ಹುನಗುಂದ: ಅಸಂಘಟಿತ ಕಮ್ಮಾರ ಸಮಾಜ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ಹಿಂದಿನಿಂದಲೂ ವಂಚಿತಗೊಂಡಿದೆ ಎಂದು ಜ್ಯೋತಿಭಾ ಕಮ್ಮಾರ ಹೇಳಿದರು.
ಪಟ್ಟಣದ ಪುರಸಭೆಯ ಕಲ್ಯಾಣ ಮಂಟಪದಲ್ಲಿ ಈಚೆಗೆ ನಡೆದ ತಾಲ್ಲೂಕು ಕಮ್ಮಾರ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ಗಣ್ಯರಿಗೆ ಗೌರವ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ಶಾಲಾ ದಾಖಲಾತಿ ಹಾಗೂ ಜಾತಿ ಆದಾಯ ಪ್ರಮಾಣ ಪತ್ರ ಪಡೆಯುವಾಗ ಹಿಂದೂ ಕಮ್ಮಾರ ಎಂದೇ ಪಡೆಯಿರಿ. ಹಿಂದೆ ನಮ್ಮ ಹಿರಿಯರು ಮಾಡಿದ ತಪ್ಪನ್ನು ನಾವು ಮಾಡುವುದು ಬೇಡ. ಮಕ್ಕಳ ಶಿಕ್ಷಣ, ಸರ್ಕಾರಿ, ಅರೆ ಸರ್ಕಾರಿ ನೌಕರಿ ಹಾಗೂ ರಾಜಕೀಯ ಮೀಸಲಾತಿಗಾಗಿ ನಮ್ಮ ಹಕ್ಕನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ಬೀಳಗಿ ಜ್ಞಾನ ಸಿದ್ದಾಶ್ರಮದ ಜ್ಞಾನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಶರಣರು ವಚನ ಸಾಹಿತ್ಯದಲ್ಲಿ ಹೇಳಿದಂತೆ ಕಾಸಿ ಕಮ್ಮಾರನಾದ ಎಂಬ ಕಾಯಕಕ್ಕೆ ನಮ್ಮ ಜನ ಬದ್ಧರಾಗಿದ್ದಾರೆ. ಗ್ರಾಮೀಣದಲ್ಲಿ ಆಯಾದ ಕೆಲಸ ಮಾಡಿ ಜೀವನ ಸಾಗಿಸುತ್ತಾ ಬಂದು ಇತ್ತೀಚೆಗೆ ನಮ್ಮ ಕುಲ ಕಸಬು ನಿಂತು ಹೋಗಿದ್ದು, ಯಾಂತ್ರಿಕ ಯುಗದಿಂದ ಬದುಕು ತಲ್ಲಣಸಿದೆ. ಸಮಾಜದ ಜನ ಒಟ್ಟಿಗೆ ಸೇರಿ ಈ ಸಮಾಜದ ಏಳ್ಗೆಗಾಗಿ ಸದಾ ಹೋರಾಟ ಮಾಡಿ ನಮ್ಮ ಹಕ್ಕಿನ ಸೌಲಭ್ಯ ಪಡೆಯೋಣ ಎಂದರು.
ಗಜೇಂದ್ರಗಡ ತಾಲ್ಲೂಕಿನ ಮಾಟರಂಗಿ ಗ್ರಾಮದ ಹನಮಂತಪ್ಪ ಕಮ್ಮಾರ ಅವರು ತಮ್ಮ ಸ್ವಂತ ಜಮೀನನಲ್ಲಿ ಸಮಾಜದ ಶರಣ ಕಮ್ಮಾರ ಕಲ್ಲಯ್ಯನವರ ಪೀಠಕ್ಕಾಗಿ 5 ಗುಂಟೆ ನಿವೇಶನ ನೀಡುವ ಸಂಕ್ಪಲ ಮಾಡಿದ್ದಕ್ಕಾಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪರಶುರಾಮ ಕಮ್ಮಾರ, ಹೇಮಣ್ಣ ಕಮ್ಮಾರ, ಕುಬೇರಪ್ಪ ಕಮ್ಮಾರ, ಜಿ.ಕೆ.ಕಮ್ಮಾರ, ಮಹಾದೇವಪ್ಪ ಕಮ್ಮಾರ, ಶ್ರೀಶೈಲ ಕಮ್ಮಾರ, ಬಸವರಾಜ ಕಮ್ಮಾರ ಸೇರಿದಂತೆ ಕೊಪ್ಪಳ, ಗದಗ, ವಿಜಯಪುರ ಜಿಲ್ಲೆಯ ಜನರು ಭಾಗವಹಿಸಿದ್ದರು. ಮಹಾಂತೇಶ ಕಮ್ಮಾರ ಸ್ವಾಗತಿಸಿದರು. ಯಮನಪ್ಪ ಕಮ್ಮಾರ ನಿರೂಪಿಸಿದರು.ಕಾಳಪ್ಪ ಕಮ್ಮಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.