ADVERTISEMENT

ಬಾಗಲಕೋಟೆ ಲೋಕಸಭಾ ಕ್ಷೇತ್ರ | ಐದನೇ ಬಾರಿಯೂ ಅಭ್ಯರ್ಥಿ ಬದಲಿಸಿದ ಕಾಂಗ್ರೆಸ್

ಬಾಗಲಕೋಟೆ ಕ್ಷೇತ್ರ ವಶಕ್ಕೆ ಪಡೆಯಲು ಕಾಂಗ್ರೆಸ್‌ ಪಕ್ಷದ ಪ್ರಯತ್ನ

ಬಸವರಾಜ ಹವಾಲ್ದಾರ
Published 24 ಮಾರ್ಚ್ 2024, 6:14 IST
Last Updated 24 ಮಾರ್ಚ್ 2024, 6:14 IST
<div class="paragraphs"><p>ಕಾಂಗ್ರೆಸ್‌ </p></div>

ಕಾಂಗ್ರೆಸ್‌

   

ಬಾಗಲಕೋಟೆ: ಸತತ ನಾಲ್ಕು ಚುನಾವಣೆಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಸೋಲನುಭವಿಸಿರುವ ಕಾಂಗ್ರೆಸ್‌ ಪಕ್ಷ ಶತಾಯು–ಗತಾಯು ಮತ್ತೆ ತನ್ನ ವಶಕ್ಕೆ ಪಡೆಯಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿಯೇ ಪ್ರತಿ ಬಾರಿಯೂ ಬೇರೆಯವರಿಗೆ ಟಿಕೆಟ್ ನೀಡಿದೆ. ಈ ಬಾರಿಯೂ ಮತ್ತೆ ಅಭ್ಯರ್ಥಿ ಬದಲಿಸಿದೆ.

ಜನತಾ ಪರಿವಾರದಿಂದ ಬಿಜೆಪಿ ಸೇರ್ಪಡೆಯಾಗಿದ್ದ ಪಿ.ಸಿ.ಗದ್ದಿಗೌಡರ 2004ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಕಣಕ್ಕಿಳಿದರು. ಅವರ ವಿರುದ್ಧ ಕಾಂಗ್ರೆಸ್‌ನಿಂದ ಸಂಸದರಾಗಿದ್ದ ಆರ್‌.ಎಸ್‌. ಪಾಟೀಲ ಸ್ಪರ್ಧಿಸಿದ್ದರು. ಅವರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಕಮಲ ಅರಳಿಸಿದ್ದರು.      

ADVERTISEMENT

2009ರ ಚುನಾವಣೆಯಲ್ಲಿ ಗದ್ದಿಗೌಡರ ಅವರನ್ನು ಮಣಿಸಲು ಕಾಂಗ್ರೆಸ್‌ ಜೆ.ಟಿ.ಪಾಟೀಲ (ಹಾಲಿ ಬೀಳಗಿ ಶಾಸಕ) ಅವರನ್ನು ಕಣಕ್ಕಿಳಿಸಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.

2014ರಲ್ಲಿ ಚುನಾವಣೆ ನಡೆದಾಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿತ್ತು. ಜಿಲ್ಲೆಯಲ್ಲಿ ಐವರು ಕಾಂಗ್ರೆಸ್‌ ಶಾಸಕರಿದ್ದರು. ಗೆದ್ದೇ ಗೆಲ್ಲುತ್ತೇವೆ ಎಂಬ ಹುಮ್ಮಸ್ಸಿನಲ್ಲಿ 1998ರ ಚುನಾವಣೆಯಲ್ಲಿ ಲೋಕಜನ ಶಕ್ತಿಯಿಂದ ಸಂಸದರಾಗಿ ಆಯ್ಕೆಯಾಗಿದ್ದ ಅಜಯಕುಮಾರ ಸರನಾಯಕ ಅವರನ್ನು ಕಾಂಗ್ರೆಸ್‌ಗೆ ಕರೆ ತಂದು ಕಣಿಕ್ಕಿಳಿಸಿದರೂ ಗೆಲುವು ದಕ್ಕಲಿಲ್ಲ.

2019ರ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರನ್ನು ಕಣಕ್ಕಿಳಿಸಿದರೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಲ್ಲಿ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದರು. 

ಹೊಸ ಮುಖ ಸಂಯುಕ್ತಾ ಪಾಟೀಲ ಅವರನ್ನು ಕಣಕ್ಕಿಳಿಸುವ ಮೂಲಕ ತನ್ನ ಅಭ್ಯರ್ಥಿಯನ್ನು ಮತ್ತೆ ಬದಲಾವಣೆ ಮಾಡಿದೆ. ಐದನೇ ಬಾರಿಗೆ ಕಣಕ್ಕಿಳಿದಿರುವ ಪಿ.ಸಿ.ಗದ್ದಿಗೌಡರ ಅವರನ್ನು ಸೋಲಿಸಲು ಕಾಂಗ್ರೆಸ್‌ ಹೊಸಬರ ಮೊರೆ ಹೋಗುವುದನ್ನು ಮುಂದುವರೆಸಿದೆ.

ಕಾಂಗ್ರೆಸ್‌ ಪ್ರತಿ ಚುನಾವಣೆಗೂ ಅಭ್ಯರ್ಥಿ ಬದಲಾವಣೆ ಮಾಡುತ್ತಿರುವುದು ಗದ್ದಿಗೌಡರಿಗೆ ಅನುಕೂಲವಾಗುತ್ತಿದೆ ಎನ್ನುತ್ತವೆ ಬಿಜೆಪಿ ಮೂಲಗಳು. ಲೋಕಸಭಾ ಚುನಾವಣೆ ವ್ಯಾಪ್ತಿಯಲ್ಲಿ ಎಂಟು ಕ್ಷೇತ್ರಗಳು ಬರುತ್ತವೆ. ಬಹುತೇಕ ನಾಯಕರು ವಿಧಾನಸಭಾ ಕ್ಷೇತ್ರಕ್ಕೆ ಸೀಮಿತರಾಗಿರುತ್ತಾರೆ. ಲೋಕಸಭಾ ಚುನಾವಣೆಯ ಟಿಕೆಟ್ ನೀಡಿದ ನಂತರ ಕ್ಷೇತ್ರದಾದ್ಯಂತ ಸಂಚರಿಸುವ ಪ್ರಚಾರ ಮಾಡುವ ವೇಳೆಗೆ ಚುನಾವಣೆಯೇ ಮುಗಿದು ಹೋಗಿರುತ್ತದೆ.

ಈ ಬಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಸಂಯುಕ್ತಾ ಪಾಟೀಲ ಕ್ಷೇತ್ರಕ್ಕೇ ಹೊಸಬರು. ನಾಲ್ಕಾರು ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಬಿಟ್ಟರೆ, ಕ್ಷೇತ್ರದ ಪರಿಚಯ ಕಡಿಮೆ. ಸಂಯುಕ್ತಾ ಅವರ ತಂದೆ ಶಿವಾನಂದ ಪಾಟೀಲ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು. ಆ ಅನುಭವದ ಆಧಾರದ ಮೇಲೆಯೇ ಪುತ್ರಿಯನ್ನು ಕಣಕ್ಕಿಳಿಸಿದ್ದಾರೆ. ಇವರಾದರೂ ಕಾಂಗ್ರೆಸ್‌ಗೆ ಗೆಲುವು ತಂದುಕೊಡುವರೇ ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.