ADVERTISEMENT

ಭಜಂತ್ರಿ ಸಮಾಜಕ್ಕೆ ಸೂಕ್ತ ಸ್ಥಾನಮಾನ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 3:01 IST
Last Updated 6 ಅಕ್ಟೋಬರ್ 2025, 3:01 IST
ರಬಕವಿ ಬನಹಟ್ಟಿ ಸಮೀಪದ ರಾಮಪುರದಲ್ಲಿ ನಡೆದ ನೂಲಿ ಚಂದಯ್ಯನವರ 918 ಜಯಂತಿ ಕಾರ್ಯಕ್ರಮವನ್ನು ಸಚಿವ ಸತೀಶ ಜಾರಿಕಿಹೊಳಿ ಉದ್ಘಾಟಿಸಿದರು
ರಬಕವಿ ಬನಹಟ್ಟಿ ಸಮೀಪದ ರಾಮಪುರದಲ್ಲಿ ನಡೆದ ನೂಲಿ ಚಂದಯ್ಯನವರ 918 ಜಯಂತಿ ಕಾರ್ಯಕ್ರಮವನ್ನು ಸಚಿವ ಸತೀಶ ಜಾರಿಕಿಹೊಳಿ ಉದ್ಘಾಟಿಸಿದರು   

ರಬಕವಿ ಬನಹಟ್ಟಿ: ಭಜಂತ್ರಿ ಸಮುದಾಯವು ಅತ್ಯಂತ ಹಿಂದುಳಿದ ಸಮಾಜವಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನ ಮಾನಗಳನ್ನು ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಸಮೀಪದ ರಾಮಪುರದ ದಾನೇಶ್ವರ ಸಮುದಾಯ ಭವನದಲ್ಲಿ ರಬಕವಿ ಬನಹಟ್ಟಿ ತಾಲ್ಲೂಕು ನೂಲಿ ಚಂದಯ್ಯ ಜಯಂತಿ ಉತ್ಸವ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಚಂದಯ್ಯನವರ 918 ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಶಿಕ್ಷಣದಿಂದ ಸಂಘಟನೆ ಬೆಳೆಯುತ್ತದೆ. ಶಿಕ್ಷಣ ಸಂಘಟನೆಯ ಹೋರಾಟವು ಸಮಾಜದ ಧ್ಯೇಯವಾಗಬೇಕು ಎಂದು ತಿಳಿಸಿದರು.

ADVERTISEMENT

ಶಾಸಕ ಸಿದ್ದು ಸವದಿ ಮಾತನಾಡಿ, ನೂಲಿ ಚಂದಯ್ಯನವರು ಕಾಯಕದ ಮಹತ್ವವನ್ನು ನಾಡಿಗೆ ತಿಳಿಸಿದವರು. ಹನ್ನೆರಡನೆಯ ಶತಮಾನದ ಶರಣರ ತತ್ವ ಸಿದ್ಧಾಂತಗಳು ಇಂದಿನ ದಿನಗಳಲ್ಲಿಯೂ ಹೆಚ್ಚು ಪ್ರಸ್ತುತವಾಗಿವೆ. ಪ್ರತಿಯೊಬ್ಬರೂ ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ತಿಳಿಸಿದರು.

ಅಲೆಮಾರಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಜಿ. ಮಾದೇಶ ಮಾತನಾಡಿದರು.

ರಬಕವಿಯ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ, ಬೆಳಗಲಿಯ ಸಿದ್ಧರಾಮ ಶಿವಯೋಗಿಗಳು, ಕಣದಾಳದ ರಾಮಣ್ಣ ಮಹಾರಾಜರು, ನಿಹಾಲ ಅಪ್ಪಾಜಿ ಪೂಜ್ಯರು ಸಾನ್ನಿಧ್ಯ ವಹಿಸಿದ್ದರು.

ಭಜಂತ್ರಿ ಸಮುದಾಯದ ಸಾಧರಕರನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷೆ ವಿದ್ಯಾ ಧಬಾಡಿ, ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ತಹಶೀಲ್ದಾರ್ ಗಿರೀಶ ಸ್ವಾದಿ, ಬೆಂಗಳೂರಿನ ಸಿಪಿಐ ಹನಮಂತ ಭಜಂತ್ರಿ, ಅರುಣ ಬುದ್ನಿ, ರಾಘವೇಂದ್ರ ನೀಲನ್ನವರ, ಯಶವಂತ ವಾಜಂತ್ರಿ, ಚಂದ್ರಕಾಂತ ಹೊಸೂರ, ನಾಗರಾಜ ಭಜಂತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.