ADVERTISEMENT

ಜಮಖಂಡಿ: ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಇಲ್ಲದೆ ತೊಂದರೆ

ಆರ್.ಎಸ್.ಹೊನಗೌಡ
Published 28 ನವೆಂಬರ್ 2023, 5:00 IST
Last Updated 28 ನವೆಂಬರ್ 2023, 5:00 IST
   

ಜಮಖಂಡಿ: ಇಲ್ಲಿನ ರುದ್ರಸ್ವಾಮಿಪೇಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ನೀರು, ಶೌಚಾಲಯ, ಆಟದ ಮೈದಾನ, ಕಾಂಪೌಂಡ್, ಬಿಸಿಯೂಟ ಸೇರಿದಂತೆ ವಿವಿಧ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.

1996ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ 1 ರಿಂದ 7ನೇ ತರಗತಿಯ 84 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶೌಚಾಲಯ ಇಲ್ಲದಿರುವುದರಿಂದ ಶೌಚಕ್ಕೆ ಹೋಗಲು ತೀವ್ರ ತೊಂದರೆಯಾಗಿದೆ. 

ಶಾಲೆಯಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಬಿಸಿಯೂಟಕ್ಕೆ ಹಾಗೂ ವಿದ್ಯಾರ್ಥಿಗಳು ಕುಡಿಯುವ ನೀರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಅಡುಗೆ ಸಹಾಯಕಿಯರು ಬಿಸಿಯೂಟಕ್ಕೆ ನೀರನ್ನು ಬೇರೆ ಕಡೆಯಿಂದ ತರುತ್ತಾರೆ. ಆದರೆ, ಮಕ್ಕಳಿಗೆ ನೀರಿಲ್ಲ.

ADVERTISEMENT

ಶಾಲೆಯ ಮುಂದೆ ಚರಂಡಿ ಹಾದು ಹೋಗಿದ್ದು ಗಬ್ಬೆದ್ದು ನಾರುತ್ತಿದೆ. ಚರಂಡಿಯ ಮೇಲೆ ಮುಚ್ಚಿ, ನೀರು ನಿಂತು ವಾಸನೆ ಬರದಂತೆ ಮಾಡಲು ಹಾಗೂ ಕಾಂಪೌಂಡ್ ನಿರ್ಮಾಣಮಾಡಲು ಹಲವಾರು ಬಾರಿ ಸ್ಥಳೀಯರು ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಚರಂಡಿ ದಾಟುವಾಗ ಹಲವು ಬಾರಿ ಚಿಕ್ಕ ಮಕ್ಕಳು ಚರಂಡಿಯಲ್ಲಿ ಬಿದ್ದಿರುವ ಉದಾಹರಣೆಗಳಿವೆ.

ಒಂದರಿಂದ ಏಳನೇ ತರಗತಿ ನಡೆಸಲು ಏಳು ಕೊಠಡಿಗಳು ಬೇಕು. ಬಿಸಿಯೂಟಕ್ಕೆ ಒಂದು, ಕಚೇರಿಗೆ ಸೇರಿ ಒಂಬತ್ತು ಕೊಠಡಿಗಳು ಬೇಕು. ಇಲ್ಲಿ ಆರು ಕೊಠಡಿಗಳು ಮಾತ್ರ ಇವೆ. ಮೂರು ಕೊಠಡಿಗಳ ಅವಶ್ಯಕತೆ ಇದೆ. ಚಿಕ್ಕದಾದ ಸೋರುವ ಸೂರಿನಲ್ಲಿ ಬಿಸಿಯೂಟ ಮಾಡುತ್ತಿದ್ದಾರೆ. ಕಚೇರಿಯಲ್ಲಿಯೇ ಒಂದು ತರಗತಿ ನಡೆಸುತ್ತಿದ್ದಾರೆ. ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಆಟವಾಡಲು ಸಾಮಗ್ರಿಗಳಿಲ್ಲ, ಮೈದಾನವಿಲ್ಲ.

‘ನಗರಸಭೆಯಿಂದ ಎರಡು ವರ್ಷದ ಹಿಂದೆ ಶೌಚಾಲಯ ಕಟ್ಟಲು ಪ್ರಾರಂಭ ಮಾಡಿ, ಅರ್ಧಕ್ಕೆ ಬಿಟ್ಟಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತಿದ್ದು, ಕೂಡಲೇ ನಗರಸಭೆ ಅಧಿಕಾರಿಗಳು ವಿದ್ಯಾರ್ಥಿ, ವಿದ್ಯಾರ್ಥಿನಿ ಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು’ ಎಂದು ನಾಗರಾಜ ಬಳೂಲಗಿಡದ ಒತ್ತಾಯಿಸಿದರು.

‘ಇಲ್ಲಿರುವ ಮಕ್ಕಳಿಗೆ ಖಾಸಗಿ ಶಾಲೆಗೆ ಹೋಗುವ ಸಾಮರ್ಥ್ಯವಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಶಾಲೆ ಅಭಿವೃದ್ಧಿ ಮಾಡಿ ಉಳಿಸಿಕೊಳ್ಳಬೇಕು’ ಎಂದು ರಾಜೇಶ ಲಗಳಿ ತಿಳಿಸಿದರು.

‘ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಿಗೆ ಎರಡು ಬಾರಿ ಪತ್ರ ಬರೆದಿದ್ದೇವೆ. ಶಾಲೆಗೆ ಭೇಟಿ ನೀಡಿ ಪರಿಶೀಲಿಸುವಂತೆ ಡಿಡಿಪಿಐ, ಬಿಇಒಗೆ ತಿಳಿಸಿ ವರ್ಷ ಕಳೆದರೂ ಕ್ರಮ ತೆಗೆದುಕೊಂಡಿಲ್ಲ’ ಎಂದು ಈರಣ್ಣ ಸುತಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.