ADVERTISEMENT

ರೋಪ್‌ವೇ, ಬೋಟಿಂಗ್‌ಗೆ ಶೀಘ್ರ ಪ್ರಸ್ತಾವ ಸಲ್ಲಿಸಿ

ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲರಿಂದ ಜಿಲ್ಲಾಧಿಕಾರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 7:17 IST
Last Updated 4 ಅಕ್ಟೋಬರ್ 2025, 7:17 IST
ಬೀಳಗಿ ತಾಲ್ಲೂಕಿನ ಚಿಕ್ಕಸಂಗಮದ ಸಂಗಮನಾಥ ದೇವಾಲಯಕ್ಕೆ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಭೇಟಿ ನೀಡಿ ಮಾತನಾಡಿದರು
ಬೀಳಗಿ ತಾಲ್ಲೂಕಿನ ಚಿಕ್ಕಸಂಗಮದ ಸಂಗಮನಾಥ ದೇವಾಲಯಕ್ಕೆ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಭೇಟಿ ನೀಡಿ ಮಾತನಾಡಿದರು   

ಬೀಳಗಿ: ‘ತಾಲ್ಲೂಕಿನ ಚಿಕ್ಕಸಂಗಮ ಪ್ರವಾಸಿ ತಾಣವಾಗುವ ಎಲ್ಲಾ ಅರ್ಹತೆ ಹೊಂದಿದ್ದು, ಅಲ್ಲಿ ರೋಪ್‌ವೇ, ಬೋಟಿಂಗ್, ನೇಚರ್ ಕ್ಯಾಂಪ್‌ (ಪ್ರಕೃತಿ ನಿರೂಪನಾ ಶಿಬಿರ) ಗಾಗಿ ಶೀಘ್ರ ಪ್ರಸ್ತಾವನೆ ಸಲ್ಲಿಸಿ’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ತಾಲ್ಲೂಕಿನ ಚಿಕ್ಕಸಂಗಮದ ಸಂಗಮನಾಥ ದೇವಾಲಯಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಮಾತನಾಡಿದರು.

‘ಸುಕ್ಷೇತ್ರಕ್ಕೆ ಆಗಮಿಸುವ ಭಕ್ತರು, ಪ್ರವಾಸಿಗರಿಗಾಗಿ 20 ಕೊಠಡಿಗಳ ಯಾತ್ರಿ ನಿವಾಸವನ್ನು ನಿರ್ಮಿಸಲಾಗುವುದು. ಶಾಸಕ ಜೆ.ಟಿ. ಪಾಟೀಲ ತಮ್ಮ ಅನುದಾನವನ್ನು ಒಂದಿಷ್ಟು ಚಿಕ್ಕ ಸಂಗಮದ ಅಭಿವೃದ್ಧಿಗೆ ನೀಡಬೇಕು ಎಂದು ಎಚ್.ಕೆ.ಪಾಟೀಲರು ಕೇಳಿದಾಗ, ಶಾಸಕ ಜೆ.ಟಿ. ಪಾಟೀಲ ಅವರು, ತಮ್ಮ ಶಾಸಕರ ಅನುದಾನದಲ್ಲಿ ಅಥವಾ ಇನ್ಯಾವುದೊ ಅನುದಾನದಲ್ಲಿ ₹50 ಲಕ್ಷ ಅನುದಾನ ಚಿಕ್ಕಸಂಗಮ ಅಭಿವೃದ್ದಿಗೆ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಆ‌ರ್.ಬಿ. ತಿಮ್ಮಾಪುರ ಮಾತನಾಡಿ, ‘₹638 ಕೋಟಿ ಪ್ಯಾಕೇಜ್ ನೀಡಿ ಆಲಮಟ್ಟಿ ಗೇಟ್ ಹಾಕಿದಾಗಲೂ ನಾನೇ ಉಸ್ತುವಾರಿ ಸಚಿವನಾಗಿದ್ದೇ, ಸಂತ್ರಸ್ತರ ನೀರಾವರಿ ಭೂಮಿಗೆ ₹40 ಲಕ್ಷ, ಒಣ ಬೇಸಾಯಕ್ಕೆ ₹30 ಲಕ್ಷ ನಿಗದಿ ಮಾಡಿದಾಗಲೂ ಉಸ್ತುವಾರಿ ಸಚಿವನಾಗಿರುವೆ’ ಎಂದರು.

ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ‘ಚಿನ್ನಪ್ಪರೆಡ್ಡಿ ವರದಿ ಪ್ರಕಾರ ವಾಸ್ತು ಪ್ರಕಾರ ಚಿಕ್ಕಸಂಗಮ ಅತ್ಯುತ್ತಮವಾದ ಪ್ರವಾಸಿ ತಾಣ ಎಂದ ಅವರು, ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ. ಪಾಟೀಲರು ತೆಗ್ಗಿ, ಸಿದ್ದಾಪುರ, ಸೊನ್ನ, ಮನ್ನಿಕೇರಿ ಏತ ನೀರಾವರಿ ಹಾಗೂ ಕೊಲ್ದಾರ ಸೇತುವೆ ಮಂಜೂರು ಮಾಡಿದ್ದರು. ₹35 ಕೋಟಿ ಅನುದಾನದಲ್ಲಿ ಚಿಕ್ಕಸಂಗಮ ಕ್ಷೇತ್ರ ಅಭಿವೃದ್ಧಿ ಹೊಂದಿದ ಬಳಿಕ ಒಂದು ಪೈಸೆ ಕೂಡಾ ಅನುದಾನ ಬಂದಿಲ್ಲ. ಪ್ರಸ್ತುತ ಮತ್ತೆ ₹2 ಕೋಟಿ ಅನುದಾನ ಬಂದಿದ್ದು ಯೋಜನಾ ವರದಿ ಸರ್ಕಾರಕ್ಕೆ ಸಲ್ಲಿಸಿದ್ದು, ಟೆಂಡರ್ ಕರೆಯಬೇಕು’ ಎಂದು ತಿಳಿಸಿದರು.

‘ಕನಕೇಶ್ವರ ದೇವಸ್ಥಾನದ ಎತ್ತರದ ಗುಡ್ಡದವರೆಗೆ ಬ್ರಿಡ್ಜ್-ಕಂ-ಬ್ಯಾರೇಜ್ ನಿರ್ಮಿಸಲು ₹25 ಕೋಟಿ ಅನುದಾನ ನೀಡಿದ್ದು, ಸೇತುವೆ ನಿರ್ಮಾಣದ ಬಳಿಕ ಬೋಟಿಂಗ್ ವ್ಯವಸ್ಥೆ, ಚಿಕ್ಕಸಂಗಮದಿಂದ ಕನಕೇಶ್ವರ ದೇವಾಲಯದವರೆಗೆ ಎಲೆಕ್ಟ್ರಿಕಲ್ ರೋಪವೇ ಮಾಡಲಾಗುವುದು. 160 ಎಕರೆ ಅರಣ್ಯ ಪ್ರದೇಶವಿದ್ದು, ಅದರಲ್ಲಿ ಮಂಗಲ ಕಾರ್ಯಾಲಯ ಜಂಗಲ್ ರೆಸಾರ್ಟ್ ಮಾಡಿಕೊಡಬೇಕು’ ಎಂದು ಪ್ರವಾಸೋದ್ಯಮ ಸಚಿವರಿಗೆ ಬೇಡಿಕೆ ಸಲ್ಲಿಸಿದರು.

ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾಧಿಕಾರಿ ಸಂಗಪ್ಪ ಎಂ, ಜಿ.ಪಂ ಸಿಇಒ ಶಶಿಧರ ಕುರೇರ, ಎಸ್‌ಪಿ ಸಿದ್ದಾರ್ಥ ಗೋಯಲ್, ಮುಖಂಡರಾದ ಬಸವಪ್ರಭು ಸರನಾಡಗೌಡ, ಮುತ್ತು ದೇಸಾಯಿ, ಎಸಿ ಶ್ವೇತಾ ಬೀಡಿಕರ, ತಹಶೀಲ್ದಾರ್ ವಿನೋದ ಹತ್ತಳ್ಳಿ ಇದ್ದರು.

ಪಿಪಿಪಿ ಮಾದರಿಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ನವೆಂಬರ್ 1ರೊಳಗಾಗಿ ಸರ್ವೆಕಾರ್ಯ ಮುಗಿಸಿದರೆ ಮೂರು ತಿಂಗಳೊಳಗಾಗಿ ಚಾಲನೆ ನೀಡಲಾಗುವುದು‌
ಎಚ್.ಕೆ. ಪಾಟೀಲ ಪ್ರವಾಸೋದ್ಯಮ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.