯಕ್ಕೆ ಮುಂದಾಗಿದ್ದನು. ಆರೋಪಿ ಇನ್ನಷ್ಟು ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.