ಬೀಳಗಿ: ಗಣೇಶ ಹಬ್ಬ ಬಂದಿತೆಂದರೆ ನಾಡ ತುಂಬೆಲ್ಲ ಸಂಭ್ರಮದ ಹೊನಲು. ಬಣ್ಣದ ವೈವಿಧ್ಯಮಯ ಮೂರ್ತಿ ಕಣ್ತುಂಬಿಸಿಕೊಳ್ಳಲು ಹಿರಿಯರು ಮಕ್ಕಳು ಎಲ್ಲರೂ ಹಾತೊರೆಯುತ್ತಾರೆ. ವಿಘ್ನ ನಿವಾರಕ ಗಣೇಶನ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.
ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳಿಗೆ ಕಲಾವಿದರು ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಶ ಕೊಡುತ್ತಿದ್ದಾರೆ.
ಪಟ್ಟಣದ ಸಿದ್ದೇಶ್ವರನಗರ, ಸೂಳಿಬಾವಿ ಓಣಿ, ನೇಕಾರ ಓಣಿ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ಮಣ್ಣಿನ ಗಣೇಶ ಮೂರ್ತಿಗಳನ್ನು ಮನೆಯಲ್ಲಿ ತಯಾರಿಸಲಾಗುತ್ತಿದೆ. ಹೊರ ಊರುಗಳಿಂದ ಮೂರ್ತಿ ತರಿಸಿ ಇಲ್ಲಿ ಮಾರಾಟ ಮಾಡುವ ಉದ್ಯಮ ಪ್ರತಿ ವರ್ಷವೂ ಬೆಳೆಯುತ್ತಿದೆ.
ಮಹಾರಾಷ್ಟ್ರ ರಾಜ್ಯದ ವಿವಿಧೆಡೆಯಿಂದ ಹಾಗೂ ರಾಜ್ಯದ ಬೆಳಗಾವಿ, ಹುಬ್ಬಳ್ಳಿಯಿಂದಲೂ ಪಿಒಪಿ ಮೂರ್ತಿಗಳು ಮಾರುಕಟ್ಟೆ ಪ್ರವೇಶ ಮಾಡಿವೆ. ಪಿಒಪಿ ಮೂರ್ತಿ ಮಾರಾಟ ಬಂದ್ ಮಾಡಬೇಕು ಎಂದು ಕೆಲ ಮಣ್ಣಿನ ಮೂರ್ತಿ ತಯಾರಕರು ಸೇರಿ ಮೂರು ವರ್ಷಗಳಿಂದ ಪಟ್ಟಣ ಪಂಚಾಯತಿಗೆ ಮನವಿ ಸಲ್ಲಿಸಿದೆವು. ಏನೂ ಪ್ರಯೋಜನವಾಗಲಿಲ್ಲ ಎಂದು ಮೂರ್ತಿ ಕಲಾವಿದರು ದೂರಿದರು.
ಆರು ಇಂಚಿನಿಂದ ನಾಲ್ಕು ಅಡಿಯವರೆಗೆ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಎತ್ತರ ಹಾಗೂ ವಿನ್ಯಾಸ ಆಧರಿಸಿ ದರ ನಿಗದಿ ಮಾಡಲಾಗುತ್ತದೆ. ₹250 ರಿಂದ ₹3 ಸಾವಿರವರೆಗೂ ದರವಿದೆ.
ಕೆರಕಲಮಟ್ಟಿ ಬಳಿ ಜೇಡಿ ಮಣ್ಣನ್ನು ತಂದು ಗಣೇಶ ಮೂರ್ತಿ ಸಿದ್ಧಪಡಿಸಲಾಗುತ್ತದೆ. ಬಸವ ಜಯಂತಿಯಿಂದಲೇ ಮೂರ್ತಿ ಕೆಲಸ ಆರಂಭಿಸಿದ್ದೇವೆ. ಕಚ್ಚಾ ವಸ್ತು ಮತ್ತು ಬಣ್ಣಗಳ ಬೆಲೆ ದುಬಾರಿಯಾಗಿರುವುದೇ ಮೂರ್ತಿಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಇಲ್ಲಿ ವ್ಯಾಪಾರ, ಲಾಭಕ್ಕಿಂತ ಭಕ್ತರು ಪ್ರೀತಿಯಿಂದ ನೀಡುವ ಕಾಣಿಕೆಯಲ್ಲಿ ಖುಷಿ ಸಿಗುತ್ತದೆ’ ಎನ್ನುತ್ತಾರೆ ಮೂರ್ತಿ ತಯಾರಕ ಸುಭಾಷ ಕಲ್ಮಠ.
ತಲತಲಾಂತರದಿಂದ ಮೂರ್ತಿ ತಯಾರಿಕೆ
ಬಾಗಲಕೋಟೆ: ನವನಗರದಲ್ಲಿ ಗಣೇಶ ಮೂರ್ತಿ ತಯಾರಿಸುವ ಪ್ರಕಾಶ ಪೇಟಕರ್ ಅವರ ಕುಟುಂಬ ವರ್ಷದ ಆರು ತಿಂಗಳು ಮೂರ್ತಿಗಳ ತಯಾರಿಕೆಯ ಕೆಲಸ ಮಾಡುತ್ತದೆ. ವರ್ಷಪೂರ್ತಿ ಒಂದಲ್ಲ ಒಂದು ಮಣ್ಣಿನ ಮೂರ್ತಿ ತಯಾರಿಸುತ್ತಲೇ ಇರುತ್ತದೆ. 450ಕ್ಕೂ ಹೆಚ್ಚು ಮೂರ್ತಿಗಳನ್ನು ಕುಟುಂಬದ ಸದಸ್ಯರೆಲ್ಲರೂ ಸಿದ್ಧಪಡಿಸುತ್ತಾರೆ. ಕೊನೆ ಗಳಿಗೆಯವರೂ ಮೂರ್ತಿ ಸಿದ್ಧಪಡಿಸುವ ಕೆಲಸ ನಡದೇ ಇರುತ್ತದೆ. ಇಂತಹ ಹತ್ತಾರು ಕುಟುಂಬಗಳು ನಗರದಲ್ಲಿ ಮೂರ್ತಿ ತಯಾರಿಕೆ ಕೆಲಸದಲ್ಲಿ ತೊಡಗಿಸಿಕೊಂಡಿವೆ. ಪಿಒಪಿ ಮೂರ್ತಿಗಳು ಬಂದ ನಂತರ ವ್ಯಾಪಾರ ಕುಸಿದಿತ್ತು. ಈಗ ನಿಷೇಧ ಮಾಡಲಾಗಿದೆ ಎಂದು ಹೇಳಲಾಗುತ್ತದೆಯಾದರೂ ಅಲ್ಲಲ್ಲಿ ಅವುಗಳ ಮಾರಾಟ ಪ್ರತಿಷ್ಠಾಪನೆಗೆ ನಡೆದೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.