ADVERTISEMENT

ಬಳ್ಳಾರಿ ಬಣಕ್ಕೆ ಭರ್ಜರಿ ಗೆಲುವು

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ನಡೆದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 12:52 IST
Last Updated 11 ಜುಲೈ 2019, 12:52 IST
ಬಾಗಲಕೋಟೆಯಲ್ಲಿ ಗುರುವಾರ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ನಡೆದ ಚುನಾವಣೆಯ ನಂತರ ವಿಜಯೋತ್ಸವದ ನೋಟ
ಬಾಗಲಕೋಟೆಯಲ್ಲಿ ಗುರುವಾರ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ನಡೆದ ಚುನಾವಣೆಯ ನಂತರ ವಿಜಯೋತ್ಸವದ ನೋಟ   

ಬಾಗಲಕೋಟೆ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಬಿ.ಬಳ್ಳಾರಿ ನೇತೃತ್ವದ ಬಣ ಭರ್ಜರಿ ಜಯ ಪಡೆದು ಸತತ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಿತು.

ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆರೋಗ್ಯ ಇಲಾಖೆಯ ನೌಕರ ಮಲ್ಲಿಕಾರ್ಜುನ ಬಳ್ಳಾರಿ, ಖಜಾಂಚಿಯಾಗಿ ಕೆಜಿಐಡಿ ಇಲಾಖೆಯ ಎಸ್.ಕೆ.ಹಿರೇಮಠ ಹಾಗೂ ರಾಜ್ಯ ಪರಿಷತ್ ಸದಸ್ಯರಾಗಿ ಕೃಷಿ ಇಲಾಖೆಯ ಎಸ್.ವಿ.ಸತ್ಯರಡ್ಡಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಎದುರಾಳಿ ಹಣಮಂತ ರಾಂಪುರ ಅವರನ್ನು ಮಲ್ಲಿಕಾರ್ಜುನ ಬಳ್ಳಾರಿ ಮಣಿಸಿದರು. ಚಲಾವಣೆಯಾದ 69 ಮತಗಳ ಪೈಕಿ ಮಲ್ಲಿಕಾರ್ಜುನ ಅವರಿಗೆ 56 ಮತಗಳು ಬಿದ್ದರೆ, ರಾಂಪುರ 13 ಮತಗಳಿಗೆ ತೃಪ್ತಿಪಟ್ಟರು. ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರೇಮಠ 55 ಮತಗಳ ಪಡೆದರೆ, ಎದುರಾಳಿ ಆರ್.ಎಚ್.ಯಳಬಾವಿ 14 ಮತ ಪಡೆದರು. ರಾಜ್ಯ ಪರಿಷತ್‌ಗೆ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿಎಸ್.ವಿ.ಸತ್ಯರಡ್ಡಿ ಅವರಿಗೆ 56 ಮತ ಬಿದ್ದರೆ, ಮಂಜುನಾಥ ಬಂಡರಗಲ್ಲ 13 ಮತಗಳನ್ನು ಪಡೆದರು.

ADVERTISEMENT

ಬೆಳಿಗ್ಗೆ 11 ಗಂಟೆಯಿಂದ ಸಂಜೆ 4ರವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಸಹಕಾರ ಸಂಘಗಳ ನಿವೃತ್ತ ರಿಜಿಸ್ಟ್ರಾರ್ ವಿ.ಕೆ.ಆಲದಿ ಚುನಾವಣಾಧಿಕಾರಿಯಾಗಿ ಕೆಲಸ ಮಾಡಿದರು. ಬಾಗಲಕೋಟೆ ತಾಲ್ಲೂಕಿನ 61 ಇಲಾಖೆಗಳಿಂದ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಎಂಟು ತಾಲ್ಲೂಕು ಘಟಕಗಳಿಂದ ಆಯ್ಕೆಯಾದ ಮೂವರು ಪದಾಧಿಕಾರಿಗಳ ಪೈಕಿ ಒಬ್ಬರು ಮತದಾನ ಮಾಡಿದರು.

ಚುನಾವಣಾ ಪ್ರಕ್ರಿಯೆಯ ಮೊದಲ ಹಂತವಾಗಿ ಈಗಾಗಲೇ ನಾನಾ ಇಲಾಖೆಗಳ ಪದಾಧಿಕಾರಿಗಳ ಆಯ್ಕೆ ನಡೆದಿತ್ತು. 61 ಸ್ಥಾನಗಳ ಪೈಕಿ 54ಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಬಾಕಿ ಉಳಿದ ಏಳು ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಸಲಾಗಿತ್ತು.

ವಿಜಯೋತ್ಸವ ಆಚರಣೆ: ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಎಂ.ಬಿ.ಬಳ್ಳಾರಿ ಬಣದ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಗುಲಾಲು ಎರಚಿ, ಜಯಘೋಷ ಮಾಡಿ ಗೆಲುವು ಸಾಧಿಸಿದವರನ್ನು ಹೊತ್ತು ಮೆರೆದು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.