ಬಾಗಲಕೋಟೆ: ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ ಅತಿಸಾರ ಭೇದಿ ತಡೆಗೆ ಜೂನ್ 16ರಿಂದ ಜುಲೈ 31ರವರೆಗೆ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅತಿಸಾರಭೇದಿ ಮತ್ತು ದಡಾರ ಮತ್ತು ರುಬೆಲ್ಲಾ ನಿರ್ಮೂಲನೆ ಕುರಿತು ಜರುಗಿದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹುಟ್ಟಿದ ಮಗುವಿನಿಂದ ಹಿಡಿದು 5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುತ್ತಿದ್ದು, ಯಾವುದೇ ಮಕ್ಕಳು ಇದರಿಂದ ಮರಣ ಹೊಂದದಂತೆ ಪರಿಣಾಮಕಾರಿ ಚಿಕಿತ್ಸೆಗೆ ಓಆರ್‌ಎಸ್ ಮತ್ತು ಝಿಂಕ್ ಮಾತ್ರೆ ವಿತರಣೆ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಲಭ್ಯವಿರುವ 83,185 ಓಆರ್‌ಎಸ್ ಮತ್ತು 6,52,380 ಚಿಂಕ್ ಮಾತ್ರೆಗಳನ್ನು ಆಯಾ ತಾಲ್ಲೂಕಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ವಿತರಣೆಗೆ ಕ್ರಮವಹಿಸಬೇಕು. ಕುಡಿಯುವ ನೀರು ಶುದ್ಧವಾಗಿರಬೇಕು. ಆಹಾರ ಸೇವನೆ ಮುಂಚೆ ಕೈ ತೊಳೆದುಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಓಆರ್‌ಎಸ್ ಮತ್ತು ಝಿಂಕ್ ಮಾತ್ರೆಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯಲಿವೆ. ಝಿಂಕ್ ಮಾತ್ರೆಗಳನ್ನು 14 ದಿನಗಳವರೆಗೆ ಪ್ರತಿದಿನ 1 ರಂತೆ ನೀಡುವುದರಿಂದ ಶಕ್ತಿ ಹೆಚ್ಚುತ್ತದೆ. ಇದು ಎರಡು ತಿಂಗಳಗಳವರೆಗೆ ಅತಿಸಾರ ಭೇದಿಯಿಂದ ಕಾಪಾಡುತ್ತದೆ ಎಂದು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಲೆನ್ಸ್ ಅಧಿಕಾರಿ ಮುಕುಂದ ಗಲಗಲಿ ಮಾತನಾಡಿ, ಎಂ.ಆರ್-1 ಮತ್ತು ಎಂ.ಆರ್-2 ಲಸಿಕಾ ವಂಚಿತ ಮಕ್ಕಳನ್ನು ಹುಡುಕಿ, ಅವರಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆ ಹಾಕಲಾಗುತ್ತದೆ. ಜ್ವರ ಮತ್ತು ಗಂಧೆ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯಲ್ಲಿ ನಾಲ್ಕು ಪ್ರಕರಣಗಳು ದೃಢಪಟ್ಟಿವೆ. ಆ ಪ್ರದೇಶದಲ್ಲಿ ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ ಡಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ದಯಾನಂದ ಕರೆನ್ನವರ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಕುಸುಮಾ ಮಾಗಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೇಖರಯ್ಯ ಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.