ADVERTISEMENT

ಮುಧೋಳ: ಮೊಲ್ಯಾಸಿಸ್ ಸಂಸ್ಕರಣಾ ಘಟಕ ಸ್ಫೋಟ, ಮೂರು ಶವ ಪತ್ತೆ, ಐವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 8:52 IST
Last Updated 16 ಡಿಸೆಂಬರ್ 2018, 8:52 IST
   

ಬಾಗಲಕೋಟೆ: ಮುಧೋಳ ತಾಲ್ಲೂಕು ಕುಳಲಿ ಗ್ರಾಮದ ನಿರಾಣಿ ಶುಗರ್ಸ್‌ನ ಮೊಲ್ಯಾಸಿಸ್ ಸಂಸ್ಕರಣಾ ಘಟಕ ಸ್ಫೋಟಗೊಂಡಿದೆ. ಪ್ರಾಥಮಿಕ ಮಾಹಿತಿ ಅನ್ವಯ ಆರು ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಾವಿಸಿದ್ದಾರೆ. ಸ್ಫೋಟದ ತೀವ್ರತೆಗೆ ಮೊಲ್ಯಾಸಿಸ್ ಘಟಕದ ಕಟ್ಟಡವೇ ಕುಸಿದಿದೆ. ಈವರೆಗೆ ಮೂರು ಶವಗಳು ಪತ್ತೆಯಾಗಿವೆ‌.

ಕಟ್ಟಡ ಕುಸಿದಿರುವುದರಿಂದ ಒಳಗೆ ಸಿಲುಕಿರುವವರ ನಿಖರ ಮಾಹಿತಿ ಇಲ್ಲ. ಬೆಳಗಾವಿಯಿಂದ ಮೂರು ರಕ್ಷಣಾ ತಂಡಗಳನ್ನು ಕರೆಸಲಾಗುತ್ತಿದೆ. ಸಾವಿಗೀಡಾದವರ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಪರಿಹಾರ ಕಾರ್ಯಕ್ಕೆ ಮುಖ್ಯಮಂತ್ರಿ ಸೂಚನೆ

ಬೆಂಗಳೂರು: ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟಿರುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅವರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಾಗಲಕೋಟೆ, ವಿಜಾಪುರ, ಧಾರವಾಡ ಜಿಲ್ಲೆಗಳಿಂದ ಆಂಬುಲೆನ್ಸ್‌ಗಳನ್ನು ಕಳುಹಿಸಿ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗಳಿಗೆ ರವಾನಿಸುವಂತೆ ಹಾಗೂ ಘಟನೆಯ ಪೂರ್ಣ ತನಿಖೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಅಗತ್ಯ ನೆರವು ಹಾಗೂ ಪರಿಹಾರ ಒದಗಿಸಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.