ಮಹಾಲಿಂಗಪುರ: ಪಟ್ಟಣದ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅಳವಡಿಸಿರುವ ಹೊಸ ತೂಕದ ಯಂತ್ರ (ವೇ ಬ್ರಿಡ್ಜ್)ದ ಗುತ್ತಿಗೆದಾರನಿಗೆ ಹಳೆಯ ತೂಕದ ಯಂತ್ರದ ತನಿಖೆ ಆಗುವವರೆಗೆ ಬಿಲ್ ಪಾವತಿಸದಂತೆ ಸದಸ್ಯ ಬಸವರಾಜ ಚಮಕೇರಿ ಆಗ್ರಹಿಸಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ತೂಕದ ಯಂತ್ರ ಗುಜರಿಗೆ ಸೇರಿರುವ ಕುರಿತು ‘ಪ್ರಜಾವಾಣಿ’ ಮಾರ್ಚ್ 19ರ ಸಂಚಿಕೆಯಲ್ಲಿ ಪ್ರಕಟಿತ ವರದಿ ಕುರಿತು ಪ್ರಸ್ತಾಪಿಸಿದ ಅವರು, ‘ಹೊಸ ತೂಕದ ಯಂತ್ರ ಖರೀದಿ ಟೆಂಡರ್ ತಟಸ್ಥಗೊಳಿಸುವಂತೆ ತಿಳಿಸಿದರೂ ತಟಸ್ಥಗೊಳಿಸಿಲ್ಲ. ಹಳೆಯ ತೂಕದ ಯಂತ್ರ ಗುಜರಿಗೆ ಸೇರಿದೆ. ಇದರ ತ್ಯಾಜ್ಯದ ತೂಕದ ಪ್ರತಿ, ಬಳಕೆ ಕುರಿತು ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
‘ಹಳೇ ತೂಕದ ಯಂತ್ರ ಕುರಿತು ವಾರದೊಳಗೆ ತನಿಖೆ ನಡೆಸಿ ವರದಿ ನೀಡಲಾಗುವುದು. ಅಲ್ಲಿವರೆಗೆ ಹೊಸ ತೂಕದ ಯಂತ್ರ ಅಳವಡಿಸಿರುವ ಗುತ್ತಿಗೆದಾರನಿಗೆ ಬಿಲ್ ಪಾವತಿಸುವುದಿಲ್ಲ’ ಎಂದು ಮುಖ್ಯಾಧಿಕಾರಿ ಎನ್.ಎ. ಲಮಾಣಿ ಹೇಳಿದರು.
ಸದಸ್ಯ ಶೇಖರ ಅಂಗಡಿ ಮಾತನಾಡಿ, ‘ಪಟ್ಟಣದ ಗಾಂಧಿ ವೃತ್ತದಿಂದ ಬುದ್ನಿ ಪಿಡಿವರೆಗೆ ಇರುವ ಡಿವೈಡರ್‌ಗಳಿಗೆ ಹಾಕಿದ್ದ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾನಿಗೀಡಾಗಿದ್ದು, ಇವುಗಳನ್ನು ಪುರಸಭೆ ಹಿಂಬದಿ ಹಾಗೂ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ಇರಿಸಲಾಗಿತ್ತು. ಆದರೆ, ಈಗ ಅವುಗಳು ಕಾಣೆಯಾಗಿವೆ’ ಎಂದು ಆರೋಪಿಸಿದರು.
‘ಈ ಕುರಿತು ತನಿಖೆ ನಡೆಸಿ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಮುಖ್ಯಾಧಿಕಾರಿ ಎನ್.ಎ. ಲಮಾಣಿ ಹೇಳಿದರು.
ನನೆಗುದಿಗೆ ಬಿದ್ದಿರುವ ನಗರೋತ್ಥಾನದ ಟ್ರೇಜರಿ, ಯಂತ್ರ ಮತ್ತು ಇನ್ನಿತರ ವಸ್ತುಗಳನ್ನು ಬೇಗ ವಿಲೇವಾರಿ ಮಾಡುವ, ವಾರ್ಡ್ ರಸ್ತೆಗಳಿಗೆ ಗರಸು ಹಾಕುವ, ಹಿಂದೂ ರುದ್ರಭೂಮಿ ಸ್ವಚ್ಛತೆ, ಮಲ್ಲಿಕಾರ್ಜುನ ಕಂಬಿ ಹಾಯ್ದು ಹೋಗುವ ರಸ್ತೆಗೆ ಪೇವರ್ ಬ್ಲಾಕ್ ಹಾಕುವಂತೆ ಮತ್ತು ತಡೆಗೋಡೆ ನಿರ್ಮಿಸುವಂತೆ ಸದಸ್ಯರು ಆಗ್ರಹಿಸಿದರು.
ಮಹಾಲಿಂಗೇಶ್ವರ ಜಾತ್ರೆ ಮುಂದಿನ ತಿಂಗಳು ನಡೆಯಲಿದ್ದು, ಈ ನಿಮಿತ್ತ ತುರ್ತಾಗಿ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ, ಜಾತ್ರೆಯಲ್ಲಿ ಅಳವಡಿಸುವ ಜೇಕ್, ಗುಡಾರ ಸೇರಿದಂತೆ ಇತರ ಅಂಗಡಿಗಳಿಗೆ ಎನ್‍ಒಸಿ ನೀಡಲು ಬಹಿರಂಗ ಹರಾಜು ಕರೆಯುವ ಹಾಗೂ ಜಾತ್ರೆಯಲ್ಲಿ ತಾತ್ಕಾಲಿಕವಾಗಿ ಹಾಕುವ ಗುಡಾರಗಳಿಗೆ ಜಾತ್ರಾ ಶುಲ್ಕ ವಸೂಲಿ ಮಾಡುವ ಕುರಿತು ಸಭೆ ಅನುಮೋದನೆ ನೀಡಿತು.
ಸ್ವಚ್ಛ ಭಾರತ ಮಿಷನ್ ಯೋಜನೆಯ ಅಡಿಯಲ್ಲಿ ಸಿದ್ಧಪಡಿಸಿ ಸಲ್ಲಿಸಲಾಗಿರುವ ಘನತ್ಯಾಜ್ಯ ವಸ್ತು ನಿರ್ವಹಣೆಯ ವಿಸ್ತೃತ ಯೋಜನಾ ವರದಿ ಪ್ರಕಾರ ಹೊರಗುತ್ತಿಗೆ ಮೂಲಕ ಮಾನವ ಸಂಪನ್ಮೂಲಗಳನ್ನು ಪಡೆಯಲು ಟೆಂಡರ್ ಕರೆಯುವ ಕುರಿತು ಹಾಗೂ 2025-26ನೇ ಸಾಲಿನ 15ನೇ ಹಣಕಾಸು ಸಾಮಾನ್ಯ ಮೂಲ ಅನುದಾನ, ಎಸ್‍ಎಫ್‍ಸಿ ಮುಕ್ತನಿಧಿ ಅನುದಾನ, ಸ್ಥಳೀಯ ನಿಧಿಯ ಅಡಿಯಲ್ಲಿ ಕರೆದ ಟೆಂಡರ್ ಕಾಮಗಾರಿಗಳಿಗೆ ದರ ಮಂಜೂರಾತಿ ನೀಡುವ ಕುರಿತು ಚರ್ಚಿಸಿ ಅನುಮೋದನೆ ನೀಡಲಾಯಿತು. 2025-26ನೇ ಸಾಲಿನ ಎಸ್‍ಎಫ್‍ಸಿ ಮುಕ್ತನಿಧಿ ಹಾಗೂ ಸ್ಥಳೀಯ ನಿಧಿಯ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೇ 24.10, 7.25 ಅಡಿ ಶಿಕ್ಷಣಕ್ಕಾಗಿ ವಿಶೇಷ ನೆರವು ನೀಡು ಕುರಿತು ಚರ್ಚಿಸಲಾಯಿತು.
ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಸ್ಥಾಯಿ ಸಮಿತಿ ಚೇರಮನ್ ಅಬ್ದುಲ್‍ರಜಾಕ ಬಾಗವಾನ, ಸದಸ್ಯರು, ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.