ADVERTISEMENT

ಬಸವಣ್ಣನ ಆಶಯದಡಿ ಸಂಘದ ರಚನೆ: ಹನುಮಂತ ಮಳಲಿ ಅಭಿಮತ

ಆರ್‌ಎಸ್‌ಎಸ್

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 15:21 IST
Last Updated 13 ಅಕ್ಟೋಬರ್ 2019, 15:21 IST
ಬಾಗಲಕೋಟೆಯಲ್ಲಿ ಭಾನುವಾರ ನಡೆದ ಆರ್‌ಎಸ್‌ಎಸ್ ನಗರ ಘಟಕದ ವಾರ್ಷಿಕೋತ್ಸವದಲ್ಲಿ ಹನುಮಂತ ಮಳಲಿ ಮಾತನಾಡಿದರು. ಪ್ರಣವ್ ಕನೋರಿಯಾ, ಡಾ.ಸಿ.ಎಸ್.ಪಾಟೀಲ ಚಿತ್ರದಲ್ಲಿದ್ದಾರೆ
ಬಾಗಲಕೋಟೆಯಲ್ಲಿ ಭಾನುವಾರ ನಡೆದ ಆರ್‌ಎಸ್‌ಎಸ್ ನಗರ ಘಟಕದ ವಾರ್ಷಿಕೋತ್ಸವದಲ್ಲಿ ಹನುಮಂತ ಮಳಲಿ ಮಾತನಾಡಿದರು. ಪ್ರಣವ್ ಕನೋರಿಯಾ, ಡಾ.ಸಿ.ಎಸ್.ಪಾಟೀಲ ಚಿತ್ರದಲ್ಲಿದ್ದಾರೆ   

ಬಾಗಲಕೋಟೆ: ‘ಇವನಾರವ, ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಎಂದೆಣಿಸಯ್ಯ ಎಂಬ ಅಣ್ಣ ಬಸವಣ್ಣನ ಸೂತ್ರದ ಮೇಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಚನೆಯಾಗಿದೆ. ಹಾಗಾಗಿ ಕೋಮುವಾದಿ, ಜಾತಿವಾದಿ ಎಂಬ ಆರೋಪಗಳಿಗೆಲ್ಲ ಉತ್ತರಿಸುವುದಿಲ್ಲ‘ ಎಂದು ಸಂಘದ ಧರ್ಮ ಜಾಗರಣ ಉತ್ತರ ಕರ್ನಾಟಕ ಪ್ರಾಂತ ಸಹ ಸಂಯೋಜಕ ಹನುಮಂತ ಮಳಲಿ ಹೇಳಿದರು.

ಇಲ್ಲಿನ ಬಿ.ವಿ.ವಿ ಸಂಘದ ಆವರಣದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಘಟಕದ ವಾರ್ಷಿಕೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

‘ಅಸ್ಪೃಶ್ಯತೆ ಇದೆ ಒಪ್ಪಿಕೊಳ್ಳುತ್ತೇವೆ. ಅದು ಯಾವಾಗ ಆರಂಭವಾಯಿತು ಎಂಬ ಚರ್ಚೆಗಳೆಲ್ಲಾ ಬೇಡ. ಅದರ ಯೋಚನೆಯೂ ಬೇಡ. ನಮ್ಮ ಮನೆಯ (ಸಂಘದ) ಒಳಗೆ ಎಲ್ಲರೂ ಬನ್ನಿ‘ ಎಂದು ಮುಕ್ತ ಆಹ್ವಾನ ನೀಡಿದ ಅವರು, ‘ಸ್ವಯಂ ಸೇವಕರಲ್ಲಿ ಜಾತಿ ಮೀರಿದ ಆತ್ಮೀಯತೆ ಬೆಳೆಸಲು ಎಲ್ಲರನ್ನೂ ಒಟ್ಟುಗೂಡಿಸಿ ಆಟಗಳನ್ನು ಆಡಿಸುತ್ತಿದ್ದೇವೆ. ವಿವಿಧತೆಯಲ್ಲಿ ಏಕತೆ, ವೈಶಾಲ್ಯತೆ ಅದು ಹಿಂದೂಸ್ಥಾನದ ಸಂಪ್ರದಾಯ’ ಎಂದರು.

ADVERTISEMENT

‘2025ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರಂಭವಾಗಿ 100 ವರ್ಷ ಆಗಲಿದೆ. ಅಷ್ಟರೊಳಗೆ ಭಾರತದ ಪ್ರತಿ ಹಳ್ಳಿ,ಗಲ್ಲಿಗಳಲ್ಲಿ, ಪೊಲೀಸ್, ಸೈನ್ಯ, ಶಿಕ್ಷಣ, ಸಂವಿಧಾನದಲ್ಲಿ ಸಂಘ ಹೋಗಬೇಕು. ಸಂಘದ ಜೊತೆ ಗುರುತಿಸಿಕೊಂಡವರು, ಸಂಘದ ಒಳಗೆ ಬಂದು ಶಿಕ್ಷಣ ಪಡೆದವರು ಯಾವ ಪಕ್ಷದಲ್ಲಿ ಬೇಕಾದರೂ ಕೆಲಸ ಮಾಡಲಿ‘ ಎಂದು ಹೇಳಿದರು.

‘ಕೇಂದ್ರದಲ್ಲಿ ಪುರುಷತ್ವ ಇರುವ ಸರ್ಕಾರ ಬಂದಿದೆ.ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿ ದೇಶದ ಮುಕುಟದಲ್ಲಿ ವಿಜಯ ಸಾಧಿಸಿದ್ದೇವೆ. ಏಕರೂಪದ ತೆರಿಗೆ ಜಾರಿಗೊಳಿಸಿದೆ. ಪ್ಲಾಸ್ಟಿಕ್‌ ರದ್ದು ಮಾಡಿ ಸ್ವಚ್ಛತೆಗೆ ಒತ್ತು ನೀಡಿದ್ದೇವೆ. ರಾಮ ಮಂದಿರ ನಿರ್ಮಾಣದ ದಿನವೂ ಈಗ ದೂರವಿಲ್ಲ‘ ಎಂದರು.

‘ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಯಾಗುವವರೆಗೂ ಹಿಂದೂಗಳು ಮಿತ ಸಂತಾನಕ್ಕೆ ಒತ್ತು ನೀಡಬೇಡಿ‘ ಎಂದು ಸಲಹೆ ನೀಡಿದ ಅವರು, ‘ಇಲ್ಲದಿದ್ದರೆ 2050ರ ವೇಳೆಗೆ ಭಾರತದಲ್ಲಿಯೇ ಹಿಂದೂಗಳು ಅಲ್ಪಸಂಖ್ಯಾತರು ಆಗಲಿದ್ದಾರೆ‘ ಎಂದು ಎಚ್ಚರಿಕೆ ನೀಡಿದರು.

‘ಭಾರತ ಉಪಖಂಡದ ಶೇ 63ರಷ್ಟು ಭೂಭಾಗ ಇನ್ನೂ ನಮ್ಮ ಕೈತಪ್ಪಿದೆ. ಯುಗೊಸ್ಲಾವಿಯಾ, ಥೈಲ್ಯಾಂಡ್, ಮಲೇಶಿಯಾ, ಅಪಘಾನಿಸ್ತಾನ, ಪಾಕಿಸ್ತಾನ, ಸಿರಿಯಾ, ರಷ್ಯಾದ 10 ದೇಶಗಳು, ಶ್ರೀಲಂಕಾ, ನೇಪಾಳ, ಟಿಬೆಟ್, ಭೂತಾನ್ ದೇಶಗಳು ನಮ್ಮದೇ (ಹಿಂದೂ) ನೆಲವಾಗಿವೆ. ಸ್ವಲ್ಪ ದಿನಗಳಲ್ಲಿ ಅವರೇ ಬಿಟ್ಟುಕೊಡಲಿದ್ದಾರೆ‘ ಎಂದು ಭವಿಷ್ಯ ನುಡಿದರು.

ಬಾಗಲಕೋಟೆ ಸಿಮೆಂಟ್ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಣವ್ ಕನೋರಿಯಾ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಬಾಗಲಕೋಟೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ನಮ್ಮ ಸಂಸ್ಥೆ ಕೂಡ ಕೈಜೋಡಿಸಿದೆ‘ ಎಂದರು.

ಸಂಘದ ಹಿರಿಯರಾದ ಡಾ.ಸಿ.ಎಸ್.ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.