ADVERTISEMENT

ಲಾಕರ್ ನಿರ್ವಹಣೆ: ಬ್ಯಾಂಕಿನದ್ದೇ ಜವಾಬ್ದಾರಿ ಎಂದ ಜಿಲ್ಲಾ ಗ್ರಾಹಕರ ವೇದಿಕೆ

ಠೇವಣಿಯೆಲ್ಲಿ ಮುರಿದಿದ್ದ ಹಣ ವಾಪಸ್‌ಗೆ ಗಾಹಕರ ಆಯೋಗ ಆದೇಶ

ವೆಂಕಟೇಶ ಜಿ.ಎಚ್.
Published 15 ಸೆಪ್ಟೆಂಬರ್ 2021, 9:46 IST
Last Updated 15 ಸೆಪ್ಟೆಂಬರ್ 2021, 9:46 IST
ಬಾಗಲಕೋಟೆ ಜಿಲ್ಲಾ ಗ್ರಾಹಕರ ಆಯೋಗದ ಕಚೇರಿಯ ನೋಟ
ಬಾಗಲಕೋಟೆ ಜಿಲ್ಲಾ ಗ್ರಾಹಕರ ಆಯೋಗದ ಕಚೇರಿಯ ನೋಟ   

ಬಾಗಲಕೋಟೆ: ಬ್ಯಾಂಕ್‌ ಲಾಕರ್‌ಗಳ ನಿರ್ವಹಣೆ, ದುರಸ್ತಿ ಆಯಾ ಬ್ಯಾಂಕ್‌ಗಳದ್ದೇ ಹೊರತು ಗ್ರಾಹಕರದ್ದಲ್ಲ ಎಂದು ಅಭಿಪ್ರಾಯಪಟ್ಟಿರುವ ಇಲ್ಲಿನ ಜಿಲ್ಲಾ ಗ್ರಾಹಕರ ವೇದಿಕೆ, ಠೇವಣಿಯಲ್ಲಿ ಮುರಿದುಕೊಂಡಿದ್ದ ಹಣವನ್ನು ಬಡ್ಡಿ ಸಮೇತಗ್ರಾಹಕರಿಗೆ ವಾಪಸ್ ಕೊಡುವಂತೆ ಆದೇಶಿಸಿದೆ.

ಗದ್ದನಕೇರಿಯ ಸಪ್ತಗಿರಿ ಬಡಾವಣೆ ನಿವಾಸಿ ಮಲ್ಲಿಕಾರ್ಜುನ ಚೆನ್ನಪ್ಪ ತೋಟದ ಎಂಬುವರು ಸಿಂಡಿಕೇಟ್ ಬ್ಯಾಂಕ್‌(ಈಗ ಕೆನರಾ ಬ್ಯಾಂಕ್‌ನಲ್ಲಿ ವಿಲೀನ) ಶಾಖೆಯಲ್ಲಿ ತಮ್ಮ ಬೆಲೆಬಾಳುವ ವಸ್ತುಗಳನ್ನಿಡಲು ಲಾಕರ್ ನಂಬರ್ 24 ನ್ನು ಪಡೆದಿರುತ್ತಾರೆ. ಬ್ಯಾಂಕಿನವರ ಸೂಚನೆ ಮೇರೆಗೆಮಲ್ಲಿಕಾರ್ಜುನ ತೋಟದ 2012ರ ಫೆಬ್ರುವರಿ 1ರಂದು35 ತಿಂಗಳ ಅವಧಿಗೆ ₹ 5000 ಮುದ್ದತಿ ಠೇವು ಮಾಡಿರುತ್ತಾರೆ. ಅವಧಿ ಮುಗಿದ ನಂತರ ಕಾಲಕಾಲಕ್ಕೆ ಠೇವಣಿ ನವೀಕರಣ ಮಾಡಿರುತ್ತಾರೆ.

ಠೇವಣಿ ಮೊತ್ತ ₹10428.54 ಆಗಿದ್ದಾಗ ಕಳೆದ ಜನವರಿ 1ರಂದು ಅದರಲ್ಲಿನ ₹4843ನ್ನು ಮಾಹಿತಿ ನೀಡದೇ ಬ್ಯಾಂಕ್‌ನವರು ಮುರಿದುಕೊಂಡಿದ್ದನ್ನು ಗಮನಿಸಿದ ಮಲ್ಲಿಕಾರ್ಜುನ ಆ ಬಗ್ಗೆ ವಿಚಾರಿಸುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ
ಬ್ಯಾಂಕ್‌ನವರು 2018 ರಲ್ಲಿ ನಿಮ್ಮ ಲಾಕರ್ ಜಾಮ್ ಆಗಿತ್ತು. ಅದರ ದುರಸ್ತಿ ಖರ್ಚನ್ನು ಮುರಿದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಅದನ್ನೊಪ್ಪದ ಮಲ್ಲಿಕಾರ್ಜುನ ತಮ್ಮ ಹಣ ಕೊಡುವಂತೆ ನೋಟೀಸು ಕಳಿಸಿದ್ದಾರೆ.

ADVERTISEMENT

ಬ್ಯಾಂಕಿನಿಂದ ಅದಕ್ಕೆ ಉತ್ತರ ಬಾರದಿದ್ದಾಗ ಕಳೆದ ಫೆಬ್ರವರಿ 17ರಂದು ಜಿಲ್ಲಾ ಗಾಹಕರ ಆಯೋಗದಲ್ಲಿ ದೂರು ದಾಖಲಿಸುತ್ತಾರೆ. ದೂರು ಸ್ವೀಕರಿಸಿದ ಆಯೋಗ ಎದುರುದಾರರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸು ಕಳಿಸಿ ಸಾಕಷ್ಟು ಅವಕಾಶ ನೀಡಿದರೂ ಅವರು ವಿಚಾರಣೆಗೆ ಹಾಜರಾಗಿರುವುದಿಲ್ಲ.

ದೂರುದಾರರು ಸರಿಯಾಗಿ ಲಾಕರ್ ಬಾಡಿಗೆ ಕಟ್ಟುತ್ತಿದ್ದಾರೆ. ಲಾಕರ್‌ನ ಒಂದು ಕೀ ಗ್ರಾಹಕರಿಗೆ ಕೊಟ್ಟಿದ್ದರೆ, ಇನ್ನೊಂದು ಕೀ ಎದುರುದಾರರ ಹತ್ತಿರವೇ ಇರುತ್ತದೆ. ಇಬ್ಬರೂ ಸೇರಿ ಕೀ ತೆಗೆದಾಗ ಮಾತ್ರ ಲಾಕರ್ ತೆರೆಯುತ್ತದೆ. ಹೀಗಿರುವಾಗ ಲಾಕರ್ ಜಾಮ್ ಆದರೆ ಗ್ರಾಹಕ ಹೇಗೆ ಹೊಣೆಗಾರನಾಗುತ್ತಾನೆ? ಕಾರಣ ಲಾಕರ್ ನಿರ್ವಹಣೆ- ದುರಸ್ತಿ ಜವಾಬ್ದಾರಿ ಎದುರುದಾರ ಬ್ಯಾಂಕಿನದೇ ಇರುತ್ತದೆ ಎಂದು ನಿರ್ಧರಿಸಿದ ಆಯೋಗ ಎದುರುದಾರರ ಹಣ ₹ 4843 ಮುರಿದುಕೊಂಡ ದಿನದಿಂದ ಶೇ 11.25ರಷ್ಟು ಬಡ್ಡಿ ಸೇರಿಸಿ ಎರಡು ಕಂತುಗಳಲ್ಲಿ ಮರಳಿಸಬೇಕು. ತಪ್ಪಿದಲ್ಲಿ ಶೇ ₹2ರಂತೆ ಹೆಚ್ಚಿನ ಬಡ್ಡಿ ಸೇರಿಸಿಕೊಡಬೇಕು. ಗ್ರಾಹಕರಿಗೆ ಆಗಿರುವ ಮಾನಸಿಕ ವ್ಯಥೆಗೆ ₹10 ಸಾವಿರ ಹಾಗೂ ದಾವೆಯ ವೆಚ್ಚ ₹2000 ಭರಿಸುವಂತೆ ಅಧ್ಯಕ್ಷೆ ಕೆ.ಶಾರದಾ, ಸದಸ್ಯರಾದ ರಂಗನಗೌಡ ದಂಡಣ್ಣವರ ಹಾಗೂ ಸುಮಂಗಲಾ ಹದ್ಲಿ ಅವರಿದ್ದ ಪೀಠ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.