ADVERTISEMENT

ಮಳೆ ಹಾನಿ ಮಾಹಿತಿ ನೀಡಿ: ಪಾಟೀಲ

ಬೆಳೆ ಹಾನಿ ಪ್ರದೇಶಗಳಿಗೆ ಶಾಸಕ, ಜಿಲ್ಲಾಧಿಕಾರಿ ಬೇಟಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:42 IST
Last Updated 30 ಸೆಪ್ಟೆಂಬರ್ 2025, 6:42 IST
ಬೀಳಗಿ ತಾಲ್ಲೂಕಿನ ಬೆಳೆ ಹಾನಿ ಪ್ರದೇಶಗಳಿಗೆ ಶಾಸಕ ಜೆ.ಟಿ.ಪಾಟೀಲ, ಜಿಲ್ಲಾಧಿಕಾರಿ ಸಂಗಪ್ಪ ಎಂ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರು 
ಬೀಳಗಿ ತಾಲ್ಲೂಕಿನ ಬೆಳೆ ಹಾನಿ ಪ್ರದೇಶಗಳಿಗೆ ಶಾಸಕ ಜೆ.ಟಿ.ಪಾಟೀಲ, ಜಿಲ್ಲಾಧಿಕಾರಿ ಸಂಗಪ್ಪ ಎಂ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರು    

ಬೀಳಗಿ: ‘ಅತಿಯಾದ ಮಳೆಯಾಗಿದ್ದರಿಂದ ತಾಲ್ಲೂಕಿನಲ್ಲಿ 203 ಮನೆಗಳಲ್ಲಿ ನೀರು ನುಗ್ಗಿದ್ದು ಮತ್ತು ಜಮೀನುಗಳಿಗೆ ನೀರು ನುಗ್ಗಿ ಹಾನಿಯಾಗಿರುವ ಕುರಿತು ತಹಶೀಲ್ದಾರ್ ಗ್ರಾಮಾಡಳಿತಾಧಿಕಾರಿಗಳ ಮೂಲಕ ಬೆಳೆಗಳ ಹಾನಿ ಮತ್ತು ಗ್ರಾಮ ಪಂಚಾಯಿತಿ ಪಿಡಿಒಗಳ ಮೂಲಕ ಮನೆಗಳು ಬಿದ್ದ ಬಗ್ಗೆ ಸಮಗ್ರ ಮಾಹಿತಿ ಪಡೆದು ಜಿಲ್ಲಾಧಿಕಾರಿಗೆ ಕೊಡಬೇಕು. ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಲಾಗುವುದು ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ತಾಲ್ಲೂಕಿನ ಬಾಡಗಂಡಿ ಹಾಗೂ ರೊಳ್ಳಿ ಗ್ರಾಮಗಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಜೆ.ಟಿ.ಪಾಟೀಲ ಹಾಗೂ ಜಿಲ್ಲಾಧಿಕಾರಿ ಸಂಗಪ್ಪ ಎಂ. ಅವರು ಭೇಟಿ ನೀಡಿ ಪರಿಶೀಲಿಸಿದ ನಂತರ ನಡೆದ ಶಾಸಕ ಜೆ.ಟಿ. ಪಾಟೀಲ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಳೆಯ ಅತಿವೃಷ್ಟಿಯಲ್ಲಿ 15 ಸಾವಿರ ಎಕರೆ ತೋಟಗಾರಿಕೆ ಬೆಳೆ ಹಾಗೂ 20 ಸಾವಿರ ಎಕರೆ ಕೃಷಿ ಉತ್ಪನ ವಿವಿಧ ಬೆಳೆ ಹಾನಿಯಾಗಿದೆ. ತೋಟಗಾರಿಕೆಯಲ್ಲಿ ಈರುಳ್ಳಿ, ತರಕಾರಿ ಕಾಯಿಪಲ್ಲೆ, ಚೆಂಡ ಹೂ ಹಾಗೂ ಅನೇಕ ಬೆಳೆಗಳು ಹಾನಿಯಾಗಿವೆ. ರೈತರ ಹೊಲದಲ್ಲಿದ್ದ ಈರುಳ್ಳಿ ಬೆಳೆ ಹೊಲದಲ್ಲಿಯೇ ಕೊಳೆತು ನಷ್ಟವಾಗಿದೆ. ಜಿಲ್ಲಾಧಿಕಾರಿ ಮುಖಾಂತರ ರೈತರಿಗೆ ತ್ವರಿತವಾಗಿ ಎನ್ ಡಿ ಆರ್ ಎಫ್ ಗೈಡ್‌ಲೈನ್ಸ್ ಪ್ರಕಾರ ಹಣ ಬಿಡುಗಡೆ ಮಾಡಬೇಕು ಎಂದರು.

ಮನೆಗಳ ಸರ್ವೆ ಮಾಡಿ, ರೊಳ್ಳಿ ಗ್ರಾಮದಲ್ಲಿ ಅಲ್ಲಸಾಬ ಮನಸೂರಸಾಬ ಟಗರನ್ನವರ ಮನೆ ಪೂರ್ಣ ಬಿದ್ದು ಸಂಪೂರ್ಣ ಹಾನಿಯಾಗಿದೆ. ಕೇವಲ ₹6 ಸಾವಿರ ಪರಿಹಾರ ಹಣದ ವರದಿ ನೀಡಿದ್ದಾರೆ ಎಂದು ಶಾಸಕ ಮತ್ತು ಜಿಲ್ಲಾಧಿಕಾರಿ ಅವರಿಗೆ ಗ್ರಾಮಸ್ಥರು ಗಮನಕ್ಕೆ ತಂದರು, ಗ್ರಾಮಸ್ಥರು ಹೇಳುತ್ತಿದಂತೆ ಜಿಲ್ಲಾಧಿಕಾರಿ ಅವರು ತಹಶೀಲ್ದಾರ್ ಗೆ ಪರಿಶೀಲನೆ ಮಾಡಲು ಸೂಚನೆ ನೀಡಿದರು.

ಆಯಾ ಗ್ರಾಮ ಪಂಚಾಯಿತಿ ಪಿಡಿಒಗಳು ಮನೆಗಳು ಬಿದ್ದ ಬಗ್ಗೆ ವರದಿ ನೀಡಬೇಕು ಎಂದರು.

ಪರಿಶಿಷ್ಟ ಪಂಗಡದ ವಸತಿ ನಿಲಯದಲ್ಲಿ ಊಟ ಸವಿದ ಶಾಸಕ ಜೆ.ಟಿ.ಪಾಟೀಲ ಹಾಗೂ ಜಿಲ್ಲಾಧಿಕಾರಿ ಸಂಗಪ್ಪ ಎಂ ಅವರು ವಸತಿನಿಲಯಕ್ಕೆ ಭೇಟಿ ನೀಡಿ ನಿಲಯ ವ್ಯವಸ್ಥೆ ಪರಿಶೀಲಿಸಿ, ಅಲ್ಲಿಯ ಅವ್ಯವಸ್ಥೆ ನೋಡಿ ಶೌಚಾಲಯ ಗಬ್ಬು ವಾಸನೆ ಬರುತ್ತಿವೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಊಟಕ್ಕೆ ಕಡಿಮೆ ಬೆಳೆ ಹಾಕಿ ಸಾಂಬರ ಮಾಡಿದರೆ ಹೇಗೆ ಪ್ರತಿದಿನ ತಾಜಾ ಕಾಯಿಪಲ್ಲೆ ತರಬೇಕು. ವಸತಿ ನಿಲಯದ ಊಟದ ಮೇನೂ ಪ್ರಕಾರ ಊಟ ವ್ಯವಸ್ಥೆ ಮಾಡಬೇಕು. ಗ್ರಂಥಾಲಯದ ಕಿಟಕಿಗಳಿಗೆ ಪರದೆ ಹಾಕುವ ವ್ಯವಸ್ಥೆ ಮಾಡಿ ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಅಧಿಕಾರಿ ಹಾಗೂ ವಸತಿ ನಿಲಯದ ವಾರ್ಡನಗೆ ಜಿಲ್ಲಾಧಿಕಾರಿ ಸೂಚಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಾಕಾಟ್ಟಿ, ಮೀನುಗಾರಿಕೆ ಉಪ ನಿರ್ದೇಶಕಿ ಅಂಜನಾದೇವಿ ಎಂ, ತಹಶೀಲ್ದಾರ್‌ ವಿನೋದ ಹತ್ತಳ್ಳಿ, ತಾಪಂ ಇಒ ಹಾಗೂ ಕೃಷಿ ಅಧಿಕಾರಿ ಶ್ರೀನಿವಾಸ ಪಾಟೀಲ, ತೋಟಗಾರಿಕೆ ಅಧಿಕಾರಿ ಮಹೇಶ ದಂಡನ್ನವರ, ರೊಳ್ಳಿಯ ರೈತರಾದ ಚಂದ್ರಶೇಖರ ಕಾಖಂಡಕಿ, ಯಮನಪ್ಪ ರೊಳ್ಳಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಧರೆಗೊಂಡ, ಮಂಜುನಾಥ ಕೂಗಟಿ ಇದ್ದರು.

- ಪರಿಹಾರದ ಆದೇಶಪತ್ರ ವಿತರಣೆ

ತಾಲ್ಲೂಕಿನ ಕೊಪ್ಪ ಎಸ್.ಆರ್ ಗ್ರಾಮದ ವಿಠ್ಠಲ ಯಂಕಪ್ಪ ವಾಲಿಕಾರ ನಿರಂತರ ಸುರಿದ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದರಿಂದ ಅವರ ಕುಟುಂಬಕ್ಕೆ ಕಂದಾಯ ಇಲಾಖೆಯಿಂದ ಮೃತರ ಪತ್ನಿ ಚಂದ್ರವ್ವ ವಿಠ್ಠಲ ವಾಲಿಕಾರಗೆ ₹5 ಲಕ್ಷ ಮಂಜೂರಾತಿ ಆದೇಶ ಪತ್ರವನ್ನು ಶಾಸಕ ಜೆ.ಟಿ.ಪಾಟೀಲ ಹಾಗೂ ತಹಶೀಲ್ದಾರ್‌ ವಿನೋದ ಹತ್ತಳ್ಳಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.