ADVERTISEMENT

ಬಾಗಲಕೋಟೆ ನವನಗರ ಅಭಿವೃದ್ಧಿ ಕುಂಠಿತ: ಮಾಜಿ ಶಾಸಕ ವೀರಣ್ಣ ಚರಂತಿಮಠ ಆರೋಪ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 4:22 IST
Last Updated 14 ಸೆಪ್ಟೆಂಬರ್ 2025, 4:22 IST
   

ಬಾಗಲಕೋಟೆ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಾಗಲಕೋಟೆ ನವನಗರ ಅಭಿವೃದ್ಧಿ ನಿಂತ ನೀರಾಗಿದ್ದು, ಈ ವಿಷಯದಲ್ಲಿ 10 ವರ್ಷಗಳಷ್ಟು ಹಿಂದೆ ಸರಿದಿದೆ’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ದೂರಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನವನಗರ ಅವ್ಯವಸ್ಥೆಯ ಆಗರವಾಗಿದ್ದು, ಸ್ವಚ್ಛತೆಯಂತೂ ಕಾಣಿಸುತ್ತಿಲ್ಲ. ಚರಂಡಿ ನೀರು ಮಿಶ್ರಿತ ಕಲುಷಿತ ಕುಡಿಯುವ ನೀರಿನ ವ್ಯವಸ್ಥೆಯಿಂದಾಗಿ ಜನರ ಆರೋಗ್ಯ ಹಾಳಾಗಿ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ’ ಎಂದರು.

‘ಬೀದಿ ದೀಪಗಳ ಸರಿಯಾದ ವ್ಯವಸ್ಥೆಯಿಲ್ಲ, ಸಾರ್ವಜನಿಕ ಸ್ಥಳಗಳು, ಉದ್ಯಾನಗಳು ಕಸದಿಂದ ತುಂಬಿವೆ. ರಸ್ತೆ ಬದಿಗಳಲ್ಲಿ ಮುಳ್ಳು ಕಂಟಿಗಳು ಬೆಳೆದು ಸಂಚಾರಕ್ಕೆ ಅಡತಡೆಯುಂಟಾಗಿದೆ. ಕಳ್ಳತನ ಪ್ರಕರಣಗಳು, ಪುಂಡಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬಾಗಲಕೋಟೆ ಪಟ್ಟಣದ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ’ ಎಂದು ದೂರಿದರು.

‘ಸರ್ಕಾರ ಬಂದು ಎರಡು ವರ್ಷ ಕಳೆದರೂ ಬಿಟಿಡಿಎಗೆ ಆಡಳಿತ ಮಂಡಳಿ ಇಲ್ಲದಿರುವುದು ದುರದೃಷ್ಟಕರ. ಜಿಲ್ಲಾ ಆಸ್ಪತ್ರೆಯ ಕಾಂಪೌಂಡ್‌ ಬಿದ್ದು ಬಹಳ ದಿನಗಳಾದರೂ ದುರಸ್ತಿ ಮಾಡಿಲ್ಲ. ಸರಿಯಾದ ನಿರ್ವಹಣೆ ಇಲ್ಲದಿರುವುದರಿಂದ ನವನಗರದ ರಸ್ತೆಗಳಂತೂ ಹಾಳಾಗಿ ಅಪಘಾತಗಳ ತಾಣವಾಗುತ್ತಿವೆ. ಬಾಗಲಕೋಟೆಯಲ್ಲಿ ಈದ್‌ ಮಿಲಾದ್‌ ಸಂದರ್ಭದಲ್ಲಿ ದೇಶದ್ರೋಹಿಗಳು, ಹಮಾಸ್ ಉಗ್ರರ ಭಾವಚಿತ್ರವಿರುವ ಕಟೌಟ್‌ ಹಾಕಿದರೂ ಆಡಳಿತ ಕ್ರಮ ಕೈಗೊಳ್ಳದೇ ಇರುವುದನ್ನು ಗಮನಿಸಿದರೆ ಸರ್ಕಾರ ದೇಶದ್ರೋಹಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ ಎಂಬುದು ಸಾಬೀತಾಗುತ್ತಿದೆ’ ಎಂದು ತಿಳಿಸಿದರು.

ನವನಗರದ ಯುನಿಟ್‌ 2ರಲ್ಲಿ ಪೋಲಿಸ್ ಠಾಣೆ ಸ್ಥಾಪಿಸಬೇಕು. ನವನಗರದಲ್ಲಿ ಪೋಲಿಸ್ ಗಸ್ತು ಹೆಚ್ಚಿಸಬೇಕು, ಅನಧಿಕೃತವಾಗಿ ಮಸೀದಿ ನಿರ್ಮಾಣಕ್ಕೆ ಅವಕಾಶ ಕೊಟ್ಟಿರುವುದನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ ಅವರು, ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳದೇ ಇದ್ದರೆ ಬಿಟಿಡಿಎ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಪಕ್ಷದ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.