
ಐಹೊಳೆ (ಬಾಗಲಕೋಟೆ): ‘ಚಾಲುಕ್ಯ ಉತ್ಸವ ಮನರಂಜನೆಗೆ ಮಾಡುತ್ತಿಲ್ಲ. ಇಮ್ಮಡಿ ಪುಲಿಕೇಶಿ ನಾಡಿನ ಕೀರ್ತಿಯನ್ನು ವಿದೇಶಕ್ಕೂ ಪಸರಿಸಿದ್ದರು. ಚಾಲುಕ್ಯರ ಆಡಳಿತ, ಸಂಸ್ಕೃತಿ ತಿಳಿಸುವ ಕೆಲಸ ಆಗದಿರುವುದು ದುರ್ದೈವ. ಆ ಕೆಲಸವನ್ನು ನಾವೆಲ್ಲರೂ ಮಾಡೋಣ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಐಹೊಳೆಯಲ್ಲಿ ಬುಧವಾರ ನಡೆದ ಚಾಲುಕ್ಯ ಉತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಚಾಲುಕ್ಯ ಉತ್ಸವ ನಡೆಯಬೇಕಾದರೆ ಎಚ್.ವೈ. ಮೇಟಿ ಅವರೂ ಕಾರಣ. ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದಾರವಾಗಿ ಅನುದಾನ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಚಾಲುಕ್ಯ ಉತ್ಸವ ಮಾಡಬೇಕು ಎನ್ನುವ ಎಚ್.ವೈ. ಮೇಟಿ ಅವರ ಕನಸು ನನಸಾಗಿದೆ. ಐಹೊಳೆ ಸ್ಥಳಾಂತರ ಮಾಡಿ, ಶಿಲ್ಪಕಲೆಯನ್ನು ರಕ್ಷಿಸಬೇಕು ಎನ್ನುವುದು ಅವಕ ಕನಸಾಗಿತ್ತು. ಅವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ’ ಎಂದರು.
‘ರಾಜ್ಯದ ಎಲ್ಲೆಡೆ ಉತ್ಸವಕ್ಕೆ ಆದ್ಯತೆ ನೀಡಲಾಗಿದೆ. ಕಲೆ, ಸಂಸ್ಕೃತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಐಹೊಳೆಗೆ ‘ಆರ್ಯಪುರ’ ಎಂದು ಕರೆಯಲಾಗುತ್ತಿತ್ತು. ಇಲ್ಲಿರುವ ಶಿಲ್ಪಕಲೆಗೆ ಬೆಲೆ ಕಟ್ಟಲಾಗದು. ಇದನ್ನು ರಕ್ಷಿಸುವ ಕೆಲಸ ಆಗಬೇಕು. ಮುಂದಿನ ಪೀಳಿಗೆಗೆ ಇತಿಹಾಸದ ಮಹತ್ವ ತಿಳಿಸಬೇಕು’ ಎಂದು ಹೇಳಿದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ‘ಇತಿಹಾಸ, ಕಲಾಕೃತಿ ಮಹತ್ವ ಸಾರಲು ಉತ್ಸವ ಆಯೋಜಿಸಲಾಗಿದೆ. ದೇವಾಲಯದ ವಾಸ್ತುಶಿಲ್ಪದ ಪ್ರಯೋಗಶಾಲೆಯಾಗಿದೆ. ಕಲ್ಲಿನೊಳಗೆ ಆತ್ಮವಿದೆ. ಅದನ್ನು ಕಾಣುವ ಕಣ್ಣು ಬೇಕು. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದರು.
ಸಂಸ್ಕೃತಿ ಉಳಿದರೆ ಜನ ಉಳಿಯುತ್ತಾರೆ. ಜನ ಉಳಿದರೆ ದೇಶ ಉಳಿಯುತ್ತದೆ ಎಂದು ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದರು. ಅದನ್ನು ನಾವೆಲ್ಲರೂ ಪಾಲಿಸಬೇಕು. ಐಹೊಳೆ ಹೆಮ್ಮೆಯ ಇತಿಹಾಸವಾಗಿದೆ. ಚಾಲುಕ್ಯರ ವೈಭವವನ್ನು ದೇಶಕ್ಕೆ ತಲುಪಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹನಮಂತಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಯುಕೆಪಿಯ ಪುನರ್‌ವಸತಿ, ಪುನರ್ ನಿರ್ಮಾಣ ಇಲಾಖೆ ಉಪ ಮಹಾವ್ಯವಸ್ಥಾಪಕ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಬಸವಂತರಾಯ ಅಂಟರತಾನಿ, ಈರಣ್ಣ ಕರಿಗೌಡರ, ಉಮೇಶ ಮೇಟಿ ಇದ್ದರು.
ಶಿಲ್ಪಕಲೆಯ ವೈಭವ ಹೊಂದಿರುವ ಐಹೊಳೆ ಅಭಿವೃದ್ಧಿಗೆ ನಾವೆಲ್ಲರೂ ಸಿದ್ಧರಿದ್ದೇವೆ. ಸರ್ಕಾರ ಇದಕ್ಕೆ ಬೇಕಾದ ಅನುದಾನ ನೀಡಲಿದೆವಿಜಯಾನಂದ ಕಾಶಪ್ಪನವರ ಶಾಸಕ ಹುನಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.