
ಅಮೀನಗಡ: ನಾಡಿನ ಇತಿಹಾಸ ಪರಂಪರೆಯಲ್ಲಿ ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅಪಾರವಾಗಿದೆ ಎಂದು ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಟ್ಟಣದ ಪ್ರಭುಶಂಕರೇಶ್ವರ ಅನುಭವ ಮಂಟಪದಲ್ಲಿ ಮಂಗಳವಾರ ನಡೆದ ಪ್ರಭು ಶಂಕರೇಶ್ವರ ಗಚ್ಚಿನಮಠದ ಲಿಂ. ರಾಜಗುರು ಪ್ರಭುರಾಜೇಂದ್ರ ಸ್ವಾಮೀಜಿ ಜಯಂತ್ಯುತ್ಸವ, ಶಂಕರರಾಜೇಂದ್ರ ಸ್ವಾಮೀಜಿ 28ನೇ ಪಟ್ಟಾಧಿಕಾರ ಮಹೋತ್ಸವ ಹಾಗೂ ಪ್ರಭುದೇವರ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಠಗಳು ಸಾಮಾಜಿಕ ಹಾಗೂ ಧಾರ್ಮಿಕ ಜಾಗೃತಿಯ ಜೊತೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಶಿಕ್ಷಣ ಕ್ರಾಂತಿಗೆ ಮುಂದಾದವು. ಸಂಸ್ಕಾರ, ಅಧ್ಯಾತ್ಮ ಹಾಗೂ ನೈತಿಕ ಮೌಲ್ಯಗಳ ಉಳಿವಿಗೆ ಪ್ರವಚನಗಳು ನೆರವಾಗುತ್ತವೆ. ಇಂದಿನ ಒತ್ತಡದ ಬದುಕಿನಲ್ಲಿ ಪುರಾಣ ಪ್ರವಚನ ನೆಮ್ಮದಿ ನೀಡುತ್ತವೆ’ ಎಂದರು.
ತುಲಾಭಾರ: 60 ವಸಂತಗಳನ್ನು ಪೂರೈಸಿದ ಖೇಡಗಿ ವಿರಕ್ತ ಮಠದ ಶಿವಬಸವರಾಜೇಂದ್ರ ಸ್ವಾಮೀಜಿ ಅವರಿಗೆ ತುಲಾಭಾರ ನೆರವೇರಿಸಲಾಯಿತು.
ಸಿಂಚನ ಕೃತಿ ಬಿಡುಗಡೆ: ಶಿಕ್ಷಕ ಎಚ್.ಟಿ ರಂಗಾಪುರ ರಚಿಸಿದ ‘ಸಿಂಚನ ’ಕೃತಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.
ಗಚ್ಚಿನ ಮಠದ ಶಂಕರರಾಜೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಉಪ್ಪಿನಬೆಟಗೇರಿ ಕುಮಾರ ವಿರೂಪಾಕ್ಷ ಸ್ವಾಮೀಜಿ, ಕಮತಗಿಯ ಹುಚ್ಚೇಶ್ವರ ಸ್ವಾಮೀಜಿ, ಮುನವಳ್ಳಿ ಮುರಗೇಂದ್ರ ಸ್ವಾಮೀಜಿ, ಕನಕಗಿರಿ ವಿರಕ್ತ ಮಠದ ಚೆನ್ನಮಲ್ಲ ಸ್ವಾಮೀಜಿ, ಜಂಬಗಿ ಅಡವಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೈಲಾಸ ಲಿಂಗ ಶಿವಾಚಾರ್ಯ ಸ್ವಾಮೀಜಿ, ಹುನಗುಂದದ ಅಮರೇಶ್ವರ ದೇವರು, ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಸಿದ್ಧರಾಮ ಮನಹಳ್ಳಿ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಂದ್ರಲಿಂಗಪ್ಪ ಬಸರಕೋಡ, ಆರ್.ಜಿ. ಸನ್ನಿ, ಎಚ್. ಟಿ ರಂಗಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.